ಸಂಪಾದಕೀಯ: ಸನ್ನದ್ಧತೆ ಅಗತ್ಯ

ಸಂಪಾದಕೀಯ: ಸನ್ನದ್ಧತೆ ಅಗತ್ಯ
ಸಂಪಾದಕೀಯ: ಸನ್ನದ್ಧತೆ ಅಗತ್ಯ
Published on
ಸಂಪಾದಕೀಯ: ಜಾಗತಿಕವಾಗಿ ಸಂಕಷ್ಟದ ಸಂದರ್ಭಗಳು ಯಾವಾಗ, ಹೇಗೆ ಬರುತ್ತವೆ ಎಂಬುದನ್ನು ಊಹಿಸುವಂತಿಲ್ಲ. ದೂರದ ಇರಾನ್, ಇಸ್ರೇಲ್ ಹಾಗೂ ಅಮೆರಿಕ ರಾಷ್ಟ್ರಗಳು ಯುದ್ಧದಲ್ಲಿ ನಿರತವಾಗಿದ್ದು, ಇದು ಮೂರು ರಾಷ್ಟ್ರಗಳ ನಡುವಿನ ಸಮರವಾಗಿ ಉಳಿಯದೆ ಜಾಗತಿಕ ಆರ್ಥಿಕ ಯುದ್ಧವಾಗಿಯೇ ಮಾರ್ಪಟ್ಟಿದೆ. ಯುದ್ಧದ ವ್ಯತಿರಿಕ್ತ ಪರಿಣಾಮ ಹಲವು ಪ್ರಮುಖ ರಾಷ್ಟ್ರಗಳಂತೆ ಭಾರತದ ಮೇಲೂ ಆಗುತ್ತಿದೆ. ಕಚ್ಚಾ ತೈಲ ಇಂಧನ ಪೂರೈಕೆ ಜಾಲದಲ್ಲಿ ವ್ಯತ್ಯಯವಾಗಿರುವುದರಿಂದ ಹಲವು ರಂಗಗಳು ಸಂಕಷ್ಟಕ್ಕೆ ಸಿಲುಕಿವೆ. ಎಲ್​ಪಿಜಿ ಕೊರತೆ ದೇಶಾದ್ಯಂತ ಕಾಡುತ್ತಿದೆ. ಹೋಟೆಲ್, ಜವಳಿ, ಪೆಟ್ರೋ ಕೆಮಿಕಲ್, ರಸಗೊಬ್ಬರ ಸೇರಿದಂತೆ ಹಲವು ರಂಗಗಳ ಚಟುವಟಿಕೆಗೆ ಭಾರಿ ತೊಂದರೆಯಾಗಿದೆ. ಫೆಬ್ರವರಿ 28ರಂದು ಯುದ್ಧ ಆರಂಭವಾದ ಬೆನ್ನಲ್ಲೇ ಇರಾನ್ ಹೊರ್ಮುಜ್​ ಜಲಸಂಧಿ ಮುಚ್ಚಿರುವ ಹಿನ್ನೆಲೆಯಲ್ಲಿ ಸಮಸ್ಯೆಯ ತೀವ್ರತೆ ಹೆಚ್ಚಿದೆ.
 ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಲೇ ಇದೆ. ಹೊಮುಜ್ ಜಲಸಂಧಿ ಸಂಚಾರಕ್ಕೆ ಮುಕ್ತವಾಗಿ ಇರಿಸುವ ಬಗ್ಗೆ ಮತ್ತು ಶಾಂತಿ, ಸ್ಥಿರತೆಯನ್ನು ಸಾಧಿಸಲು ಪರಸ್ಪರ ಕೆಲಸ ಮಾಡುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ದೂರವಾಣಿ ಮಾತುಕತೆಯಲ್ಲಿ ರ್ಚಚಿಸಿರುವುದು, ಉತ್ತಮ ಬೆಳವಣಿಗೆ.
ಈ ನಡುವೆ, ಕದನ ವಿರಾಮದ ಕುರಿತಂತೆ ಮಾತುಕತೆಗಳು ನಡೆಯುತ್ತಿದ್ದು, ಯಾವುದೂ ಅಧಿಕೃತಗೊಳ್ಳದ, ಉದ್ವಿಗ್ನತೆ ಮುಂದುವರಿದಿರುವ ಸಂದಿಗ್ಧ ಸ್ಥಿತಿ ಇದು. ಒಂದು ವೇಳೆ, ಕದನ ವಿರಾಮ ಏರ್ಪಟ್ಟರೂ ಪರಿಸ್ಥಿತಿ ಸಹಜ ಸ್ಥಿತಿಗೆ ಬರಲು ಕೆಲವು ದಿನಗಳು ಅಥವಾ ವಾರಗಳು ಬೇಕೇ ಬೇಕು ಎಂಬ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕಿದೆ. ಹಾಗಾಗಿ, ಈ ಸಂಕಷ್ಟದ ಸನ್ನಿವೇಶವನ್ನು ಎದುರಿಸುವ ತಯಾರಿಯೂ ಅಗತ್ಯ. ದೇಶದ ಕೆಲವೆಡೆ ಎಲ್​ಪಿಜಿಯ ಕೃತಕ ಕೊರತೆ ಸೃಷ್ಟಿಸುವ ಕೃತ್ಯಗಳೂ ನಡೆಯುತ್ತಿದ್ದು, ಜನರು ಆತಂಕದಿಂದ ಖರೀದಿ ಪ್ರಮಾಣ ಹೆಚ್ಚಿಸಿರುವುದರಿಂದ, ಬೇಡಿಕೆಯೂ ಹೆಚ್ಚಿದೆ. ಈ ಎಲ್ಲ ಸ್ಥಿತಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಾತನಾಡಿದ್ದಾರೆ. ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಬಗ್ಗೆ ರ್ಚಚಿಸಲು ಬುಧವಾರ ಸರ್ವಪಕ್ಷಗಳ ಸಭೆಯನ್ನೂ ಕರೆದಿದ್ದಾರೆ. 
ಆರು ವರ್ಷಗಳ ಹಿಂದಿನ ಕೋವಿಡ್ ಸಂಕಷ್ಟದ ದಿನಗಳನ್ನು ಮತ್ತು ಅದನ್ನು ಭಾರತೀಯರು ಒಟ್ಟಾಗಿ ಎದುರಿಸಿದ ಬಗೆಯನ್ನು ನೆನಪಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಯುದ್ಧಕಾಲದ ಸಂಕಷ್ಟಗಳನ್ನು ಎದುರಿಸಲು ಸನ್ನದ್ಧವಾಗಿ ಇರುವಂತೆ ಸೂಚಿಸಿದ್ದಾರೆ. ‘ಕೇಂದ್ರ ಸರ್ಕಾರ ಸಾಧ್ಯವಿರುವ ಎಲ್ಲ ಮೂಲಗಳಿಂದ ಇಂಧನ ಖರೀದಿಗೆ ಪ್ರಯತ್ನ ನಡೆಸುತ್ತಿದೆ. ಪಶ್ಚಿಮ ಏಷ್ಯಾದಲ್ಲಿನ ಯುದ್ಧವು ಅತ್ಯಂತ ಕಳವಳಕಾರಿಯಾಗಿದೆ. ರಾಜತಾಂತ್ರಿಕ ಮಾತುಕತೆಯ ಮೂಲಕ ಈ ಪ್ರದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯ’ ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ. ಹಾಗಂತ, ದೇಶದಲ್ಲಿ ಮತ್ತೊಮ್ಮೆ ಲಾಕ್​ಡೌನ್ ಘೋಷಣೆ ಆಗುತ್ತದೆ ಎಂಬ ಆತಂಕ ಅರ್ಥವಿಲ್ಲದ್ದು. ಯುದ್ಧದಂಥ ಸನ್ನಿವೇಶಗಳಲ್ಲಿ ಸಂಯಮ ಮತ್ತು ಯಾವುದೇ ಪರಿಸ್ಥಿತಿ ಎದುರಿಸುವ ಸನ್ನದ್ಧತೆ ಇರಲೇ ಬೇಕು. ಇದು ಸರ್ಕಾರದ ಮಟ್ಟದಲ್ಲೂ, ನಾಗರಿಕ ಸಮುದಾಯದ ಮಟ್ಟದಲ್ಲೂ ಅಗತ್ಯ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net