ಆದರೆ, ಈ ಮಸೂದೆಯ ಹಾದಿ ಅಷ್ಟು ಸುಲಭವಾಗಿಲ್ಲ. ದಶಕಗಳಿಂದಲೂ ಈ ಮಸೂದೆ ಯಾವುದೋ ಒಂದು ಕಾರಣಕ್ಕೆ ನೆನೆಗುದಿಗೆ ಬೀಳುತ್ತಲೇ ಬಂದಿದೆ. ಕೆಲವು ಪಕ್ಷಗಳು ಒಳಮೀಸಲಾತಿಯ ಬೇಡಿಕೆ ಇಟ್ಟರೆ, ಇನ್ನು ಕೆಲವು ಪಕ್ಷಗಳು ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ತೊಡಗಿವೆ. ಈಗಿನ ವಿಶೇಷ ಅಧಿವೇಶನದಲ್ಲೂ ಅಂತಹುದೇ ‘ರಾಜಕೀಯ ಕೆಸರೆರಚಾಟ’ ಮುಂದುವರಿದರೆ ಅದು ಮಹಿಳಾ ಸಮುದಾಯಕ್ಕೆ ಮಾಡುವ ದ್ರೋಹವಾಗುತ್ತದೆ. ಈ ಸೂಕ್ಷ್ಮ ವಿಷಯದಲ್ಲಿ ರಾಜಕೀಯ ಪಕ್ಷಗಳು ತಮ್ಮ ವೈಯಕ್ತಿಕ ಸಿದ್ಧಾಂತ ಅಥವಾ ಮತಬ್ಯಾಂಕ್ ರಾಜಕಾರಣವನ್ನು ಬದಿಗಿಟ್ಟು, ರಾಷ್ಟ್ರದ ಹಿತದೃಷ್ಟಿಯಿಂದ ಒಮ್ಮತಕ್ಕೆ ಬರಬೇಕಿದೆ.