ಸಂಪಾದಕೀಯ: ಸುಪ್ರೀಂ ಚಾಟಿ ಸಕಾಲಿಕ

ಸಂಪಾದಕೀಯ: ಸುಪ್ರೀಂ ಚಾಟಿ ಸಕಾಲಿಕ
ಸಂಪಾದಕೀಯ: ಸುಪ್ರೀಂ ಚಾಟಿ ಸಕಾಲಿಕ
Published on
ಸಂಪಾದಕೀಯ: ದೇಶದ ಭವಿಷ್ಯದ ಆಧಾರ ಸ್ತಂಭಗಳಾದ ಮಕ್ಕಳ ರಕ್ಷಣೆಯ ವಿಷಯದಲ್ಲಿ ಸುಪ್ರೀಂ ಕೋರ್ಟ್ ಇಂದು ನೀಡಿರುವ ನಿರ್ದೇಶನಗಳು ಅತ್ಯಂತ ಸಕಾಲಿಕವಾಗಿವೆ ಮತ್ತು ಎಲ್ಲರ ಕಣ್ಣು ತೆರೆಸುವಂತಿವೆ. ‘ದೇಶಾದ್ಯಂತ ಮಕ್ಕಳು ನಾಪತ್ತೆಯಾಗುತ್ತಿರುವ ಪ್ರಕರಣಗಳು ಕೇವಲ ಕಾಕತಾಳೀಯವಲ್ಲ, ಇದರ ಹಿಂದೆ ರಾಷ್ಟ್ರಮಟ್ಟದ ವ್ಯವಸ್ಥಿತ ಜಾಲವಿರುವ ಸಾಧ್ಯತೆಯಿದೆ’ ಎಂದು ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿರುವ ಆತಂಕ, ನಾವು ಜೀವಿಸುತ್ತಿರುವ ಸಮಾಜದ ಒಳಗೇ ಅವಿತಿರುವ ಕರಾಳ ಮುಖವನ್ನು ಅನಾವರಣಗೊಳಿಸಿದೆ. ಕೇವಲ ರಾಜ್ಯಮಟ್ಟದ ಸಣ್ಣಪುಟ್ಟ ಗ್ಯಾಂಗ್​ಗಳ ಹಾವಳಿಯೆಂದು ಇದನ್ನು ಅಲಕ್ಷಿಸುವಂತಿಲ್ಲ; ಇದರ ಹಿಂದೆ ಬಲಿಷ್ಠ ಅಂತಾರಾಜ್ಯ ಮಾಫಿಯಾಗಳ ಕೈವಾಡವಿರುವ ಶಂಕೆ ಇರುವುದರಿಂದ ಸಮಗ್ರ ತನಿಖೆಯ ಅವಶ್ಯಕತೆ ಇದೆ.
ಮಕ್ಕಳ ಕಳ್ಳಸಾಗಣೆಯನ್ನು ಕೇವಲ ಒಂದು ಅಪರಾಧ ಪ್ರಕರಣವೆಂದು ನಿರ್ಲಕ್ಷಿಸುವಂತಿಲ್ಲ. ಏಕೆಂದರೆ ಅದು ಒಂದು ವ್ಯವಸ್ಥಿತ ಉದ್ಯಮವಾಗಿ ಬೆಳೆಯುತ್ತಿದೆ ಎಂಬ ಕಹಿ ಸತ್ಯವನ್ನು ಅಂಕಿಅಂಶಗಳು ಸಾರುತ್ತಿವೆ. ಪ್ರತಿದಿನ ನೂರಾರು ಪೋಷಕರು ತಮ್ಮ ಮಕ್ಕಳನ್ನು ಕಳೆದುಕೊಂಡು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಪತ್ತೆಯಾದ ಮಕ್ಕಳಲ್ಲಿ ಹೆಚ್ಚಿನವರು ಅತಂತ್ರ ಸ್ಥಿತಿಯಲ್ಲಿರುವುದು ಅಥವಾ ದೈಹಿಕ-ಮಾನಸಿಕ ದೌರ್ಜನ್ಯಕ್ಕೆ ಒಳಗಾಗಿರುವುದು ಕಂಡುಬಂದಿದೆ. ಸುಪ್ರೀಂ ಕೋರ್ಟ್ ಸೂಚಿಸಿದಂತೆ, ರಕ್ಷಿಸಲ್ಪಟ್ಟ ಮಕ್ಕಳನ್ನು ಸರಿಯಾದ ರೀತಿಯಲ್ಲಿ ಸಂದರ್ಶಿಸಿ ಮಾಹಿತಿ ಪಡೆಯುವುದು ಅತ್ಯಗತ್ಯ. ಅವರಿಂದ ಸಿಗುವ ಸಣ್ಣ ಸುಳಿವು ಕೂಡ ದೊಡ್ಡ ಮಟ್ಟದ ಮಾನವ ಕಳ್ಳಸಾಗಣೆ ಜಾಲವನ್ನು ಭೇದಿಸಲು ಸಹಕಾರಿಯಾಗಬಹುದು. ಈ ಮಕ್ಕಳ ಹೇಳಿಕೆಗಳಿಂದ ಈ ಮಾಫಿಯಾ ಕಾರ್ಯಾಚರಿಸುವ ವಿಧಾನವನ್ನು ಪತ್ತೆಹಚ್ಚಲು ಕೂಡ ಸಾಧ್ಯವಾಗಬಹುದು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಮನ್ವಯದ ಕೊರತೆಯೇ ಈ ಮಾಫಿಯಾಗಳಿಗೆ ವರದಾನವಾಗುತ್ತಿದೆ. ಅನೇಕ ರಾಜ್ಯಗಳು ನಾಪತ್ತೆಯಾದ ಮಕ್ಕಳ ಕುರಿತ ಸಮಗ್ರ ದತ್ತಾಂಶವನ್ನು ನೀಡಲು ಮೀನಮೇಷ ಎಣಿಸುತ್ತಿರುವುದು ದುರದೃಷ್ಟಕರ. ಈ ಹಿನ್ನೆಲೆಯಲ್ಲಿ ದತ್ತಾಂಶ ನೀಡದ ರಾಜ್ಯಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಕೋರ್ಟ್ ನೀಡಿರುವ ಎಚ್ಚರಿಕೆ ಶ್ಲಾಘನೀಯ. ಕೇವಲ ‘ಮಿಷನ್ ವಾತ್ಸಲ್ಯ’ದಂತಹ ಪೋರ್ಟಲ್​ಗಳನ್ನು ಸೃಷ್ಟಿಸಿದರೆ ಸಾಲದು, ಅಲ್ಲಿರುವ ಮಾಹಿತಿ ಪ್ರತಿ ಪೊಲೀಸ್ ಠಾಣೆಯ ಮಟ್ಟದಲ್ಲೂ ವಿನಿಮಯವಾಗಬೇಕು. ಈ ಜಾಲವನ್ನು ಭೇದಿಸುವಲ್ಲಿ ರಾಜ್ಯಗಳ ನಡುವಿನ ಗಡಿಗಳು ಅಡ್ಡಿಯಾಗಬಾರದು.
ಪೊಲೀಸ್ ವ್ಯವಸ್ಥೆಯಲ್ಲಿ ವಿಶೇಷ ಮಕ್ಕಳ ಘಟಕಗಳು ಇನ್ನಷ್ಟು ಬಲಗೊಳ್ಳಬೇಕಿದೆ. ಕೇವಲ ದೂರು ದಾಖಲಿಸಿಕೊಂಡು ಕೈತೊಳೆದುಕೊಳ್ಳುವ ಪ್ರವೃತ್ತಿ ಸರಿಯಲ್ಲ. ಪ್ರತಿ ಜಿಲ್ಲೆಯಲ್ಲೂ ನೋಡಲ್ ಅಧಿಕಾರಿಗಳ ನೇಮಕ ಮತ್ತು ಅವರ ಕಾರ್ಯವೈಖರಿಯ ಮೇಲೆ ನಿರಂತರ ನಿಗಾ ಇಡುವುದು ಅನಿವಾರ್ಯ. ಸರ್ಕಾರಗಳು ಈ ವಿಷಯವನ್ನು ರಾಜಕೀಯ ಹಿತಾಸಕ್ತಿಗಳಿಗಿಂತ ಮಿಗಿಲಾಗಿ ಮಾನವೀಯ ನೆಲೆಗಟ್ಟಿನಲ್ಲಿ ನೋಡಬೇಕಿದೆ. ಸುಪ್ರೀಂ ಕೋರ್ಟ್ ನೀಡಿರುವ ಗಡುವಿನೊಳಗೆ ಕೇಂದ್ರ ಸರ್ಕಾರ ಒಂದು ಸ್ಪಷ್ಟವಾದ ರಾಷ್ಟ್ರೀಯ ಕಾರ್ಯ ವಿಧಾನವನ್ನು ರೂಪಿಸಿ, ಈ ಸಾಮಾಜಿಕ ಪಿಡುಗನ್ನು ಬೇರುಸಹಿತ ಕಿತ್ತೊಗೆಯುವ ಸಂಕಲ್ಪ ಮಾಡಬೇಕಿದೆ. ಪ್ರತಿಯೊಂದು ಮಗುವಿನ ಕಣ್ಮರೆಯ ಹಿಂದೆಯೂ ಒಂದೊಂದು ಕುಟುಂಬದ ನೋವು, ಆತಂಕದ ಕಥೆ ಇದೆ. ಮಕ್ಕಳು ದೇಶದ ಭವಿಷ್ಯ. ಅವರ ಸುರಕ್ಷತೆಯನ್ನು ಖಾತ್ರಿಪಡಿಸುವುದು ಕೇವಲ ಸರ್ಕಾರದ ಕರ್ತವ್ಯವಲ್ಲ, ಜನರ ನೈತಿಕ ಜವಾಬ್ದಾರಿಯೂ ಹೌದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net