ಸಂಪಾದಕೀಯ: ತಾರ್ಕಿಕ ಅಂತ್ಯ ಕಾಣಲಿ

ಸಂಪಾದಕೀಯ: ತಾರ್ಕಿಕ ಅಂತ್ಯ ಕಾಣಲಿ
ಸಂಪಾದಕೀಯ: ತಾರ್ಕಿಕ ಅಂತ್ಯ ಕಾಣಲಿ
Published on
ಸಂಪಾದಕೀಯ: ಸರ್ಕಾರದ ವಿವಿಧ ಇಲಾಖೆಗಳು ಮತ್ತು ಯೋಜನೆಗಳ ಬಗ್ಗೆ ಆಗೀಗ ಆರೋಪಗಳು ಕೇಳಿಬರುವುದು ಎಲ್ಲ ಕಾಲದಲ್ಲೂ ಇದ್ದಿದ್ದೇ. ವಿರೋಧ ಪಕ್ಷಗಳು ಅಥವಾ ಮಾಹಿತಿ ಹಕ್ಕು ಕಾರ್ಯಕರ್ತರು... ಹೀಗೆ ಬೇರೆ ಬೇರೆ ಕಡೆಗಳಿಂದ ಇಂಥ ಅಂಶ ಹೊರಬೀಳಬಹುದು. ಈ ರೀತಿಯ ಆರೋಪ ಕೇಳಿಬಂದಾಗ, ವಿಳಂಬಕ್ಕೆ ಆಸ್ಪದ ನೀಡದೆ ಸೂಕ್ತ ತನಿಖೆ ನಡೆಸಿ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುವ ಕೆಲಸವನ್ನು ಆಡಳಿತದಲ್ಲಿರುವವರು ಮಾಡಬೇಕಾಗುತ್ತದೆ. ಇದರಿಂದ ಸಾರ್ವಜನಿಕ ವಲಯದಲ್ಲಿ ಉಂಟಾದ ಅನುಮಾನ ದೂರಾಗುವುದಲ್ಲದೆ, ಆರೋಪಿಗಳ ಕೃತ್ಯ ಸಾಬೀತಾದರೆ ಅವರ ಮೇಲೆ ಕ್ರಮವಾಗಲು ಅಥವಾ ಆರೋಪದಲ್ಲಿ ಸತ್ಯವಿಲ್ಲ ಎಂದಾದಲ್ಲಿ ಆರೋಪಮುಕ್ತರಾಗಲು ಅನುವಾಗುತ್ತದೆ. ಕೇಂದ್ರ್ರ ಸರ್ಕಾರವು ಮನರೇಗಾ ಯೋಜನೆಯ ಹೆಸರನ್ನು ವಿಬಿ ರಾಮ್ ಜಿ ಎಂದು ಬದಲಿಸಿರುವುದು ಹಾಗೂ ಯೋಜನೆಯ ಸ್ವರೂಪದಲ್ಲಿ ಕೆಲ ಮಾರ್ಪಾಡು ಮಾಡಿರುವುದನ್ನು ಬಿಜೆಪಿಯೇತರ ರಾಜ್ಯ ಸರ್ಕಾರಗಳು ಬಲವಾಗಿ ವಿರೋಧಿಸುತ್ತಿವೆ.
ಕಾಂಗ್ರೆಸ್ ಪಕ್ಷವಂತೂ ಈ ಬಗ್ಗೆ ದೇಶವ್ಯಾಪಿ ದೊಡ್ಡ ಜನಾಂದೋಲನವನ್ನೇ ನಡೆಸಲು ಸಜ್ಜಾಗಿದೆ. ರಾಜ್ಯದಲ್ಲಿ 2019ರಿಂದ 2025ರ ಆರು ವರ್ಷಗಳಲ್ಲಿ ಸುಮಾರು 669 ಕೋಟಿ ರೂ. ಮೊತ್ತದ ಅಕ್ರಮ ಈ ಯೋಜನೆಯಲ್ಲಿ ನಡೆದಿದೆಯೆಂಬುದು ಸಾಮಾಜಿಕ ಲೆಕ್ಕ ಪರಿಶೋಧನೆಯಿಂದ ಗೊತ್ತಾಗಿದೆ. ಇದು ಸರ್ಕಾರದ್ದೇ ದಾಖಲೆ ಎನ್ನುವುದು ವಿಶೇಷ. ನಿಯಮದ ಪ್ರಕಾರ, ನರೇಗಾದಲ್ಲಿ ಮಾನವಶ್ರಮದ ಕೆಲಸ ನಡೆಯಬೇಕು. ಆದರೆ ಜೆಸಿಬಿಯಲ್ಲಿ ಕೆಲಸ ಮಾಡಿ, ಕಾರ್ವಿುಕರ ಹೆಸರಿನಲ್ಲಿ ಮಸ್ಟರ್ ರೋಲ್ ಸೃಷ್ಟಿ, ಸಾಮಗ್ರಿ ಪೂರೈಕೆ ಮಾಡದಿದ್ದರೂ ನಕಲಿ ಬಿಲ್ ಸಲ್ಲಿಕೆ, ಮೃತರು ಅಥವಾ ಊರಲ್ಲಿ ಇಲ್ಲದವರ ಹೆಸರಿನಲ್ಲಿಯೂ ಹಾಜರಾತಿ ದಾಖಲಿಸಿ ಅರ್ಹರಲ್ಲದವರಿಗೆ ಹಣ ವರ್ಗಾವಣೆ- ಈ ಮುಂತಾದ ಅಕ್ರಮಗಳನ್ನು ಉಲ್ಲೇಖಿಸಲಾಗಿದೆ. ಇನ್ನೊಂದೆಡೆ, ರಾಜ್ಯದ ಬೊಕ್ಕಸಕ್ಕೆ ಅತಿ ಹೆಚ್ಚು ಆದಾಯ ತರುವ ಅಬಕಾರಿ ಇಲಾಖೆ ಬಗ್ಗೆ ಪದೇಪದೆ ಆರೋಪಗಳು ಕೇಳಿಬರುತ್ತಿರುವುದು ಕಡೆಗಣಿಸುವ ಸಂಗತಿಯಲ್ಲ.
ಇಲಾಖೆ ಅಕ್ರಮದ ಬಗ್ಗೆ ಆಡಿಯೋಗಳು ಕೂಡ ಹೊರಬರುವುದು ಅಲ್ಲಿ ಏನೋ ನಡೆಯುತ್ತಿದೆಯೆನ್ನುವ ಅನುಮಾನಕ್ಕೆ ಪುಷ್ಟಿನೀಡುತ್ತವೆ. ವರ್ಗಾವಣೆ ದಂಧೆ, ಮಂಥ್ಲಿ ಮನಿ, ಕಿಕ್ ಬ್ಯಾಕ್ ಮುಂತಾದ ಆಪಾದನೆಗಳು ಸಾಲುಸಾಲಾಗಿ ಕೇಳಿಬರುತ್ತಿವೆ. ಈ ನಡುವೆ, ‘ಅಬಕಾರಿ ಇಲಾಖೆಯಲ್ಲಿ 2.5 ಸಾವಿರ ಕೋಟಿ ರೂ. ಲಂಚ ವಹಿವಾಟು ನಡೆದಿದ್ದು, ಈ ಹಣವನ್ನು ಚುನಾವಣೆಗೆ ಬಳಸಲಾಗುತ್ತಿದೆ’ ಎಂದು ಆರೋಪಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರನ್ನು ಸಂಪುಟದಿಂದ ವಜಾಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2024ರಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ, ಕರ್ನಾಟಕದಲ್ಲಿ ಮದ್ಯ ವರ್ತಕರಿಂದ ಹಣ ವಸೂಲಿ ಬಗ್ಗೆ ಪ್ರಸ್ತಾಪಿಸಿದ್ದು ಸಂಚಲನವನ್ನೇ ಉಂಟುಮಾಡಿತ್ತು. ಸಿಎಲ್-7 ಮದ್ಯದ ಪರವಾನಗಿಗೆ ಸಂಬಂಧಿಸಿ ಲಂಚಕ್ಕೆ ಬೇಡಿಕೆಯಿಟ್ಟ ಅಬಕಾರಿ ಅಧಿಕಾರಿಗಳು ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿರುವ ಈಚಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಲಕ್ಷ್ಮೀನಾರಾಯಣ್, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿರುವ ಬೆಳವಣಿಗೆಯೂ ನಡೆದಿದೆ. ಈ ವಿಷಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ತನಿಖೆ ಮೂಲಕ ವಾಸ್ತವವನ್ನು ಜನರೆದುರಿಡುವ ಕೆಲಸವನ್ನು ತುರ್ತಾಗಿ ಮಾಡಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net