ಸಂಪಾದಕೀಯ: ಮುಂಗಾರು ಮುನ್ನರಿವು

ಸಂಪಾದಕೀಯ: ಮುಂಗಾರು ಮುನ್ನರಿವು
ಸಂಪಾದಕೀಯ: ಮುಂಗಾರು ಮುನ್ನರಿವು
Published on
ಸಂಪಾದಕೀಯ: ರಾಜ್ಯಕ್ಕೆ ಇನ್ನು ಕೆಲವೇ ದಿನಗಳಲ್ಲಿ ಮುಂಗಾರು ಪ್ರವೇಶಿಸಲಿದೆ. ಪ್ರತಿ ವರ್ಷಕ್ಕಿಂತ ಸ್ವಲ್ಪ ಮುಂಚಿತವಾಗಿಯೇ ಮಳೆ ಶುರುವಾಗಬಹುದು ಎಂದು ಹವಾಮಾನ ಇಲಾಖೆ ಈಗಾಗಲೇ ತಿಳಿಸಿದೆ. ಮುಂಗಾರು ಪ್ರವೇಶಕ್ಕೆ ಮುನ್ನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಆಡಳಿತಾತ್ಮಕ ಪ್ರಕ್ರಿಯೆ ಮಾತ್ರವಲ್ಲ, ಅದು ಸಾರ್ವಜನಿಕರ ಜೀವ ಮತ್ತು ಜೀವನದ ರಕ್ಷಣೆಗೆ ಕೈಗೊಳ್ಳಲೇಬೇಕಾದ ತುರ್ತು ಕ್ರಮ. ಹೀಗಾಗಿ, ರಾಜ್ಯ ಸರ್ಕಾರ ಮತ್ತು ಸ್ಥಳೀಯ ಆಡಳಿತಗಳು ಈಗಿನಿಂದಲೇ ಸಮರೋಪಾದಿಯಲ್ಲಿ ಕಾರ್ಯಾಚರಣೆಗೆ ಇಳಿಯಬೇಕಾಗಿದೆ. ಮಳೆಗಾಲ ಆರಂಭವಾಗುವ ಮುನ್ನ ಸ್ಥಳೀಯ ಆಡಳಿತಗಳು ಆದ್ಯತೆಯ ಮೇಲೆ ಗಮನ ಹರಿಸಬೇಕಿರುವುದು ಅಪೂರ್ಣಗೊಂಡಿರುವ ಮೂಲಸೌಕರ್ಯ ಕಾಮಗಾರಿಗಳ ಮೇಲೆ. ರಾಜ್ಯದ ಹಲವು ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ರಸ್ತೆಗಳ ವಿಸ್ತರಣೆ, ಒಳಚರಂಡಿ ನಿರ್ಮಾಣ, ಕೇಬಲ್ ಅಳವಡಿಕೆ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಡಿ ಕೈಗೆತ್ತಿಕೊಂಡಿರುವ ನೂರಾರು ಕಾಮಗಾರಿಗಳು ನಿಧಾನವಾಗಿ ಸಾಗುತ್ತಿವೆ. ಮಳೆಗಾಲ ಶುರುವಾಗುವ ಮುನ್ನ ಇವುಗಳನ್ನು ಪೂರ್ಣಗೊಳಿಸದಿದ್ದರೆ, ಸಮಸ್ಯೆಯಾಗುವುದು ಖಚಿತ. ಅಪೂರ್ಣ ರಸ್ತೆಗಳು ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ಮೃತ್ಯುಕೂಪಗಳಾಗಿ ಪರಿಣಮಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮುಂಗಾರುಪೂರ್ವ ಮಳೆಗೆ ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ ಭಾಗದಲ್ಲಿ ಕೆಲವೆಡೆ ಹಳೆಯ ಗೋಡೆಗಳು ಕುಸಿದು ಜೀವಹಾನಿಯಾಗಿರುವ ಘಟನೆಗಳು ಸಂಭವಿಸಿವೆ. ಸಿಡಿಲು ಬಡಿತಕ್ಕೆ ರೈತರು ಹಾಗೂ ಜಾನುವಾರುಗಳು ಬಲಿಯಾಗಿರುವ ಕಹಿ ಸತ್ಯಗಳು ಕಣ್ಣೆದುರಿವೆ. ಧಾರವಾಡ, ಬೆಳಗಾವಿ ಮುಂತಾದ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಗೆ ಮನೆಗಳ ಮೇಲ್ಛಾವಣಿ ಹಾರಿಹೋಗಿರುವುದು, ವಿದ್ಯುತ್ ಕಂಬಗಳು ಮುರಿದು ಬಿದ್ದು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿರುವುದು ಆಡಳಿತದ ಸಿದ್ಧತೆಯನ್ನು ಪ್ರಶ್ನಿಸುವಂತೆ ಮಾಡಿದೆ. ವಿವಿಧ ಜಿಲ್ಲೆಗಳಲ್ಲಿ ಸಂಭವಿಸಿದ ದುರಂತಗಳು ನಮಗೆ ಎಚ್ಚರಿಕೆಯ ಗಂಟೆಯಾಗಿವೆ. ಇತ್ತೀಚಿನ ಈ ದುರಂತಗಳಿಂದ ನಾವು ಪಾಠ ಕಲಿಯಬೇಕಿದೆ. ಪ್ರಕೃತಿಯ ವಿಕೋಪವನ್ನು ತಡೆಯಲು ಸಾಧ್ಯವಿಲ್ಲದಿದ್ದರೂ, ವ್ಯವಸ್ಥಿತ ಮುಂಜಾಗ್ರತಾ ಕ್ರಮಗಳ ಮೂಲಕ ಅನಾಹುತಗಳ ತೀವ್ರತೆಯನ್ನು ಮತ್ತು ಜೀವಹಾನಿಯನ್ನು ತಗ್ಗಿಸಬಹುದು.
ಇನ್ನೊಂದೆಡೆ, ಮಳೆಯ ಆಗಮನದ ಬೆನ್ನಲ್ಲೇ ಅನ್ನದಾತನ ಕೃಷಿ ಚಟುವಟಿಕೆಗಳು ಗರಿಗೆದರಲಿವೆ. ರಾಜ್ಯದ ಒಟ್ಟು ಕೃಷಿ ವಲಯದ ಪೈಕಿ ಶೇ. 80ರಷ್ಟು ಭಾಗ ಮುಂಗಾರು ಮಳೆಯನ್ನೇ ನೆಚ್ಚಿಕೊಂಡಿದೆ. ಈ ಹಂತದಲ್ಲಿ ರಾಜ್ಯದ ಪ್ರತಿಯೊಂದು ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಲಭ್ಯವಿರಬೇಕು. ಈ ಹಿಂದಿನ ವರ್ಷಗಳಲ್ಲಿ ಕಂಡುಬಂದಂತೆ ಗೊಬ್ಬರಕ್ಕಾಗಿ ರೈತರು ಗಂಟೆಗಟ್ಟಲೆ ಕ್ಯೂ ನಿಲ್ಲುವ ಅಥವಾ ಕೃತಕ ಅಭಾವ ಸೃಷ್ಟಿಯಾಗಿ ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಖರೀದಿಸುವ ಪರಿಸ್ಥಿತಿ ಮರುಕಳಿಸಬಾರದು. ನಕಲಿ ಬೀಜ ಮತ್ತು ರಸಗೊಬ್ಬರ ಮಾರಾಟ ಮಾಡುವ ಜಾಲದ ಮೇಲೆ ನಿಗಾ ವಹಿಸುವುದು ಅಗತ್ಯ. ವಿಪತ್ತು ನಿರ್ವಹಣಾ ತಂಡಗಳು, ಅಗ್ನಿಶಾಮಕ ದಳ ಮತ್ತು ವಿದ್ಯುತ್ ಸರಬರಾಜು ಕಂಪನಿಗಳು ತುರ್ತು ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿರಬೇಕು. ಆಡಳಿತದ ಸಕಾಲಿಕ ಮುನ್ನೆಚ್ಚರಿಕೆಯೇ ಸಾರ್ವಜನಿಕರ ಸುರಕ್ಷತೆಗೆ ಇರುವ ಏಕೈಕ ರಕ್ಷಾಕವಚ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net