ಸಂಪಾದಕೀಯ: ಜನರ ಜೀವ ಅಮೂಲ್ಯ

ಸಂಪಾದಕೀಯ: ಜನರ ಜೀವ ಅಮೂಲ್ಯ
ಸಂಪಾದಕೀಯ: ಜನರ ಜೀವ ಅಮೂಲ್ಯ
Published on

ಸಂಪಾದಕೀಯ: ಸರ್ವೋಚ್ಚ ನ್ಯಾಯಾಲಯವು ಹೆದ್ದಾರಿಗಳ ಸುರಕ್ಷತೆಗೆ ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಡಿಸಿದ್ದು, ಇದು ದೇಶಾದ್ಯಂತ ಅನ್ವಯವಾಗಲಿದೆ. ‘ಆಡಳಿತಾತ್ಮಕ ನಿರ್ಲಕ್ಷ್ಯ ಹಾಗೂ ಮೂಲಸೌಕರ್ಯಗಳ ಕೊರತೆಯಿಂದಾಗಿ ಎಕ್ಸ್‌ಪ್ರೆಸ್‌ ವೇ ಮತ್ತು ಹೆದ್ದಾರಿಗಳು ಮರಣದ ಕಾರಿಡಾರ್‌ಗಳಾಗಬಾರದು. ದೇಶದ ಒಟ್ಟು ರಸ್ತೆ ಜಾಲದಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಕೇವಲ ಶೇ. 2ರಷ್ಟಿವೆ. ಆದರೆ, ರಸ್ತೆ ಅಪಘಾತಗಳಲ್ಲಿ ಸಂಭವಿಸುವ ಒಟ್ಟು ಸಾವುಗಳಲ್ಲಿ ಶೇ. 30 ಸಾವುಗಳು ಈ ಹೆದ್ದಾರಿಗಳಲ್ಲೇ ಆಗುತ್ತಿರುವುದು ಆತಂಕಕಾರಿ’ ಎಂದು ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಎ.ಎಸ್. ಚಂದೂರ್ಕರ್ ಅವರನ್ನೊಳಗೊಂಡ ಪೀಠ ಹೇಳಿರುವುದು ಗಮನಾರ್ಹ. ಕಳೆದ ವರ್ಷ ನವೆಂಬರ್ 2 ಮತ್ತು 3ರಂದು ರಾಜಸ್ಥಾನದ ಫಲೋಡಿ ಮತ್ತು ತೆಲಂಗಾಣದ ರಂಗಾರೆಡ್ಡಿಯಲ್ಲಿ ಸಂಭವಿಸಿದ್ದ ಪ್ರತ್ಯೇಕ ಸರಣಿ ರಸ್ತೆ ಅಪಘಾತಗಳಲ್ಲಿ 34 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಬಗ್ಗೆ ನ್ಯಾಯಾಲಯ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಈ ಮಹತ್ವದ ಆದೇಶ ನೀಡಿದೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿಗದಿತ ಪಾರ್ಕಿಂಗ್ ಸ್ಥಳಗಳನ್ನು ಹೊರತುಪಡಿಸಿ, ಬೇರೆಲ್ಲಿಯೂ ಭಾರಿ ಅಥವಾ ವಾಣಿಜ್ಯ ವಾಹನಗಳನ್ನು ನಿಲ್ಲಿಸುವಂತಿಲ್ಲ; ಹೆದ್ದಾರಿಗಳ ವ್ಯಾಪ್ತಿಯಲ್ಲಿ ಹೊಸ ಢಾಬಾ, ಹೋಟೆಲ್ ಅಥವಾ ವಾಣಿಜ್ಯ ಮಳಿಗೆಗಳ ನಿರ್ಮಾಣ ಹಾಗೂ ಕಾರ್ಯಾಚರಣೆ ತಕ್ಷಣದಿಂದಲೇ ನಿಷೇಧಿಸಬೇಕು; ನಿಯಮ ಉಲ್ಲಂಘಿಸಿರುವ ಅನಧಿಕೃತ ಕಟ್ಟಡಗಳನ್ನು 60 ದಿನಗಳೊಳಗೆ ತೆರವುಗೊಳಿಸಬೇಕು; ಹೆದ್ದಾರಿಗಳಲ್ಲಿ ಬ್ಲ್ಯಾಕ್ ಸ್ಪಾಟ್‌ಗಳ ದುರಸ್ತಿ ಮತ್ತು ಕಣ್ಗಾವಲು ವ್ಯವಸ್ಥೆ ಹೆಚ್ಚಿಸಬೇಕು ಎಂದು ನ್ಯಾಯಾಲಯವು ಸೂಚಿಸಿದ್ದು, ಈ ಕ್ರಮಗಳು ಸುರಕ್ಷಿತ ಸಂಚಾರಕ್ಕೆ ಇಂಬು ನೀಡಬಲ್ಲವು.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು 2025ರ ಡಿಸೆಂಬರ್‌ನಲ್ಲಿ ಸಂಸತ್ತಿಗೆ ನೀಡಿದ ಮಾಹಿತಿ ಕಳವಳ ಮೂಡಿಸುವಂತಿದೆ. 2024ರಲ್ಲಿ ದೇಶದಲ್ಲಿ ರಸ್ತೆ ಅಪಘಾತಗಳಲ್ಲಿ 1.77 ಲಕ್ಷ ಜನರು ಸಾವನ್ನಪ್ಪಿದ್ದಾರೆ. 2023ಕ್ಕೆ ಹೋಲಿಸಿದರೆ ಅಪಘಾತ ಪ್ರಮಾಣ ಶೇ. 2.3ರಷ್ಟು ಹೆಚ್ಚಿದೆ. 2023ರಲ್ಲಿ 1.72 ಲಕ್ಷ ಜನರು ಅಪಘಾತಗಳಲ್ಲಿ ಮೃತರಾಗಿದ್ದರು. ಭಾರತವೂ ಸಹಿದಾರನಾಗಿರುವ, ರಸ್ತೆ ಸುರಕ್ಷತೆ ಕುರಿತಾದ 2020ರ ಸ್ಟಾಕ್‌ಹೋಮ್ ಒಡಂಬಡಿಕೆ ಅನ್ವಯ, ರಸ್ತೆ ಅಪಘಾತಗಳಲ್ಲಿ ಸಾವು ಮತ್ತು ಗಾಯ ಪ್ರಮಾಣವನ್ನು 2030ರ ಹೊತ್ತಿಗೆ ಶೇ. 50ರಷ್ಟು ತಗ್ಗಿಸಬೇಕಾಗುತ್ತದೆ. ಇದು ಸಾಧ್ಯವಾಗಬೇಕು ಎಂದಾದಲ್ಲಿ ಕಟ್ಟುನಿಟ್ಟಿನ ನಿಯಮಗಳು ಮತ್ತು ಅವುಗಳ ಅನುಸರಣೆ ಅನಿವಾರ್ಯ.

ಹೆದ್ದಾರಿಗಳು ಮಾತ್ರವಲ್ಲ, ಇತರ ಎಲ್ಲ ರಸ್ತೆಗಳ ಗುಣಮಟ್ಟ ಕೂಡ ಮುಖ್ಯವಾಗುತ್ತದೆ. ರಸ್ತೆ ಹೊಂಡಗಳಿಂದಾಗಿ ಅಪಘಾತಗಳಾಗುವ ವರದಿಗಳು ಬರುತ್ತಲೇ ಇರುತ್ತವೆ. ಆಯಾ ವ್ಯಾಪ್ತಿಯಲ್ಲಿ ರಸ್ತೆಗಳನ್ನು ನಿಯಮಿತವಾಗಿ ನಿರ್ವಹಣೆ ಮಾಡದಿದ್ದರೆ ತೊಂದರೆಯಾಗುತ್ತದೆ. ಇದು ಆಯಾ ಸರ್ಕಾರಗಳ ಆದ್ಯ ಕರ್ತವ್ಯ. ವಿಶ್ವ ರಸ್ತೆ ಅಂಕಿಅಂಶ ಪ್ರಕಾರ, ಅಪಘಾತಗಳಲ್ಲಿ ಆಗುವ ಸಾವಿನ ಪ್ರಮಾಣ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಚೀನಾದಲ್ಲಿ 4.3 ಇದ್ದರೆ, ಅಮೆರಿಕದಲ್ಲಿ 12.76 ಮತ್ತು ಭಾರತದಲ್ಲಿ 11.89 ಇದೆ. ರಸ್ತೆ ಅಪಘಾತಗಳನ್ನು ತಗ್ಗಿಸುವಲ್ಲಿ ಸರ್ಕಾರದ ಹಾಗೆ ಸಾರ್ವಜನಿಕರ ಜವಾಬ್ದಾರಿ ಕೂಡ ಇದೆ. ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಅತಿ ವೇಗ, ನಿರ್ಲಕ್ಷ್ಯ, ಮೊಬೈಲ್‌ನಲ್ಲಿ ಮಾತಾಡುತ್ತ ವಾಹನ ಓಡಿಸುವುದು, ಮದ್ಯದ ಅಮಲಿನಲ್ಲಿ ಚಾಲನೆ ಮುಂತಾದ ಮಾನವಕೃತ ದೋಷಗಳಾಗದಂತೆ ನೋಡಿಕೊಂಡರೆ ಎಷ್ಟೋ ಪ್ರಾಣಗಳನ್ನು ಕಾಪಾಡಲು ಸಾಧ್ಯವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net