ಸಂಪಾದಕೀಯ: ಎಚ್ಚರ ಅಗತ್ಯ

ಸಂಪಾದಕೀಯ: ಎಚ್ಚರ ಅಗತ್ಯ
ಸಂಪಾದಕೀಯ: ಎಚ್ಚರ ಅಗತ್ಯ
Published on
ಸಂಪಾದಕೀಯ: ತಂತ್ರಜ್ಞಾನ ಮುಂದುವರಿದ ಹಾಗೆ ಅದರ ಉಪಯೋಗಗಳು ಹೆಚ್ಚುತ್ತಿರುವುದರಿಂದಾಗಿ ಜನಜೀವನಕ್ಕೆ ಅನುಕೂಲವಾಗಿದೆ. ಅದೇ ಹೊತ್ತಿಗೆ ತಂತ್ರಜ್ಞಾನದ ದುರುಪಯೋಗ ಕೂಡ ವ್ಯಾಪಕವಾಗಿ ಆಗುತ್ತಿರುವುದು ಕಳವಳಕಾರಿ ವಿದ್ಯಮಾನ. ಬ್ಯಾಂಕ್ ಖಾತೆಗಳಿಗೆ ಕನ್ನಹಾಕುವುದು, ಸೈಬರ್ ವಂಚನೆ, ಡಿಜಿಟಲ್ ಅರೆಸ್ಟ್, ಎಐ ಬಳಸಿಕೊಂಡು ವ್ಯಕ್ತಿತ್ವಕ್ಕೆ ಹಾನಿಯುಂಟು ಮಾಡುವ ಕಂಟೆಂಟ್‌ಗಳನ್ನು ಸೃಷ್ಟಿಸಿ ಅಂತರ್ಜಾಲದಲ್ಲಿ ಹರಿಬಿಡುವುದು... ಹೀಗೆ ನಾನಾ ತರಹದ ಕುಕೃತ್ಯಗಳನ್ನು ದಿನಂಪ್ರತಿ ನೋಡುತ್ತಿದ್ದೇವೆ. ಡಿಜಿಟಲ್ ವಂಚನೆಗೆ ದೇಶಗಡಿಗಳ ಹಂಗಿಲ್ಲ. ಇದರಿಂದಾಗಿ ಅಮಾಯಕರು ಆರ್ಥಿಕ ಹಾಗೂ ಮಾನಸಿಕ ತೊಂದರೆ ಅನುಭವಿಸುವಂತಾಗುತ್ತದೆ. ಸೈಬರ್ ವಂಚಕರು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಇಲಾಖೆ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿ 6,300 ಹುದ್ದೆಗಳ ನೇರ ನೇಮಕಾತಿ ಎಂದು ಪ್ರಚಾರ ಮಾಡಿ ಟೋಪಿ ಹಾಕಿರುವುದು ಈಗ ಬೆಳಕಿಗೆ ಬಂದಿದೆ.
ಕೇಂದ್ರ ಸರ್ಕಾರದ ಅಧಿಕೃತ ನೇಮಕಾತಿಯಂತೆ ಕಾಣುವ ಹಾಗೆ ವೆಬ್‌ಸೈಟ್ ವಿನ್ಯಾಸ ಮಾಡಿದ್ದರಿಂದಾಗಿ ಅರ್ಜಿ ಹಾಕುವವರು ಬೇಸ್ತು ಬಿದ್ದಿದ್ದಾರೆ. ಅದರಲ್ಲಿ ಬಳಸಿರುವ ಲೋಗೋ, ಅಧಿಕೃತ ಭಾಷಾಶೈಲಿ ಕೂಡ ಯಾಮಾರಿಸುವಂತಿವೆ. ಪ್ರತಿ ಅರ್ಜಿಗೆ 600 ರೂ. ನೋಂದಣಿ ಶುಲ್ಕ ನಿಗದಿ ಮಾಡಲಾಗಿದ್ದು, ಕೇಂದ್ರ ಸರ್ಕಾರದ ನೇಮಕಾತಿ ಎಂದು ಬಿಂಬಿಸಿದ್ದರಿಂದಾಗಿ, ನಿಖರ ಸಂಖ್ಯೆ ಗೊತ್ತಿಲ್ಲದಿದ್ದರೂ ದೊಡ್ಡ ಸಂಖ್ಯೆಯ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿರುವುದಂತೂ ನಿಜ. ಈ ವೆಬ್‌ಸೈಟ್ ಅನ್ನು 20 ದಿನಗಳ ಕಾಲ ಚಾಲ್ತಿಯಲ್ಲಿಟ್ಟಿದ್ದು, ಕೋಟ್ಯಂತರ ರೂ.ಗಳು ವಂಚಕರ ಜೇಬು ಸೇರಿದೆ. ಏಕೆಂದರೆ ಸಾಮಾನ್ಯವಾಗಿ ಕೇಂದ್ರ ಸರ್ಕಾರದ ಹುದ್ದೆಗಳಿಗೆ 5ರಿಂದ 10 ಲಕ್ಷದಷ್ಟು ಸಂಖ್ಯೆಯ ಆಕಾಂಕ್ಷಿಗಳು ಅರ್ಜಿ ಸಲ್ಲಿಸುತ್ತಾರೆ ಎಂಬ ಅಂದಾಜಿದೆ. ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕವಾಗಿ ಪ್ರಸಾರ ಮಾಡಲಾಗಿದೆ.
ಕೆಲ ರಾಜ್ಯಗಳ ಕಾರ್ಮಿಕ ಇಲಾಖೆಗೂ ನಕಲಿ ವೆಬ್‌ಸೈಟ್ ಟ್ಯಾಗ್ ಮಾಡುವ ಮೂಲಕ ಹೆಚ್ಚು ಜನರನ್ನು ತಲುಪುವ ತಂತ್ರವನ್ನೂ ವಂಚಕರು ಬಳಸಿದ್ದಾರೆ. ಹಣ ಪಾವತಿಸಿದ ಬಳಿಕ ಯಾವುದೇ ಪ್ರತಿಕ್ರಿಯೆ ದೊರೆಯದ ಹಿನ್ನೆಲೆಯಲ್ಲಿ ಅನೇಕ ಆಕಾಂಕ್ಷಿಗಳು ಅನುಮಾನಗೊಂಡು ಪರಿಶೀಲಿಸಿದಾಗ ತಾವು ಮೋಸಹೋಗಿರುವುದು ಗೊತ್ತಾಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ತ್ವರಿತವಾಗಿ ತನಿಖೆ ನಡೆಸಿ, ವಂಚಕರನ್ನು ಹೆಡೆಮುರಿ ಕಟ್ಟಬೇಕಿದೆ. ಸರ್ಕಾರದ ಇಲಾಖೆಗಳು ಸಾಮಾನ್ಯವಾಗಿ ಅಧಿಕೃತ ಪೋರ್ಟಲ್‌ಗಳು ಮತ್ತು ಉದ್ಯೋಗ ವೆಬ್‌ಸೈಟ್‌ಗಳ ಮೂಲಕ ನೇಮಕಾತಿ ಪ್ರಕಟಣೆ ಹೊರಡಿಸುತ್ತವೆ.
ಸರ್ಕಾರಿ ನೇಮಕಾತಿಯ ಅಧಿಕೃತ ಪ್ರಕಟಣೆಯಲ್ಲಿ ಆಯಾ ಸರ್ಕಾರಗಳ ಅನುಮೋದನೆಯ ಆದೇಶಪತ್ರವನ್ನು ಲಗತ್ತಿಸಲಾಗಿರುತ್ತದೆ. ಅಲ್ಲದೆ, ಹೆಚ್ಚಿನ ಮಾಹಿತಿಗೆ ಸಹಾಯವಾಣಿ ನಂಬರ್ ಇರುತ್ತದೆ. ಅನುಮಾನ ಇದ್ದಲ್ಲಿ ಕರೆ ಮಾಡಿ ವಿಚಾರಿಸಬಹುದು. ಇದಲ್ಲದೆ, ವಿಶ್ವಾಸಾರ್ಹ ಉದ್ಯೋಗ ತರಬೇತಿ ಸಂಸ್ಥೆಗಳಲ್ಲಿ ಸಹ ವಿಚಾರಿಸಿಕೊಂಡು ಅರ್ಜಿ ಸಲ್ಲಿಕೆಗೆ ಮುಂದಾಗಬಹುದು. ಅರ್ಜಿ ಹಾಕುವ ಭರದಲ್ಲಿ ವೆಬ್‌ಸೈಟ್‌ನ ನೈಜತೆ ಪರಿಶೀಲಿಸದೆ ಹಣ ಪಾವತಿಸಿದರೆ ವಂಚಕರಿಗೆ ಲಾಭ ಬಿಟ್ಟರೆ ಬೇರೇನೂ ಪ್ರಯೋಜನವಿಲ್ಲ. ಈಗ ತಂತ್ರಜ್ಞಾನದ ಮೂಲಕ ಏನನ್ನು ಬೇಕಾದರೂ ಸೃಷ್ಟಿ ಮಾಡುವ ಅವಕಾಶ ಇರುವುದರಿಂದಾಗಿ ವಂಚಕರಿಗೆ ಅನುಕೂಲವಾಗಿದೆ. ಉದ್ಯೋಗ ನೇಮಕಾತಿ ಮಾತ್ರವಲ್ಲ, ಎಲ್ಲ ವಿಷಯಗಳಲ್ಲಿಯೂ ಸಾರ್ವಜನಿಕರು ಕಟ್ಟೆಚ್ಚರದಿಂದ ಇರಬೇಕಾದುದು ಅನಿವಾರ್ಯ. ಸರ್ಕಾರಗಳು ಕೂಡ ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ನಡೆಸಬೇಕು. ಅಂದಾಗ ಇಂಥ ಕೃತ್ಯಗಳಿಗೆ ಕಡಿವಾಣ ಬೀಳಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net