ಸಂಪಾದಕೀಯ: ಸೂಕ್ತ ತನಿಖೆಯಾಗಲಿ

ಸಂಪಾದಕೀಯ: ಸೂಕ್ತ ತನಿಖೆಯಾಗಲಿ
ಸಂಪಾದಕೀಯ: ಸೂಕ್ತ ತನಿಖೆಯಾಗಲಿ
Published on
ಸಂಪಾದಕೀಯ: ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರ ಅಪ್ರಕಟಿತ ಪುಸ್ತಕ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ರಾಜಕೀಯ ವಲಯದಲ್ಲಿ ಕಂಪನ ಸೃಷ್ಟಿಸಿದ್ದು, ಈ ವಿವಾದದಿಂದ ಸಂಸತ್ತಿನ ಕಲಾಪಕ್ಕೂ ಅಡ್ಡಿಯಾಗಿದೆ. ಭಾರತ ಮತ್ತು ಚೀನಾ ನಡುವೆ 2020ರಲ್ಲಿ ಲಡಾಖ್​ನ ಪಾಂಗಾಂಗ್ ಸರೋವರದ ಬಳಿ ನಡೆದ ಸೇನಾ ತಿಕ್ಕಾಟದ ಬಗ್ಗೆ ನರವಣೆ ತಮ್ಮ ಈ ಪುಸ್ತಕದಲ್ಲಿ ಉಲ್ಲೇಖಿಸಿದ್ದು, ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂಬುದು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರ ಆಗ್ರಹ. ಆದರೆ, ಇಡೀ ಪ್ರಕರಣವನ್ನು ಅವಲೋಕಿಸಿದರೆ ಹಲವು ಅನುಮಾನಗಳು ದಟ್ಟವಾಗಿದ್ದು, ಸಾಕಷ್ಟು ಪ್ರಶ್ನೆಗಳನ್ನು ಸೃಷ್ಟಿಸಿದೆ. ಪುಸ್ತಕ ಪ್ರಕಾಶನದ ಹಕ್ಕು ಹೊಂದಿರುವ ಪೆಂಗ್ವಿನ್ ಇಂಡಿಯಾ, ನರವಣೆ ಆತ್ಮಚರಿತ್ರೆಯು ಪ್ರಕಟವಾಗಿಲ್ಲ ಮತ್ತು ಯಾವುದೇ ಅಧಿಕೃತ ಪ್ರತಿಗಳು ಅಸ್ತಿತ್ವದಲ್ಲಿಲ್ಲ ಎಂದು ಸ್ಪಷ್ಟಪಡಿಸಿದೆ. ಪುಸ್ತಕ ಇನ್ನೂ ಪ್ರಕಟಗೊಂಡಿಲ್ಲ ಎಂದು ನರವಣೆ ಅವರು ಕೂಡ ಸ್ಪಷ್ಟನೆ ನೀಡಿದ್ದಾರೆ.
ಹೀಗಿರುವಾಗ, ಪುಸ್ತಕ ಲೋಕಾರ್ಪಣೆಯಾಗುವ ಮುಂಚೆಯೇ ಅದರ ಪ್ರತಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಬಳಿ ತಲುಪಿದ್ದು ಹೇಗೆ? ಕೆಲ ನಿರ್ದಿಷ್ಟ ಭಾಗ ಮಾತ್ರ ಸೋರಿಕೆಯಾಗಿದ್ದು ಏಕೆ? ಇದರ ಹಿಂದೆ ವ್ಯವಸ್ಥಿತ ರಾಜಕೀಯ ಷಡ್ಯಂತ್ರ ಅಡಗಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಅದರಲ್ಲೂ, ಸಂಸತ್ ಬಜೆಟ್ ಅಧಿವೇಶನದ ಹೊತ್ತಲ್ಲೇ ಈ ವಿವಾದದ ಕಿಡಿ ಸೃಷ್ಟಿಯಾಗಿರುವುದನ್ನು ನೋಡಿದರೆ, ಈ ಇಡೀ ಪ್ರಕರಣ ಮೇಲ್ನೋಟಕ್ಕೆ ಕಂಡಷ್ಟು ಸುಲಭವಾಗಿಲ್ಲ. ಸತ್ಯಾಂಶ ಏನಿದೆ ಎಂಬ ಕುತೂಹಲ ಜನಸಾಮಾನ್ಯರಲ್ಲೂ ನೆಲೆಸಿದೆ. ಆದ್ದರಿಂದ ಈ ಪ್ರಕರಣದ ಬಗ್ಗೆ ಸೂಕ್ತ ಹಾಗೂ ಪಾರದರ್ಶಕ ತನಿಖೆ ನಡೆದು, ವಾಸ್ತವ ಬಹಿರಂಗಗೊಳ್ಳಬೇಕು.
ದೆಹಲಿ ಪೊಲೀಸರ ವಿಶೇಷ ವಿಭಾಗ ಬಹು ರಾಷ್ಟ್ರೀಯ ತನಿಖೆಯನ್ನು ತೀವ್ರಗೊಳಿಸಿದ್ದು, ಮಹತ್ವದ ಮಾಹಿತಿಯನ್ನು ಕಲೆ ಹಾಕಿದೆ ಎಂದು ಮೂಲಗಳು ಹೇಳಿವೆ. ರಕ್ಷಣಾ ಸಚಿವಾಲಯದ ಅನುಮತಿಯನ್ನೇ ಪಡೆಯದೆ ಪುಸ್ತಕವು ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸಿರುವುದು ನಿಜಕ್ಕೂ ಆಘಾತಕಾರಿ ಸಂಗತಿ. ರಕ್ಷಣೆಗೆ ಸಂಬಂಧಿತ ಪ್ರಕಟಣೆಗಳಿಗೆ ಉದ್ದೇಶಿಸಲಾದ ಅಧಿಕೃತ ಅನುಮೋದನೆ ಪ್ರಕ್ರಿಯೆಗಳನ್ನು ಮರೆಮಾಚಿ ಯೋಜಿತ ಮತ್ತು ಸಂಘಟಿತವಾಗಿ ಈ ಕೃತ್ಯ ನಡೆಸಲಾಗಿದೆ ಎಂದು ತನಿಖೆಯ ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ. ‘ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ’ಗೆ ದೆಹಲಿ ಪೊಲೀಸ್ ವಿಶೇಷ ತಂಡ ನೋಟಿಸ್ ಜಾರಿಗೊಳಿಸಿದೆ.
ಅಧಿಕೃತ ಅನುಮತಿ ಪಡೆಯುವ ಮುನ್ನವೇ ಪುಸ್ತಕವನ್ನು ಆನ್​ಲೈನ್​ನಲ್ಲಿ ಲಭ್ಯವಾಗುವಂತೆ ಮಾಡಿದ್ದು ಅಕ್ಷಮ್ಯವೇ ಸರಿ. ಪುಸ್ತಕದ ಮಾಹಿತಿ ಸೋರಿಕೆ ನಿಜಕ್ಕೂ ಗಂಭೀರ ವಿಷಯವಾಗಿದ್ದು, ಈ ಕುರಿತಂತೆ ಅಮೆರಿಕ, ಕೆನಡಾ, ಜರ್ಮನಿ ಮತ್ತು ಆಸ್ಟ್ರೇಲಿಯಾ ಪೊಲೀಸರು ಸಹ ತನಿಖೆ ನಡೆಸುತ್ತಿದ್ದಾರೆ. ಈ ಇಡೀ ಪ್ರಕ್ರಿಯೆಯಲ್ಲಿ ಯಾರು ಎಡವಿದ್ದಾರೆ ಅಥವಾ ಉದ್ದೇಶಪೂರ್ವಕವಾಗಿ ತಪು್ಪ ಮಾಡಿದ್ದಾರೆ ಎಂಬ ಸಂಗತಿ ಶೀಘ್ರದಲ್ಲೇ ಬಹಿರಂಗಗೊಳ್ಳುವ ಸಾಧ್ಯತೆ ಇದೆ. ಒಟ್ಟಾರೆ, ದೇಶದ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ವಿಷಯಗಳ ಬಗ್ಗೆ ರಾಜಕೀಯ ಮಾಡುವುದು ಸಲ್ಲ. ಈ ಕುರಿತ ಗೊಂದಲಗಳಿಗೆ ತೆರೆ ಎಳೆಯಬೇಕಾದರೆ ಪ್ರಕರಣದ ತನಿಖೆ ರ್ತಾಕ ಅಂತ್ಯ ಕಾಣಬೇಕು. ತಪು್ಪ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net