ಮಳೆ ಕೊರತೆ, ತೀವ್ರ ಬಿಸಿಲು: ಎಲ್​ನಿನೋ ಅಪಾಯದಲ್ಲಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ; ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ! El Nino

El Nino
ಮಳೆ ಕೊರತೆ, ತೀವ್ರ ಬಿಸಿಲು: ಎಲ್​ನಿನೋ ಅಪಾಯದಲ್ಲಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ; ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ! El Nino
Published on: 

ನವದೆಹಲಿ: ಈ ವರ್ಷ ವಾಡಿಕೆಗಿಂತಲೂ ಕಡಿಮೆ, ಸಮಯಕ್ಕೆ ಸರಿಯಾಗಿ ಸುರಿಯದ ಮಳೆಯಿಂದ ದೇಶದ ಹವಾಮಾನದ ಚಿತ್ರಣ ಸಂಪೂರ್ಣವಾಗಿ ಬದಲಾಗಿದ್ದು, ಚಳಿಗಾಲದಲ್ಲೂ ಸೆಕೆ ಕಾಡಲಾರಂಭಿಸಿರುವುದೇ ಇದಕ್ಕೆ ಜ್ವಲಂತ ಸಾಕ್ಷಿ. ಎಲ್ ನಿನೊ ಪರಿಣಾಮದಿಂದ ಭಾರತ ಸೇರಿದಂತೆ ದಕ್ಷಿಣ ಏಷ್ಯಾದ ಹಲವು ದೇಶಗಳಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಇದೀಗ ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿದೆ.

ಎಲ್ ನಿನೊ ಹವಾಮಾನ ವೈಪರೀತ್ಯ

ತೀವ್ರ ಬಿಸಿಲು, ಮಳೆಯ ಕೊರತೆ, ಡೆಂಗ್ಯೂ ಮತ್ತು ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳ ಹರಡುವಿಕೆ, ಆಹಾರದ ಅಭಾವ ಹಾಗೂ ಆರೋಗ್ಯ ಸೇವೆಗಳ ವ್ಯತ್ಯಯದ ಆತಂಕ ಎದುರಾಗಲಿದ್ದು, ಈ ಹಿನ್ನೆಲೆಯಲ್ಲಿ ಡಬ್ಲ್ಯೂಎಚ್​ಒ ತನ್ನ ತುರ್ತು ಸಿದ್ಧತಾ ಕ್ರಮವನ್ನು ಅತ್ಯುನ್ನತ ಹಂತವಾದ ಗ್ರೇಡ್ ಮೂರಕ್ಕೆ ಏರಿಸಿದೆ. ಈ ನಿಟ್ಟಿನಲ್ಲಿ, ಅಪಾಯದ ಹಂತದಲ್ಲಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಇದೆ ಎಂಬುದನ್ನು ತಿಳಿಸಿದೆ.

ಎಲ್ ನಿನೊ ಹವಾಮಾನ ವಿದ್ಯಮಾನದಿಂದ ಜಾಗತಿಕವಾಗಿ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ರವಾನಿಸಿದೆ. ಈ ಹಿನ್ನೆಲೆಯಲ್ಲಿ ಅತ್ಯುನ್ನತ ತುರ್ತು ಪ್ರತಿಕ್ರಿಯೆ ವಿಭಾಗವಾದ ಗ್ರೇಡ್ 3 ಅನ್ನು ಘೋಷಿಸಿದೆ. ತೀವ್ರ ಬಿಸಿಲು, ಬರಗಾಲ, ಸಾಂಕ್ರಾಮಿಕ ರೋಗಗಳ ಹರಡುವಿಕೆ, ಆಹಾರದ ಕೊರತೆ ಮತ್ತು ಆರೋಗ್ಯ ಸೇವೆಗಳಿಗೆ ಅಡ್ಡಿಯಾಗುವ ಸಾಧ್ಯತೆಯನ್ನು ಸಂಸ್ಥೆ ಗುರುತಿಸಿದೆ.

ಅಪಾಯದ ಪಟ್ಟಿ

ನವೆಂಬರ್ 2ರಂದು ಬಿಡುಗಡೆ ಮಾಡಿರುವ ಸಿದ್ಧತೆ ಮತ್ತು ಪ್ರತಿಕ್ರಿಯೆ ಯೋಜನೆಯಲ್ಲಿ WHO ಈ ಆತಂಕ ವ್ಯಕ್ತಪಡಿಸಿದೆ. ಸೆಪ್ಟೆಂಬರ್ 5ರ ಜಾಗತಿಕ ಆರೋಗ್ಯ ಅಪಾಯದ ಮೌಲ್ಯಮಾಪನದಲ್ಲಿ ಭಾರತವನ್ನು ಹೆಚ್ಚಿನ ಅಥವಾ ಅತಿ ಅಧಿಕ ಅಪಾಯವಿರುವ ದೇಶಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ದಕ್ಷಿಣ ಏಷ್ಯಾದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಮತ್ತು ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಬಾಂಗ್ಲಾದೇಶ, ಭೂತಾನ್, ನೇಪಾಳ, ಶ್ರೀಲಂಕಾ ಮತ್ತು ಮಾಲ್ಡೀವ್ಸ್‌ ಕೂಡ ಅಪಾಯದ ಪಟ್ಟಿಯಲ್ಲಿವೆ.

ಹವಾಮಾನದಲ್ಲಿನ ಬದಲಾವಣೆಗಳು ರೋಗಗಳ ಹರಡುವಿಕೆಗೆ ಅನುಕೂಲಕರ ವಾತಾವರಣ ಸೃಷ್ಟಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ತೀವ್ರ ಬಿಸಿಲಿನಿಂದ ನಿರ್ಜಲೀಕರಣ, ಅಧಿಕ ಉಷ್ಣಾಂಶಕ್ಕೆ ಸ್ಟ್ರೋಕ್‌ನಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೃದಯ, ಶ್ವಾಸಕೋಶ, ಮೂತ್ರಪಿಂಡದ ಸಮಸ್ಯೆ ಹಾಗೂ ಮಧುಮೇಹ ಇರುವವರ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದು ಎಂದಿದೆ.

ಅಪೌಷ್ಟಿಕತೆಯ ಅಪಾಯ

ಮಳೆ ಮತ್ತು ತಾಪಮಾನದಲ್ಲಿನ ಬದಲಾವಣೆಯಿಂದ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗಿ ಡೆಂಗ್ಯೂ ಹಾಗೂ ಮಲೇರಿಯಾ ಹರಡುವ ಅಪಾಯವೂ ಇದೆ. ವಿಶೇಷವಾಗಿ ಈಶಾನ್ಯ ಭಾರತದ ಕೆಲವು ಭಾಗಗಳಲ್ಲಿ ಮಲೇರಿಯಾ ಆತಂಕವಿದೆ. ಕಲುಷಿತ ನೀರು ಮತ್ತು ಒಳಚರಂಡಿಯ ಸಂಪರ್ಕದಿಂದ ಹರಡುವ ಲೆಪ್ಟೊಸ್ಪೈರೋಸಿಸ್‌ನಂತಹ ಕಾಯಿಲೆಗಳ ಬಗ್ಗೆಯೂ ಎಚ್ಚರಿಕೆ ನೀಡಲಾಗಿದೆ.

ಮಳೆಯ ಕೊರತೆಯಿಂದ ಕೃಷಿ ಉತ್ಪಾದನೆ ಮತ್ತು ಆಹಾರ ಲಭ್ಯತೆ ಕುಸಿಯುವ ಸಾಧ್ಯತೆಯಿದೆ. ಇದರಿಂದ ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಲ್ಲಿ ಅಪೌಷ್ಟಿಕತೆಯ ಅಪಾಯ ಹೆಚ್ಚಬಹುದು. ತೀವ್ರ ಹವಾಮಾನ ಪರಿಸ್ಥಿತಿಗಳು ಆಸ್ಪತ್ರೆಗಳ ಕಾರ್ಯನಿರ್ವಹಣೆ ಹಾಗೂ ಔಷಧಗಳ ಪೂರೈಕೆಗೂ ಅಡ್ಡಿಯಾಗಬಹುದು ಎಂದು ವರದಿ ತಿಳಿಸಿದೆ.

ಮಕ್ಕಳು, ಗರ್ಭಿಣಿಯರು, ವೃದ್ಧರು, ವಿಶೇಷ ಚೇತನರು ಹಾಗೂ ಈಗಾಗಲೇ ಆರೋಗ್ಯ ಸಮಸ್ಯೆ ಹೊಂದಿರುವವರು ಹೆಚ್ಚಿನ ಅಪಾಯದಲ್ಲಿದ್ದಾರೆ. ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಮತ್ತು ಬೀದಿ ವ್ಯಾಪಾರಿಗಳಂತಹ ಹೊರಾಂಗಣದಲ್ಲಿ ಕೆಲಸ ಮಾಡುವವರಿಗೂ ಬಿಸಿಲಿನ ಪರಿಣಾಮ ಹೆಚ್ಚಾಗಿ ತಟ್ಟಬಹುದು.

Also Read
ಯಾರೇನೂ ಬೇಕಾಬಿಟ್ಟಿ ಆಡಿಲ್ಲ... ಕೋಚ್​ ಗಂಭೀರ್​ ಮಾತಿಗೆ ಕ್ಯಾಪ್ಟನ್​ ಅಯ್ಯರ್​ ಖಡಕ್​ ತಿರುಗೇಟು? | Shreyas Iyer
El Nino

ಈ ಹಿನ್ನೆಲೆಯಲ್ಲಿ ರೋಗಗಳ ಮೇಲ್ವಿಚಾರಣೆ ಮತ್ತು ಮುನ್ನೆಚ್ಚರಿಕೆ ವ್ಯವಸ್ಥೆ ಬಲಪಡಿಸುವುದು, ಅಗತ್ಯ ಔಷಧಗಳ ಲಭ್ಯತೆ ಖಚಿತಪಡಿಸುವುದು ಹಾಗೂ ಆಸ್ಪತ್ರೆಗಳ ಕಾರ್ಯನಿರ್ವಹಣೆಗೆ ಅಡ್ಡಿಯಾಗದಂತೆ ಸಿದ್ಧತೆ ಮಾಡಿಕೊಳ್ಳುವಂತೆ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ. ಹವಾಮಾನ, ಆರೋಗ್ಯ ಮತ್ತು ವಿಪತ್ತು ನಿರ್ವಹಣಾ ಇಲಾಖೆಗಳ ನಡುವೆ ಸಮನ್ವಯ ಹೆಚ್ಚಿಸುವುದಕ್ಕೂ ಒತ್ತು ನೀಡಿದೆ.

ಎಲ್ ನಿನೊ ಕಾಣಿಸಿಕೊಂಡ ಮಾತ್ರಕ್ಕೆ ಮುಂಗಾರು ವಿಫಲವಾಗುತ್ತದೆ ಎಂದರ್ಥವಲ್ಲ. ಅದರ ತೀವ್ರತೆ, ಸಮಯ ಹಾಗೂ ಹಿಂದೂ ಮಹಾಸಾಗರದ ದ್ವಿಧ್ರುವಿ (Indian Ocean Dipole) ಸೇರಿದಂತೆ ಇತರ ಹವಾಮಾನ ಅಂಶಗಳೂ ಮಳೆಯ ರಚನೆಯ ಮೇಲೆ ಪರಿಣಾಮ ಬೀರುತ್ತವೆ ಎಂದು ವಿವರಿಸಲಾಗಿದೆ,(ಏಜೆನ್ಸೀಸ್).