

ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ ಕಾರ್ಯಕರ್ತರು ವಿದೇಶಿ ಸಂಸ್ಥೆಗಳಿಂದ ಹಾಗೂ ದೇಶವಿರೋಧಿ ಸಂಘಟನೆಗಳಿಂದ ಹಣ ಪಡೆಯುತ್ತಿದ್ದಾರೆ (Foreign Funding Row) ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ತಿರುಗೇಟು ಎಂಬಂತೆ ಸಿಜೆಪಿ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಯಾವುದೇ ಆಧಾರವಿಲ್ಲದೆ ಆರೋಪ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಭಾರತದ ವಿರುದ್ಧ ನಕಲಿ ನಿರೂಪಣೆ ಸೃಷ್ಟಿಸಲು ವಿದೇಶಿ ಎನ್‌ಜಿಒಗಳು ಹಾಗೂ ಡೀಪ್ ಸ್ಟೇಟ್ ಕಾರ್ಯಾಚರಣೆ ನಡೆಸುವವರು ಹಣ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದರು.
ಸಿಜೆಪಿ ಪ್ರಚಾರದೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿಗಳು ದೇಶದ ಒಳಗಿನ ಮತ್ತು ಹೊರಗಿನ ದೇಶವಿರೋಧಿ ಸಂಸ್ಥೆಗಳಿಂದ ಹಣ ಪಡೆಯುತ್ತಿದ್ದಾರೆ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ ಎಂದಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ನಿರ್ದಿಷ್ಟವಾಗಿ ಕೆಲವು ವ್ಯಕ್ತಿಗಳ ಹೆಸರುಗಳನ್ನು ಉಲ್ಲೇಖಿಸಿದರು. ಸಿಜೆಪಿ ನಾಯಕ ಅಭಿಜೀತ್ ದೀಪ್ಕೆ ಅಮೆರಿಕ ಮೂಲದವರಿಂದ ಹಣ ಪಡೆಯುತ್ತಿದ್ದರೆ, ಆಶುತೋಷ್ ರಂಕಾ ಪಾಕಿಸ್ತಾನಿ ರಾಜಕಾರಣಿಗಳಿಂದ ಹಣ ಪಡೆಯುತ್ತಿದ್ದಾರೆ ಎಂದು ಆರೋಪ ಮಾಡಿದರು.
ಜಿತೇಂದ್ರ ಸಿಂಗ್ ಅವರ ಆರೋಪಗಳನ್ನು ಖಂಡಿಸಿರುವ ಕಾಕ್ರೋಚ್ ಜನತಾ ಪಾರ್ಟಿ, ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಿರುಗೇಟು ನೀಡಿದೆ. ಕೇಂದ್ರ ಸಚಿವರೊಬ್ಬರು ಏನೇ ಆಧಾರರಹಿತ ಮಾತುಗಳನ್ನು ಆಡಿ ನುಣುಚಿಕೊಳ್ಳಬಹುದು ಎಂಬುದು ದೇಶದ ನಾಚಿಕೆಗೇಡಿನ ವಾಸ್ತವ. ಉನ್ನತ ಸಾಂವಿಧಾನಿಕ ಹುದ್ದೆಗಳಲ್ಲಿ ಇರುವವರ ಮಾತುಗಳಿಗೆ ಇತ್ತೀಚೆಗೆ ಬೆಲೆಯೇ ಇಲ್ಲದಂತಾಗಿದೆ ಎಂದು ಸಿಜೆಪಿ ಕಟುವಾಗಿ ಟೀಕಿಸಿದೆ.
ಈ ವಿವಾದದ ಬೆನ್ನಲ್ಲೇ ಕಾಂಗ್ರೆಸ್ ವಿರುದ್ಧದ ವಿದೇಶಿ ಧನಸಹಾಯ ಆರೋಪಗಳಿಗೆ ತಿರುಗೇಟು ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ಕೇಂದ್ರ ಸರ್ಕಾರದ ಕಾರ್ಯಕ್ಷಮತೆಯನ್ನು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಅಥವಾ ಸಿಜೆಪಿಗೆ ವಿದೇಶಿ ಏಜೆನ್ಸಿಗಳಿಂದ ಹಣ ಬರುತ್ತಿದೆ ಎಂದು ಗೃಹ ಸಚಿವರು ಸೇರಿದಂತೆ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ, ಕನಿಷ್ಠ ಒಂದು ತುಂಡು ಕಾಗದದಷ್ಟು ಸಾಕ್ಷ್ಯವನ್ನೂ ನೀಡಲು ಅವರಿಂದ ಸಾಧ್ಯವಾಗಿಲ್ಲ. ಇದು ಕೇಂದ್ರ ಗೃಹ ಸಚಿವ ಅಮಿತ್ ಷಾ, ವಿದೇಶಾಂಗ ಸಚಿವ ಎಸ್. ಜೈಶಂಕರ್, ಗುಪ್ತಚರ ಇಲಾಖೆ ಮತ್ತು ರಾ (RAW) ಸಂಸ್ಥೆಗಳ ಸಾಮರ್ಥ್ಯವನ್ನು ಪ್ರಶ್ನಿಸುವಂತಿದೆ. ಸಾಕ್ಷ್ಯಗಳೇ ಇಲ್ಲದೆ ಇಂತಹ ಹೇಳಿಕೆಗಳನ್ನು ನೀಡುತ್ತಿರುವುದಾದರು ಹೇಗೆ? ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ಅವರ ಬಹಿರಂಗ ಚರ್ಚೆಯ ಆಹ್ವಾನವನ್ನು ಬೆಂಬಲಿಸಿದ ಖರ್ಗೆ, ಕಾಂಗ್ರೆಸ್, ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಸಿಗುವ ವಿದೇಶಿ ಧನಸಹಾಯದ ಕುರಿತು ಪ್ರಧಾನಿ ಮೋದಿ ಬಹಿರಂಗ ಚರ್ಚೆಗೆ ಬರಲಿ ಹಾಗೂ ಈ ಚರ್ಚೆಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರೇ ಮಧ್ಯಸ್ಥಿಕೆ ವಹಿಸಲಿ ಎಂದು ಸವಾಲೆಸೆದಿದ್ದಾರೆ(ಏಜೆನ್ಸೀಸ್).