ಸಂಪಾದಕೀಯ: ಹೆದ್ದಾರಿ ಸುರಕ್ಷತೆಯ ಆತಂಕ

ಸಂಪಾದಕೀಯ: ಹೆದ್ದಾರಿ ಸುರಕ್ಷತೆಯ ಆತಂಕ
ಸಂಪಾದಕೀಯ: ಹೆದ್ದಾರಿ ಸುರಕ್ಷತೆಯ ಆತಂಕ
Published on
ಸಂಪಾದಕೀಯ: ರಾಷ್ಟ್ರೀಯ ಹೆದ್ದಾರಿಗಳು ಇತ್ತೀಚಿನ ದಿನಗಳಲ್ಲಿ ವೇಗದ ರಸ್ತೆಯಾಗುವ ಬದಲು ಸಾವಿಗೆ ಮಾರ್ಗ ತೋರುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ. ನೆಲಮಂಗಲ ಸಮೀಪದ ಜಿಂದಾಲ್ ಫ್ಲೈಓವರ್ ಬಳಿ ಸಂಭವಿಸಿದ ಭೀಕರ ಅಪಘಾತ ಹೆದ್ದಾರಿ ಸುರಕ್ಷತೆಯ ಕುರಿತಾದ ನಮ್ಮ ವ್ಯವಸ್ಥೆಯ ವೈಫಲ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಕಾರೊಂದು ಡಿವೈಡರ್ ಹಾರಿ ಕೆಎಸ್​ಆರ್​ಟಿಸಿ ಬಸ್​ಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಐವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಐದು ಕುಟುಂಬಗಳ ಭವಿಷ್ಯದ ಆಧಾರಸ್ತಂಭಗಳು ಕುಸಿದು ಬಿದ್ದಿವೆ. ಇತ್ತೀಚೆಗಷ್ಟೇ ಹೊಸಕೋಟೆ ಬಳಿ ಕೂಡ ಇಂತಹುದೇ ಅಪಘಾತ ಸಂಭವಿಸಿತ್ತು. ಸ್ಯಾಟಲೈಟ್ ರಿಂಗ್ ರೋಡ್​ನಲ್ಲಿ (ಎಸ್​ಟಿಆರ್​ಆರ್) ಅತಿವೇಗವಾಗಿ ಬಂದ ಕಾರು ಮೊದಲು ಬೈಕ್​ಗೆ ಡಿಕ್ಕಿ ಹೊಡೆದು, ನಂತರ ಕ್ಯಾಂಟರ್​ಗೆ ಗುದ್ದಿತ್ತು. ಈ ದುರಂತದಲ್ಲಿ ಆರು ಮಂದಿ ವಿದ್ಯಾರ್ಥಿಗಳು ಹಾಗೂ ಒಬ್ಬ ಬೈಕ್ ಸವಾರ ಸೇರಿದಂತೆ ಒಟ್ಟು 7 ಜನರು ಮೃತಪಟ್ಟಿದ್ದರು.
150-160 ಕಿ.ಮೀ ವೇಗವೇ ಈ ಅಪಘಾತಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಇದೇ ಸ್ಥಳದಲ್ಲಿ ಪದೇಪದೆ ಅಪಘಾತಗಳು ಸಂಭವಿಸುತ್ತಿರುವುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಭೀಕರ ಅಪಘಾತದ ಕರಾಳ ನೆನಪು ಮಾಸುವ ಮುನ್ನವೇ ಮತ್ತೊಂದು ಘಟನೆ ಸಂಭವಿಸಿರುವುದು ಆತಂಕ ಮೂಡಿಸಿದೆ.
ಪೊಲೀಸರ ಪ್ರಾಥಮಿಕ ವರದಿಯ ಪ್ರಕಾರ, ನೆಲಮಂಗಲದ ಭೀಕರ ಅವಘಡಕ್ಕೂ ಅತಿಯಾದ ವೇಗವೇ ಪ್ರಮುಖ ಕಾರಣ. ರಾತ್ರಿ ವೇಳೆ ಖಾಲಿ ಇರುವ ಹೆದ್ದಾರಿಗಳಲ್ಲಿ ಜಾಲಿ ರೈಡ್ ಹೆಸರಿನಲ್ಲಿ ಯುವಕರು ಮಾಡುವ ಸಾಹಸಗಳು ಸಾವಿನಲ್ಲಿ ಕೊನೆಗೊಳ್ಳುತ್ತಿವೆ. ಅಜಾಗರೂಕ ಚಾಲನೆ ಮತ್ತು ಸಂಚಾರ ನಿಯಮಗಳ ಉಲ್ಲಂಘನೆ ಕೇವಲ ಆ ವಾಹನದ ಚಾಲಕನನ್ನಷ್ಟೇ ಅಲ್ಲ, ರಸ್ತೆಯಲ್ಲಿ ಸಂಚರಿಸುವ ಇತರರನ್ನೂ ಬಲಿ ತೆಗೆದುಕೊಳ್ಳುತ್ತದೆ.
ಹೆದ್ದಾರಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆಯಾದರೂ, ಅವು ಕೇವಲ ದಂಡ ವಿಧಿಸಲು ಅಥವಾ ಅಪಘಾತದ ದೃಶ್ಯಗಳನ್ನು ನೋಡಲು ಸೀಮಿತವಾಗಿವೆ. ಈಗಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಅತಿವೇಗವನ್ನು ತಡೆಯುವಲ್ಲಿ ಕಟ್ಟುನಿಟ್ಟಿನ ತಾಂತ್ರಿಕ ಕ್ರಮಗಳ ಕೊರತೆ ಎದ್ದು ಕಾಣುತ್ತಿದೆ. ಕೇವಲ ದಂಡ ವಿಧಿಸುವುದರಿಂದ ಚಾಲಕರ ಮನಸ್ಥಿತಿಯಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ. ಸಂಚಾರ ನಿಯಮಗಳ ಪಾಲನೆ ಮತ್ತು ಸುರಕ್ಷಿತ ಚಾಲನೆಯ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸಬೇಕಿದೆ. ಚಾಲನಾ ಪರವಾನಗಿ ನೀಡುವ ಪ್ರಕ್ರಿಯೆಯಿಂದ ಹಿಡಿದು, ಹೆದ್ದಾರಿ ಗಸ್ತು ದಳದ ಕಾರ್ಯವೈಖರಿಯವರೆಗೆ ಎಲ್ಲೂ ರಾಜಿ ಇರಬಾರದು.
ಸರ್ಕಾರ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪದೇಪದೆ ಅಪಘಾತ ಸಂಭವಿಸುವ ‘ಬ್ಲಾ್ಯಕ್​ಸ್ಪಾಟ್’ಗಳನ್ನು ಗುರುತಿಸಿ, ಅಲ್ಲಿ ರಸ್ತೆ ವಿನ್ಯಾಸವನ್ನು ವೈಜ್ಞಾನಿಕವಾಗಿ ಸರಿಪಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ರಸ್ತೆ ವಿಭಜಕಗಳ ಎತ್ತರವನ್ನು ಹೆಚ್ಚಿಸುವುದು, ರಾತ್ರಿ ವೇಳೆ ಹೆಚ್ಚಿನ ಬೆಳಕಿನ ವ್ಯವಸ್ಥೆ ಮಾಡುವುದು, ಸಂಕೇತ ಫಲಕಗಳನ್ನು ಅಳವಡಿಸುವುದು ಅನಿವಾರ್ಯ. ರಸ್ತೆ ಸುರಕ್ಷತೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ವೇಗದ ಅಮಲು ಇಳಿಸಿಕೊಂಡು, ವಿವೇಕದ ಚಾಲನೆಗೆ ಮನಸ್ಸು ಮಾಡಿದಾಗ ಮಾತ್ರ ಹೆದ್ದಾರಿಗಳು ಸುರಕ್ಷಿತವಾಗಿರಲು ಸಾಧ್ಯ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net