ಸಂಪಾದಕೀಯ: ಪಾಕ್ ಪ್ರಲಾಪ

ಸಂಪಾದಕೀಯ: ಪಾಕ್ ಪ್ರಲಾಪ
ಸಂಪಾದಕೀಯ: ಪಾಕ್ ಪ್ರಲಾಪ
Published on
ಸಂಪಾದಕೀಯ: ಪಾಕಿಸ್ತಾನದ ರಾಷ್ಟ್ರೀಯ ಭದ್ರತೆ ಮತ್ತು ಜಲಭದ್ರತೆಗೆ ಬೆದರಿಕೆ ಎದುರಾದರೆ ಭಾರತದ ವಿರುದ್ಧ ಸೇನಾ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್ ಎಚ್ಚರಿಕೆ ನೀಡಿದ್ದಾರೆ. ಭಾರತವು ಸಿಂಧೂ ಜಲ ಒಪ್ಪಂದವನ್ನು ಅಮಾನತಿನಲ್ಲಿಟ್ಟಿರುವುದನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರು ಈ ಮಾತನ್ನು ಹೇಳಿದ್ದಾರೆ. ಪಾಕಿಸ್ತಾನದ ವರ್ತನೆ ಮತ್ತು ನಿಲುವಿನ ಕಾರಣಕ್ಕಾಗಿ, ಆರು ದಶಕಗಳಷ್ಟು ಹಳೆಯದಾದ ಸಿಂಧೂ ಜಲ ಒಪ್ಪಂದಕ್ಕೆ ಈ ಹಿಂದೆಯೂ ಹಲವು ಬಾರಿ ಬಿಕ್ಕಟ್ಟು ಎದುರಾಗಿದ್ದರೂ ರದ್ದಾಗುವ ಹಂತಕ್ಕೆ ಹೋಗಿರಲಿಲ್ಲ. ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧ ಮುರಿದುಬಿದ್ದಾಗಲೂ ಸಹ ಒಪ್ಪಂದ ಚಾಲ್ತಿಯಲ್ಲಿತ್ತು. ಆದರೆ 2025ರ ಏಪ್ರಿಲ್​ನಲ್ಲಿ ಭಯೋತ್ಪಾದಕರು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರ ನರಮೇಧ ನಡೆಸಿದ ನಂತರದಲ್ಲಿ, ಭಾರತವು ಪಾಕಿಸ್ತಾನದ ವಿರುದ್ಧ ಕಠಿಣ ರಾಜತಾಂತ್ರಿಕ, ಸೇನಾ ಕ್ರಮಗಳನ್ನು ತೆಗೆದುಕೊಂಡಿದ್ದು, ಸಿಂಧೂ ಜಲ ಒಪ್ಪಂದವನ್ನು ಅಮಾನತಿನಲ್ಲಿ ಇರಿಸುವುದು ಇದರಲ್ಲಿ ಒಂದು. ಈ ಒಪ್ಪಂದವು ವಿಶ್ವದ ಯಶಸ್ವಿ ಜಲ ಒಪ್ಪಂದಗಳಲ್ಲಿ ಒಂದೆಂಬ ಹೆಗ್ಗಳಿಕೆ ಪಡೆದಿದೆ.
ದೇಶ ವಿಭಜನೆಯ ತರುವಾಯ, ಸಿಂಧೂ ಕಣಿವೆಯಲ್ಲಿನ ಆರು ನದಿಗಳ ವಿಚಾರವಾಗಿ ತಕರಾರು ಉಂಟಾಯಿತು. ಈ ಹಿನ್ನೆಲೆಯಲ್ಲಿ ಎರಡೂ ದೇಶಗಳ ನಡುವೆ ಮಾತುಕತೆ ಶುರುವಾಗಿ ವರ್ಷಗಳ ಕಾಲ ಮುಂದುವರಿಯಿತು. ನಂತರದಲ್ಲಿ ವಿಶ್ವಸಂಸ್ಥೆಯು ಮಧ್ಯಸ್ಥಿಕೆದಾರನಾಗಿ ರಂಗ ಪ್ರವೇಶಿಸಿ, 1960ರ ಸೆಪ್ಟೆಂಬರ್ 19ರಂದು ಕರಾಚಿಯಲ್ಲಿ ಭಾರತದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಪಾಕ್ ಅಧ್ಯಕ್ಷ ಅಯೂಬ್ ಖಾನ್ ಒಪ್ಪಂದಕ್ಕೆ ಸಹಿಹಾಕಿದರು. ಈ ಒಡಂಬಡಿಕೆಯನ್ವಯ, ಸಿಂಧೂ ಕಣಿವೆ ಪ್ರದೇಶದ ಆರು ನದಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ, ಪಶ್ಚಿಮಾಭಿಮುಖವಾಗಿ ಹರಿಯುವ ಸಿಂಧೂ, ಝೀಲಂ ಮತ್ತು ಚೆನಾಬ್ ನದಿಗಳ ಮೇಲಿನ ಹಕ್ಕನ್ನು ಪಾಕಿಸ್ತಾನಕ್ಕೂ, ಪೂರ್ವಾಭಿಮುಖವಾಗಿ ಹರಿಯುವ ರಾವಿ, ಬಿಯಾಸ್ ಮತ್ತು ಸಟ್ಲೆಜ್ ನದಿಗಳ ಮೇಲಿನ ಹಕ್ಕನ್ನು ಭಾರತಕ್ಕೂ ನೀಡಲಾಯಿತು.
ವಿಶೇಷವಾಗಿ ಪಾಕಿಸ್ತಾನದ ಸಿಂಧ್ ಮತ್ತು ಪಂಜಾಬ್ ಪ್ರಾಂತ್ಯದ ಕೃಷಿ ಆರ್ಥಿಕತೆಯು ಸಿಂಧೂ ನದಿ ಕಣಿವೆ ನೀರಿನ ಮೇಲೇ ಅವಲಂಬಿತವಾಗಿದೆ. ಎರಡೂ ದೇಶಗಳ ನಡುವೆ 1965, 1971 ಮತ್ತು 1999ರಲ್ಲಿ ನಡೆದ ಯುದ್ಧಗಳು, 2008ರ ಮುಂಬೈ ಭಯೋತ್ಪಾದನಾ ದಾಳಿ ಹಾಗೂ 2019ರ ಪುಲ್ವಾಮಾ ದಾಳಿ ಸಂದರ್ಭಗಳಲ್ಲಿಯೂ ಸಿಂಧೂ ಒಪ್ಪಂದ ಜಾರಿಯಲ್ಲಿದ್ದುದು ಜಾಗತಿಕ ಗಮನ ಸೆಳೆದಿತ್ತು. ಹವಾಮಾನ ಬದಲಾವಣೆ, ನೀರಿನ ಅಗತ್ಯಗಳ ಬದಲಾವಣೆ, ಶುದ್ಧ ಇಂಧನ ಅಗತ್ಯಗಳು ಮತ್ತು ಜನಸಂಖ್ಯಾ ಬೆಳವಣಿಗೆಯಿಂದಾಗಿ, ಒಪ್ಪಂದವೇರ್ಪಟ್ಟ ದಿನಮಾನಕ್ಕೂ ಇಂದಿಗೂ ವ್ಯತ್ಯಾಸಗಳಿವೆ ಎಂದು ಪ್ರತಿಪಾದಿಸುತ್ತ ಬಂದ ಭಾರತ, ತನ್ನ ಯೋಜನೆಗಳಿಗೆ ಪಾಕಿಸ್ತಾನವು ಅನಗತ್ಯವಾಗಿ ತಡೆಯೊಡ್ಡುತ್ತ ಬಂದಿರುವುದನ್ನೂ ಈ ತಿಂಗಳು ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿ ಗಮನಕ್ಕೆ ತಂದಿತ್ತು.
ಇದರೊಂದಿಗೆ, ಪಹಲ್ಗಾಮ್ ಉಗ್ರದಾಳಿಯೂ ಸೇರಿಕೊಂಡು, ಒಪ್ಪಂದದ ಅಮಾನತಿಗೆ ಭಾರತ ಮುಂದಾಗುವಂತಾಯಿತು. ನೀರಿನ ವಿಷಯದಲ್ಲಿ ಪಾಕಿಸ್ತಾನಕ್ಕೆ ತೊಂದರೆ ಕೊಡಬೇಕು ಎಂಬ ಉದ್ದೇಶ ಭಾರತಕ್ಕೆ ಕನಸುಮನಸಿನಲ್ಲೂ ಇಲ್ಲ. ಆದರೆ ಆ ದೇಶವು ಭಯೋತ್ಪಾದನೆಗೆ ನೆರವು ಸೇರಿದಂತೆ ಭಾರತದ ವಿರುದ್ಧ ಸದಾ ಕತ್ತಿ ಮಸೆಯುವುದನ್ನೇ ಜಾಯಮಾನವಾಗಿಸಿಕೊಂಡಿದೆ. ಭಾರತದ ವಿರುದ್ಧ ದ್ವೇಷದ ಬದಲು ಸ್ನೇಹದ ನೀತಿಯು ತಮಗೇ ಹೆಚ್ಚು ಪ್ರಯೋಜನಕಾರಿ ಎಂಬುದನ್ನು ಅಲ್ಲಿನ ನಾಯಕರು ಯಾವಾಗ ಅರ್ಥಮಾಡಿಕೊಳ್ಳುತ್ತಾರೆಂಬುದೇ ಬಗೆಹರಿಯದ ಪ್ರಶ್ನೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net