ಸಂಪಾದಕೀಯ: ಪ್ರಧಾನಿ ಭರವಸೆ ಸಕಾಲಿಕ

ಸಂಪಾದಕೀಯ: ಪ್ರಧಾನಿ ಭರವಸೆ ಸಕಾಲಿಕ
ಸಂಪಾದಕೀಯ: ಪ್ರಧಾನಿ ಭರವಸೆ ಸಕಾಲಿಕ
Published on
ಸಂಪಾದಕೀಯ: ದಕ್ಷಿಣ ಭಾರತದ ರಾಜ್ಯಗಳಲ್ಲಿ ಮನೆಮಾಡಿದ್ದ ಕ್ಷೇತ್ರ ಮರುವಿಂಗಡಣೆಯ ಆತಂಕಕ್ಕೆ ಕೊನೆಗೂ ಪ್ರಧಾನಿ ನರೇಂದ್ರ ಮೋದಿ ಅವರೇ ತೆರೆ ಎಳೆದಿದ್ದಾರೆ. ಈ ವಿಷಯದಲ್ಲಿ ಇತ್ತೀಚೆಗೆ ಅವರು ನೀಡಿರುವ ಸ್ಪಷ್ಟನೆ ಅತ್ಯಂತ ಸಕಾಲಿಕವಾಗಿದೆ. ದಕ್ಷಿಣದ ರಾಜ್ಯಗಳಿಗೆ ಯಾವುದೇ ಅನ್ಯಾಯವಾಗಲು ಬಿಡುವುದಿಲ್ಲ ಎಂಬ ಅವರ ಮಾತುಗಳು ರಾಜಕೀಯ ಭರವಸೆ ಮಾತ್ರವಲ್ಲ, ದೇಶದ ಸಮಗ್ರ ಅಭಿವೃದ್ಧಿಯಲ್ಲಿ ದಕ್ಷಿಣದ ರಾಜ್ಯಗಳ ಪ್ರಮುಖ ಪಾತ್ರವನ್ನು ಗುರುತಿಸುವ ಗೌರವದ ಸಂಕೇತವಾಗಿದೆ.
ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ವಿಯಾದ ದಕ್ಷಿಣದ ರಾಜ್ಯಗಳು, 2026ರ ನಂತರ ನಡೆಯಲಿರುವ ಕ್ಷೇತ್ರ ಮರುವಿಂಗಡಣೆಯಲ್ಲಿ ತಮ್ಮ ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳಬಹುದು ಎಂಬ ಚರ್ಚೆ ಇತ್ತೀಚಿನ ವರ್ಷಗಳಲ್ಲಿ ತೀವ್ರವಾಗಿತ್ತು. ಉತ್ತರ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ಅಲ್ಲಿನ ಸೀಟುಗಳ ಸಂಖ್ಯೆ ಹೆಚ್ಚಾಗಿ, ದಕ್ಷಿಣದ ರಾಜಕೀಯ ಪ್ರಭಾವ ಕುಗ್ಗಬಹುದು ಎಂಬ ಭೀತಿ ಸಹಜವಾಗಿಯೇ ಇತ್ತು. ಪ್ರಧಾನಿ ಮೋದಿ ಈಗ ನೀಡಿರುವ ಭರವಸೆ ಈ ಎಲ್ಲ ಆತಂಕಗಳಿಗೆ ತೆರೆ ಎಳೆದಿದೆ. ದಕ್ಷಿಣದ ರಾಜ್ಯಗಳೂ ಸೇರಿದಂತೆ ದೇಶಾದ್ಯಂತ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಗಣನೀಯವಾಗಿ ಹೆಚ್ಚಲಿದೆ ಎಂಬ ಅವರ ಮಾತುಗಳು, ಈ ಭಾಗದ ಪ್ರಾತಿನಿಧ್ಯ ಕುಗ್ಗುವುದಿಲ್ಲ ಎಂಬ ವಿಶ್ವಾಸ ಮೂಡಿಸಿವೆ.
ದಕ್ಷಿಣ ಭಾರತ ದೇಶದ ಆರ್ಥಿಕತೆಯ ಇಂಜಿನ್ ಇದ್ದಂತೆ. ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳ ರಾಜ್ಯಗಳು ಶಿಕ್ಷಣ, ಆರೋಗ್ಯ ಮತ್ತು ತಂತ್ರಜ್ಞಾನದಲ್ಲಿ ಸಾಧಿಸಿರುವ ಪ್ರಗತಿ ಇಡೀ ರಾಷ್ಟ್ರಕ್ಕೆ ಮಾದರಿ. ಜನಸಂಖ್ಯೆಯನ್ನು ಯಶಸ್ವಿಯಾಗಿ ನಿಯಂತ್ರಿಸಿದ್ದಕ್ಕೆ ದಕ್ಷಿಣದ ರಾಜ್ಯಗಳಿಗೆ ಶಿಕ್ಷೆಯಾಗಬಾರದು ಎಂಬ ವಾದದಲ್ಲಿ ನ್ಯಾಯವಿದೆ. ಕೇಂದ್ರ ಸರ್ಕಾರ ಈ ಸೂಕ್ಷ್ಮತೆಯನ್ನು ಅರಿತಿದೆ. ಅಭಿವೃದ್ಧಿಯ ಪಥದಲ್ಲಿ ವೇಗವಾಗಿ ಓಡುತ್ತಿರುವ ರಾಜ್ಯಗಳ ರಾಜಕೀಯ ಧ್ವನಿಯನ್ನು ಅಡಗಿಸದೇ, ಅವುಗಳನ್ನು ಪ್ರೋತ್ಸಾಹಿಸುವುದಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡಿರುವುದು ಸ್ವಾಗತಾರ್ಹ.
ಭಾರತ ‘ವೈವಿಧ್ಯತೆಯಲ್ಲಿ ಏಕತೆ’ಗೆ ಹೆಸರಾಗಿರುವ ರಾಷ್ಟ್ರ. ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತಿ ರಾಜ್ಯದ ಅಸ್ಮಿತೆ ಮತ್ತು ಹಿತಾಸಕ್ತಿ ಮುಖ್ಯ. ಪ್ರಧಾನಿ ನೀಡಿರುವ ಈ ಭರವಸೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಭರವಸೆಗೆ ಪೂರಕವಾಗಿದೆ. ಹೊಸ ಸಂಸತ್ ಭವನದ ಹೆಚ್ಚಿನ ಆಸನ ಸಾಮರ್ಥ್ಯವು ಭವಿಷ್ಯದ ಮರುವಿಂಗಡಣೆಯಲ್ಲಿ ದಕ್ಷಿಣದ ರಾಜ್ಯಗಳೂ ದೊಡ್ಡ ಮಟ್ಟದ ಪ್ರಾತಿನಿಧ್ಯ ಪಡೆಯಲಿವೆ ಎಂಬುದನ್ನು ಸೂಚಿಸುತ್ತದೆ.
ಕ್ಷೇತ್ರ ಮರುವಿಂಗಡಣೆ ಕೇವಲ ಅಂಕಿಅಂಶಗಳ ಆಟವಾಗಬಾರದು, ಅದು ದೇಶದ ಪ್ರಜಾಪ್ರಭುತ್ವದ ಶಕ್ತಿಯನ್ನು ಹೆಚ್ಚಿಸುವ ಪ್ರಕ್ರಿಯೆಯಾಗಬೇಕು. ಪ್ರಧಾನಿ ಮೋದಿ ಅವರು ನೀಡಿದ ಭರವಸೆಯ ಬೆನ್ನಲ್ಲೇ, ದಕ್ಷಿಣದ ರಾಜ್ಯಗಳು ಅಭಿವೃದ್ಧಿ ಮತ್ತು ಜನಸಂಖ್ಯಾ ಸ್ಥಿರತೆಯ ನಡುವೆ ಸಮತೋಲನ ಕಾಯ್ದುಕೊಳ್ಳುವಲ್ಲಿ ತಾವು ತೋರಿದ ಶಿಸ್ತಿಗೆ ಸೂಕ್ತ ಪ್ರತಿಫಲ ಸಿಗಲಿದೆ ಎಂಬ ವಿಶ್ವಾಸ ತಳೆಯಬಹುದು. ಪ್ರಧಾನಿ ನೀಡಿರುವ ಈ ಸಕಾಲಿಕ ಭರವಸೆ ದೇಶದ ದಕ್ಷಿಣ ಮತ್ತು ಉತ್ತರದ ನಡುವಿನ ಅನಗತ್ಯ ಭಿನ್ನಾಭಿಪ್ರಾಯಗಳನ್ನು ನಿವಾರಿಸಿ, ಸುಭದ್ರ ಮತ್ತು ಸಮೃದ್ಧ ಭಾರತದ ನಿರ್ವಣಕ್ಕೆ ದಾರಿಯಾಗಲಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net