ವನ್ಯಜೀವಿ ಪ್ರವಾಸೋದ್ಯಮ ಎನ್ನುವುದು ವಿನೋದ ಅಥವಾ ಮನರಂಜನೆ ಮಾತ್ರವಲ್ಲ. ವನ್ಯಮೃಗಗಳ ನೈಸರ್ಗಿಕ ಆವಾಸಸ್ಥಾನದಲ್ಲಿ ನಾವಿದ್ದೇವೆ ಎಂಬುದನ್ನು ಪ್ರವಾಸಿಗರು ಮೊದಲು ಅರಿಯಬೇಕಿದೆ. ಆನೆಗಳಾಗಲಿ ಅಥವಾ ಇನ್ಯಾವುದೇ ಪ್ರಾಣಿಗಳಾಗಲಿ ಅವುಗಳನ್ನು ಮನುಷ್ಯ ಎಷ್ಟೇ ಪಳಗಿಸಿದ್ದರೂ, ತರಬೇತಿ ನೀಡಿದ್ದರೂ ಅವುಗಳ ಮೂಲ ಪ್ರಾಣಿಸಹಜ ಸ್ವಭಾವವನ್ನು ನೂರಕ್ಕೆ ನೂರರಷ್ಟು ಅರ್ಥಮಾಡಿಕೊಳ್ಳುವುದು ಅಥವಾ ನಿಯಂತ್ರಿಸುವುದು ಅಸಾಧ್ಯದ ಮಾತು. ವನ್ಯಜೀವಿಗಳ ಪ್ರತಿಕ್ರಿಯೆಗಳು ಯಾವುದೇ ಕ್ಷಣದಲ್ಲಿ ಅನಿರೀಕ್ಷಿತವಾಗಿ ಬದಲಾಗಬಹುದು. ಪ್ರಾಣಿಗಳಲ್ಲಿ ಹಾರ್ಮೋನ್‌ಗಳ ಏರುಪೇರು, ಸಣ್ಣಪುಟ್ಟ ಪ್ರಚೋದನೆಗಳು ಅಥವಾ ಪರಸ್ಪರರ ಮೇಲಿನ ಪ್ರಭುತ್ವದ ಹಠವು ಕ್ಷಣಾರ್ಧದಲ್ಲಿ ಅವುಗಳನ್ನು ಹಿಂಸಾತ್ಮಕವಾಗಿಸಬಲ್ಲದು. ಆ ಕ್ಷಣಕ್ಕೆ ಅವುಗಳ ಮಾನಸಿಕ ಸ್ಥಿತಿಯ ಬಗ್ಗೆ ಯಾರಿಗೂ ತಿಳಿದಿರುವುದಿಲ್ಲ. ಇದನ್ನು ಅರಿಯದೆ ಪ್ರವಾಸಿಗರು ಪ್ರಾಣಿಗಳ ಅತ್ಯಂತ ಹತ್ತಿರಕ್ಕೆ ಹೋಗುವುದು ತಪ್ಪು. ಆನೆಗಳ ಸೊಂಡಿಲು ಮುಟ್ಟುವುದು, ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುವುದು ಅತ್ಯಂತ ಅಪಾಯಕಾರಿ.