ಸಂಪಾದಕೀಯ: ನೈಜ ಸಾಧಕರಿಗೆ ಸಂದ ಗೌರವ

ಸಂಪಾದಕೀಯ: ನೈಜ ಸಾಧಕರಿಗೆ ಸಂದ ಗೌರವ
ಸಂಪಾದಕೀಯ: ನೈಜ ಸಾಧಕರಿಗೆ ಸಂದ ಗೌರವ
Published on
ಸಂಪಾದಕೀಯ: ಪ್ರತಿ ವರ್ಷ ಗಣರಾಜ್ಯೋತ್ಸವದ ಮುನ್ನಾದಿನ ಪ್ರಕಟವಾಗುವ ಪದ್ಮ ಪ್ರಶಸ್ತಿಗಳು ದೇಶದ ಅತ್ಯುನ್ನತ ನಾಗರಿಕ ಗೌರವಗಳು. 2026ನೇ ಸಾಲಿಗೆ ಒಟ್ಟು 131 ಪದ್ಮ ಪ್ರಶಸ್ತಿಗಳನ್ನು ಘೊಷಿಸಲಾಗಿದ್ದು, ಇದರಲ್ಲಿ 5 ಪದ್ಮವಿಭೂಷಣ, 13 ಪದ್ಮಭೂಷಣ ಮತ್ತು 113 ಪದ್ಮಶ್ರೀ ಪ್ರಶಸ್ತಿಗಳು ಇವೆ. ಈ ಬಾರಿಯ ಪಟ್ಟಿಯನ್ನು ಗಮನಿಸಿದರೆ, ಪ್ರಚಾರದ ಬೆಳಕಿನಿಂದ ದೂರವಿದ್ದು, ತಳಮಟ್ಟದಲ್ಲಿ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವ ‘ಅನ್​ಸಂಗ್ ಹೀರೋಸ್’ (ಅನಾಮಧೇಯ ಸಾಧಕರು) ಮತ್ತು ಕಾಯಕಯೋಗಿಗಳಿಗೆ ಹೆಚ್ಚಿನ ಮನ್ನಣೆ ಸಿಕ್ಕಿರುವುದು ಎದ್ದು ಕಾಣುತ್ತಿದೆ. ಇದು ಪ್ರಶಸ್ತಿಯ ಘನತೆಯನ್ನು ಹೆಚ್ಚಿಸುವುದಲ್ಲದೆ, ‘ಜನಸಾಮಾನ್ಯರ ಪದ್ಮ’ ಎಂಬ ಪರಿಕಲ್ಪನೆಯನ್ನು ಸಾಕಾರಗೊಳಿಸಿದೆ.
ಈ ಬಾರಿಯ ಪಟ್ಟಿಯಲ್ಲಿ 19 ಮಹಿಳೆಯರು ಇದ್ದಾರೆ. ಇತ್ತೀಚೆಗೆ ನಿಧನರಾದ ನಟ ಧಮೇಂದ್ರ , ಕೇರಳದ ವಿ.ಎಸ್. ಅಚ್ಯುತಾನಂದನ್​ರಂತಹ ಗಣ್ಯರಿಗೆ ಮರಣೋತ್ತರ ಪ್ರಶಸ್ತಿ ಘೊಷಿಸಲಾಗಿದೆ. ರೋಹಿತ್ ಶರ್ವ, ವಿಜಯ್ ಅಮೃತರಾಜ್, ಸವಿತಾ ಪೂನಿಯಾರಂತಹ ಕ್ರೀಡಾಪಟುಗಳು, ಗಾಯಕಿ ಅಲ್ಕಾ ಯಾಗ್ನಿಕ್, ನಟ ಮಮ್ಮೂಟ್ಟಿ, ಉದ್ಯಮಿ ಉದಯ್ ಕೋಟಕ್​ರಂತಹ ಪ್ರಸಿದ್ಧರ ಜತೆಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಜನಸಾಮಾನ್ಯರನ್ನೂ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಶ್ಲಾಘನೀಯ.
ಇದರೊಂದಿಗೆ, ಕರ್ನಾಟಕದ ಎಂಟು ಜನ ಸಾಧಕರಿಗೆ ಈ ಬಾರಿ ಗೌರವ ಸಂದಿರುವುದು ಹೆಮ್ಮೆಯ ವಿಷಯ. ಶತಾವಧಾನಿ ಡಾ. ಆರ್. ಗಣೇಶ್ ಪದ್ಮಭೂಷಣಕ್ಕೆ ಪಾತ್ರರಾಗಿದ್ದರೆ, ಕೆಎಲ್​ಇ ಶಿಕ್ಷಣ ಸಂಸ್ಥೆ ಮಾಜಿ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಬೆಂಗಳೂರಿನ ಸುಮಂಗಲಿ ಸೇವಾಶ್ರಮದ ಎಸ್.ಜಿ. ಸುಶೀಲಮ್ಮ, ಮಂಡ್ಯದ ಪುಸ್ತಕಮನೆಯ ಅಂಕೇಗೌಡ, ಸಾಹಿತ್ಯ-ಶಿಕ್ಷಣ ಕ್ಷೇತ್ರದ ಶಶಿಶೇಖರ ವೇಂಪತಿ, ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ಶುಭಾ ವೆಂಕಟೇಶ ಅಯ್ಯಂಗಾರ್, ವೈದ್ಯಕೀಯ ಕ್ಷೇತ್ರದ ಡಾ. ಸುರೇಶ ಹನಗವಾಡಿ, ವ್ಯಾಪಾರ-ಕೈಗಾರಿಕೆ ಕ್ಷೇತ್ರದ ಟಿ.ಟಿ. ಜಗನ್ನಾಥನ್ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ಬಾರಿಯ ಪದ್ಮ ಪ್ರಶಸ್ತಿ ಪಟ್ಟಿ ಕೇವಲ ಪ್ರಸಿದ್ಧ ವ್ಯಕ್ತಿಗಳಿಗೆ ಅಥವಾ ಗಣ್ಯರಿಗೆ ಸೀಮಿತವಾಗದೆ, ಸಮಾಜದಲ್ಲಿ ಎಲೆ ಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಜನರನ್ನೂ ಗುರುತಿಸಿರುವುದು ಅಭಿನಂದನಾರ್ಹ. ಪ್ರಚಾರದ ಹಪಾಹಪಿಯಿಲ್ಲದೆ, ಅದ್ದೂರಿತನ-ಆರ್ಭಟಗಳಿಂದ ದೂರವಿದ್ದು, ಹಳ್ಳಿ-ಪಟ್ಟಣಗಳ ಮೂಲೆಯಲ್ಲಿ ಮೌನವಾಗಿ ಕ್ರಾಂತಿ ಮಾಡುತ್ತಿರುವ ಸಾಧಕರನ್ನು ಕೇಂದ್ರ ಸರ್ಕಾರ ಗುರುತಿಸಿದೆ. ಈ ಸಾಧಕರ್ಯಾರೂ ಪ್ರಶಸ್ತಿಗಾಗಿ ಕೆಲಸ ಮಾಡಿದವರಲ್ಲ; ತಮ್ಮ ಬದ್ಧತೆ ಮತ್ತು ಸಮಾಜದ ಹಿತಕ್ಕಾಗಿ ಜೀವನವನ್ನೇ ಸವೆಸಿದವರು. ದೊಡ್ಡ ಸಾಧನೆ ಮಾಡಲು ಪ್ರಚಾರ, ಅಧಿಕಾರ ಅಥವಾ ಹಣಕ್ಕಿಂತಲೂ ‘ದೃಢ ಸಂಕಲ್ಪ’ ಮುಖ್ಯ ಎಂಬುದನ್ನು ಈ ಸಾಧಕರು ಸಾಬೀತುಪಡಿಸಿದ್ದಾರೆ. ಇಂತಹ ಅಪ್ರತಿಮ ಸಾಧಕರನ್ನು ಗುರುತಿಸುವ ಕೇಂದ್ರ ಸರ್ಕಾರದ ಕೆಲಸ ಇಡೀ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೀಡುತ್ತದೆ.
ಈ ಪ್ರಶಸ್ತಿಗಳು ಕೇವಲ ವೈಯಕ್ತಿಕ ಗೌರವವಲ್ಲ, ಬದಲಾಗಿ ಅವರು ಪ್ರತಿನಿಧಿಸುವ ಕ್ಷೇತ್ರ ಮತ್ತು ಅವರು ಮಾಡುತ್ತಿರುವ ನಿಸ್ವಾರ್ಥ ಸೇವೆಗೆ ಸಿಕ್ಕ ಜಯ. ಅನಾಮಧೇಯ ಸಾಧಕರಿಗೆ ಈ ಉನ್ನತ ನಾಗರಿಕ ಪ್ರಶಸ್ತಿಗಳನ್ನು ನೀಡುವ ಮೂಲಕ ಪ್ರಶಸ್ತಿಯ ಘನತೆ ಮತ್ತು ಮೌಲ್ಯ ಎರಡೂ ಹೆಚ್ಚಿವೆ. ಪ್ರಚಾರದ ಬೆಳಕಿನಿಂದ ದೂರವಿರುವ ಇಂತಹ ರತ್ನಗಳನ್ನು ಹುಡುಕಿ ಗೌರವಿಸುವ ಪದ್ಧತಿ ಮುಂದುವರಿಯಲಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net