ಸಂಪಾದಕೀಯ: ಅವ್ಯವಸ್ಥೆ ನಿವಾರಿಸಿ

ಸಂಪಾದಕೀಯ: ಅವ್ಯವಸ್ಥೆ ನಿವಾರಿಸಿ
ಸಂಪಾದಕೀಯ: ಅವ್ಯವಸ್ಥೆ ನಿವಾರಿಸಿ
Published on

ಸಂಪಾದಕೀಯ: ರಾಜ್ಯದಲ್ಲಿ ರಾಷ್ಟ್ರೀಯ ಜನಗಣತಿಗೆ ಸ್ವಯಂ ನೋಂದಣಿಯ ನಂತರ ಏಪ್ರಿಲ್ 16ರಿಂದ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಕಾರ್ಯ ಆರಂಭವಾಗಿದ್ದು, ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕಿದೆ. ಆದರೆ, ಜನಗಣತಿಯಂಥ ಮಹತ್ವದ ಪ್ರಕ್ರಿಯೆಯನ್ನು ಸೂಕ್ತ ಸಿದ್ಧತೆ ನಡೆಸದೆ ಆರಂಭಿಸಿರುವುದು ಏಕೆ? ಈ ವಿಷಯದಲ್ಲಿ ನಿರ್ಲಕ್ಷ್ಯ ಸಲ್ಲ. ಜನಗಣತಿಗೆ ಸಿಬ್ಬಂದಿಯನ್ನು ನಿಯೋಜಿಸಿದ್ದರೂ, ಅವರಿಗೆ ಸೂಕ್ತ ಪರಿಕರಗಳನ್ನೇ ನೀಡಲಾಗಿಲ್ಲ. ತರಬೇತಿಯನ್ನು ಕೂಡ ಭಾರಿ ತರಾತುರಿಯಲ್ಲಿ ನೀಡಲಾಗಿದ್ದು, ತಾಂತ್ರಿಕ ಅಂಶಗಳನ್ನು ಸರಿಯಾಗಿ ವಿವರಿಸಲಾಗಿಲ್ಲ. ಆಪ್ ಪದೇಪದೆ ಕೈಕೊಡುತ್ತಿದ್ದು, ಸಿಬ್ಬಂದಿ ಹೈರಾಣಾಗಿದ್ದಾರೆ. ಜನಗಣತಿ ಎಂಬುದು ರಾಷ್ಟ್ರದ ಪ್ರಗತಿ ಮತ್ತು ಭವಿಷ್ಯದ ಯೋಜನೆಗಳನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಆದರೆ, ಇಷ್ಟೊಂದು ಬೇಜವಾಬ್ದಾರಿಯುತವಾಗಿ ಈ ಪ್ರಕ್ರಿಯೆ ನಡೆಸುತ್ತಿರುವುದು ದುರದೃಷ್ಟಕರ. ಇನ್ನಾದರೂ ಕೊರತೆಗಳನ್ನು ನೀಗಿಸಿ, ಕುಂಟುತ್ತ ಸಾಗಿರುವ ಜನಗಣತಿಗೆ ವೇಗ ನೀಡಬೇಕಿದೆ. ಅಗತ್ಯವಿದ್ದರೆ ಕಾಲಮಿತಿಯನ್ನು ವಿಸ್ತರಿಸಬೇಕೇ ಹೊರತು ತರಾತುರಿಯಲ್ಲಿ ಅಪೂರ್ಣವಾಗಿ ಜನಗಣತಿ ಕಾರ್ಯವನ್ನು ಮುಗಿಸಬಾರದು.

ಒಬ್ಬ ಎಣಿಕೆದಾರನಿಗೆ ಆರಂಭದಲ್ಲಿ 200 ಮನೆಗಳನ್ನು ನಿಗದಿಪಡಿಸಲಾಗಿತ್ತು, ಆದರೆ ಪ್ರಸ್ತುತ ಈ ಸಂಖ್ಯೆ 300ಕ್ಕೂ ಹೆಚ್ಚಿದೆ. ಇದು ಸಿಬ್ಬಂದಿ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡಿದೆ.

ಬೆಂಗಳೂರಿನಲ್ಲಿ 6,000ಕ್ಕೂ ಹೆಚ್ಚು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದು ವರದಿಯಾಗಿದೆ. ಇದರಿಂದಾಗಿ ಮನೆ-ಮನೆಗೆ ಭೇಟಿ ನೀಡುವ ಪ್ರಕ್ರಿಯೆ ವಿಳಂಬವಾಗುತ್ತಿದೆ. ಆದರೆ, ಶಿಕ್ಷಕರಿಗೆ ಒಂದಾದ ಬಳಿಕ ಮತ್ತೊಂದು ಕೆಲಸಗಳಿಗೆ ಬಿಡುವಿಲ್ಲದೆ ನಿಯೋಜನೆ ಮಾಡಲಾಗುತ್ತಿದ್ದು, ಗೈರುಹಾಜರಿ ಪ್ರಮಾಣವನ್ನು ಹೆಚ್ಚಿಸಿದೆ. ಮತದಾರರ ಪಟ್ಟಿ ಪರಿಷ್ಕರಣೆ, ಪರೀಕ್ಷಾ ಕರ್ತವ್ಯಗಳು ಮತ್ತು ಸ್ಥಳೀಯ ಚುನಾವಣೆಗಳ ತಯಾರಿಯಲ್ಲಿ ಅದೇ ಸಿಬ್ಬಂದಿಯನ್ನು ತೊಡಗಿಸಿಕೊಂಡಿರುವುದು ಜನಗಣತಿ ವೇಗವನ್ನು ಕುಗ್ಗಿಸಿದೆ. ಹಾಗಾಗಿ, ಪದವೀಧರ ಯುವಕ-ಯುವತಿಯರನ್ನು ಗೌರವಧನದ ಆಧಾರದಲ್ಲಿ ತಾತ್ಕಾಲಿಕವಾಗಿ ನೇಮಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಆದರೆ, ಕೊನೆಯ ಕ್ಷಣದಲ್ಲಿ ಈ ನಿರ್ಧಾರ ತಳೆದಿರುವುದರಿಂದ ಇದಕ್ಕೆ ಸ್ಪಂದನೆ ಹೇಗೆ ದೊರೆಯಲಿದೆ ಎಂಬುದನ್ನು ಕಾದುನೋಡಬೇಕು.

ಈ ಬಾರಿಯ ಜನಗಣತಿ ಡಿಜಿಟಲ್ ರೂಪದಲ್ಲಿದ್ದು, ಇದಕ್ಕಾಗಿ ಬಳಸುತ್ತಿರುವ ಮೊಬೈಲ್ ಅಪ್ಲಿಕೇಶನ್ (ಆಪ್) ಹಳೆಯ ಫೋನ್​ಗಳಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅನೇಕ ಶಿಕ್ಷಕರು ಮತ್ತು ಸಿಬ್ಬಂದಿಗೆ ಆಧುನಿಕ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಫೋನ್​ಗಳ ಕೊರತೆಯಿದೆ. ಜನರಿಗೆ ಆನ್​ಲೈನ್ ಮೂಲಕ ತಾವೇ ಮಾಹಿತಿ ನೀಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, 2%ಕ್ಕಿಂತ ಕಡಿಮೆ ಜನರು ಮಾತ್ರ ಈ ಸೌಲಭ್ಯ ಬಳಸಿಕೊಂಡಿದ್ದಾರೆ.

ಒಂದೇ ಸಮಯದಲ್ಲಿ ಹಲವಾರು ಸಮೀಕ್ಷೆಗಳನ್ನು ನಡೆಸುವ ಬದಲು, ಜನಗಣತಿಗೆ ನಿಗದಿತ ಸಮಯವನ್ನು ಮೀಸಲಿಟ್ಟು ಇತರ ಆಡಳಿತಾತ್ಮಕ ಕೆಲಸಗಳನ್ನು ತಾತ್ಕಾಲಿಕವಾಗಿ ಮುಂದೂಡುವುದು ಉತ್ತಮ. ಈ ನಿಟ್ಟಿನಲ್ಲಿ ಜನಗಣತಿಯಲ್ಲಿ ತೊಡಗಿರುವ ಸಿಬ್ಬಂದಿಗೆ ಸೂಕ್ತ ಗೌರವಧನ ಮತ್ತು ಸಾರಿಗೆ ಭತ್ಯೆ ನೀಡಬೇಕು. ಮೊಬೈಲ್ ಆಪ್​ನಲ್ಲಿರುವ ತಾಂತ್ರಿಕ ದೋಷಗಳನ್ನು ತಕ್ಷಣ ಸರಿಪಡಿಸಬೇಕು. ಈ ಬಾರಿಯ ಜನಗಣತಿಯು 2027ರ ಜನವರಿ-ಫೆಬ್ರವರಿ ವೇಳೆಗೆ ಪೂರ್ಣಗೊಳ್ಳಬೇಕಾದ ಎರಡನೇ ಹಂತದ (ಜನಸಂಖ್ಯಾ ಎಣಿಕೆ ಮತ್ತು ಜಾತಿ ಗಣತಿ) ಪ್ರಕ್ರಿಯೆಗೆ ಅಡಿಪಾಯವಾಗಿದ್ದು, ಮೊದಲ ಹಂತವು ಸರಿಯಾದ ಸಮಯದಲ್ಲಿ ಮತ್ತು ಸಮರ್ಪಕವಾಗಿ ಪೂರ್ಣಗೊಳ್ಳುವುದು ಅಗತ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net