ಸಂಪಾದಕೀಯ: ಕಳವಳಕಾರಿ ವರ್ತನೆ

ಸಂಪಾದಕೀಯ: ಕಳವಳಕಾರಿ ವರ್ತನೆ
ಸಂಪಾದಕೀಯ: ಕಳವಳಕಾರಿ ವರ್ತನೆ
Published on
ಸಂಪಾದಕೀಯ: ಬಳ್ಳಾರಿಯ ಖಾಸಗಿ ವಸತಿ ಶಾಲೆಯ ಆವರಣದಲ್ಲಿ ನಡೆದ ಭೀಕರ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಒಂಬತ್ತನೇ ತರಗತಿಯ ವಿದ್ಯಾರ್ಥಿ ಡಿ. ಹೇಮಂತ್ ಎಂಬ ವಿದ್ಯಾರ್ಥಿ ತನ್ನದೇ ಸಹಪಾಠಿಯ ಹಲ್ಲೆಗೆ ಬಲಿಯಾಗಿದ್ದಾನೆ. ಇದು ನಮ್ಮ ಇಂದಿನ ಶೈಕ್ಷಣಿಕ ವ್ಯವಸ್ಥೆ ಮತ್ತು ಸಾಮಾಜಿಕ ಸ್ವಾಸ್ಥ್ಯದ ಬಗೆಗಿನ ದೊಡ್ಡ ಎಚ್ಚರಿಕೆ ಗಂಟೆ. ವಿದ್ಯಾಕೇಂದ್ರಗಳು ಜ್ಞಾನದ ದೇಗುಲಗಳಾಗುವ ಬದಲು ಹಿಂಸಾಚಾರದ ತಾಣಗಳಾಗಿ ಬದಲಾಗುತ್ತಿರುವುದು ಅತ್ಯಂತ ಶೋಚನೀಯ ಸಂಗತಿ.
ಈ ಪ್ರಕರಣದಲ್ಲಿ ಈಗಾಗಲೇ ಏಳು ಮಂದಿ ಅಧಿಕಾರಿಗಳ ತಂಡ ತನಿಖೆ ಆರಂಭಿಸಿದೆ. ಶಾಲಾ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಾಗಿದೆ. ಕಾನೂನು ಕ್ರಮಗಳು ಒಂದು ಕಡೆಯಾದರೆ, ಮೂಲಭೂತವಾಗಿ ಇಂತಹ ಘೊರ ಕೃತ್ಯಕ್ಕೆ ಕಾರಣವಾಗುವ ವಿದ್ಯಾರ್ಥಿಗಳ ‘ಮಾನಸಿಕ ಸ್ಥಿತಿ’ಯ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ. ಹದಿಹರೆಯದ ಮಕ್ಕಳಲ್ಲಿ ಬೆಳೆಯುತ್ತಿರುವ ಅತಿಯಾದ ಕೋಪ, ಅಸಹನೆ ಮತ್ತು ಹಿಂಸಾತ್ಮಕ ಪ್ರವೃತ್ತಿ ಎಲ್ಲಿಂದ ಬರುತ್ತಿದೆ ಎಂಬುದು ಇಂದಿನ ಯಕ್ಷಪ್ರಶ್ನೆ.
ವಸತಿ ಶಾಲೆಗಳಲ್ಲಿ ಮಕ್ಕಳು ದಿನದ 24 ಗಂಟೆಯೂ ಶಾಲೆಯ ಉಸ್ತುವಾರಿಯಲ್ಲಿರುತ್ತಾರೆ. ಪಾಲಕರು ತಮ್ಮ ಮಕ್ಕಳ ಸುರಕ್ಷತೆ ಮತ್ತು ಭವಿಷ್ಯದ ನಂಬಿಕೆಯ ಮೇಲೆ ಮಕ್ಕಳನ್ನು ಅಲ್ಲಿಗೆ ಕಳುಹಿಸುತ್ತಾರೆ. ಹೀಗಿರುವಾಗ, ಶಾಲಾ ಆವರಣದಲ್ಲಿಯೇ ಒಬ್ಬ ವಿದ್ಯಾರ್ಥಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಯುವವರೆಗೆ ಅಲ್ಲಿನ ವಾರ್ಡನ್ ಅಥವಾ ಶಿಕ್ಷಕರಿಗೆ ತಿಳಿಯಲಿಲ್ಲ ಎಂದರೆ ಅದು ಆಡಳಿತ ಮಂಡಳಿಯ ಘೊರ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಕೇವಲ ಪಠ್ಯಪುಸ್ತಕದ ಬೋಧನೆ ಮತ್ತು ಅಂಕ ಗಳಿಕೆಗೆ ಸೀಮಿತವಾಗಿರುವ ಶಿಕ್ಷಣ ಸಂಸ್ಥೆಗಳು, ಮಕ್ಕಳ ನಡವಳಿಕೆ ಮತ್ತು ಮಾನಸಿಕ ಬದಲಾವಣೆಗಳನ್ನು ಗಮನಿಸುವಲ್ಲಿ ಸೋಲುತ್ತಿವೆ.
ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಹಿಂಸಾತ್ಮಕ ವಿಡಿಯೋ ಗೇಮ್ಳು ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ. ಸಣ್ಣಪುಟ್ಟ ಜಗಳಗಳು ವಿಕೋಪಕ್ಕೆ ಹೋಗುವುದು, ಸೇಡು ತೀರಿಸಿಕೊಳ್ಳುವ ಛಲ ಬೆಳೆಯುವುದು ಅಪಾಯಕಾರಿ ಲಕ್ಷಣಗಳು. ಪ್ರತಿ ಶಾಲೆಯಲ್ಲೂ ಒಬ್ಬ ನುರಿತ ಆಪ್ತ ಸಮಾಲೋಚಕರು ಇರುವುದು ಇಂದಿನ ಅನಿವಾರ್ಯತೆ. ವಿದ್ಯಾರ್ಥಿಗಳ ನಡುವಿನ ವೈಮನಸ್ಯವನ್ನು ಆರಂಭಿಕ ಹಂತದಲ್ಲೇ ಗುರುತಿಸಿ, ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿದ್ದರೆ ಹೇಮಂತ್ ಅವರ ಪ್ರಾಣ ಉಳಿಸಬಹುದಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ಪಾರದರ್ಶಕವಾಗಿ ನಡೆಯಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಆದರೆ, ಶಿಕ್ಷೆಗಿಂತ ಹೆಚ್ಚಾಗಿ ತಡೆಗಟ್ಟುವಿಕೆ ಮುಖ್ಯ. ಸರ್ಕಾರ ಮತ್ತು ಶಿಕ್ಷಣ ಇಲಾಖೆ ಕೇವಲ ನೋಟಿಸ್ ನೀಡುವುದಕ್ಕೆ ಸೀಮಿತವಾಗದೆ, ರಾಜ್ಯದಾದ್ಯಂತ ಇರುವ ವಸತಿ ಶಾಲೆಗಳಲ್ಲಿ ಸುರಕ್ಷತಾ ಆಡಿಟ್ ನಡೆಸಬೇಕು. ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಮಾತ್ರವಲ್ಲದೆ, ಮಾನವೀಯ ಸಂಬಂಧಗಳನ್ನು ಬೆಳೆಸುವ ಪಠ್ಯೇತರ ಚಟುವಟಿಕೆಗಳಿಗೆ ಒತ್ತು ನೀಡಬೇಕು.
ಮಕ್ಕಳ ಬೆಳೆವಣಿಗೆಯಲ್ಲಿ ಪೋಷಕರು ಮತ್ತು ಶಿಕ್ಷಕರು ಕೇವಲ ಮಾರ್ಗದರ್ಶಕರಾಗದೆ, ಅವರ ಭಾವನೆಗಳನ್ನು ಅರ್ಥೈಸಿಕೊಳ್ಳುವ ಸ್ನೇಹಿತರಾಗಬೇಕಿದೆ. ಬಳ್ಳಾರಿಯ ಈ ದುರಂತ ಎಲ್ಲರ ಕಣ್ಣು ತೆರೆಸಲಿ. ಇನ್ನು ಮುಂದೆ ಯಾವುದೇ ಮಗುವಿಗೆ ಶಾಲೆಯ ಆವರಣದಲ್ಲಿ ಹೀಗಾಗದಂತೆ ನೋಡಿಕೊಳ್ಳುವುದು ಇಡೀ ಸಮಾಜದ ಹೊಣೆಗಾರಿಕೆಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net