ಸಂಪಾದಕೀಯ: ಸದಾ ಕಟ್ಟೆಚ್ಚರ ಅಗತ್ಯ

ಸಂಪಾದಕೀಯ: ಸದಾ ಕಟ್ಟೆಚ್ಚರ ಅಗತ್ಯ
ಸಂಪಾದಕೀಯ: ಸದಾ ಕಟ್ಟೆಚ್ಚರ ಅಗತ್ಯ
Published on
ಸಂಪಾದಕೀಯ: ಭಾರತದ ಆಂತರಿಕ ಭದ್ರತೆಗೆ ಸವಾಲು ಎಸೆಯುವ ಭಯೋತ್ಪಾದಕ ಜಾಲಗಳ ಸಂಚು ಇತ್ತೀಚಿನ ದಿನಗಳಲ್ಲಿ ರೂಪಾಂತರಗೊಳ್ಳುತ್ತಿದೆ. ಗಡಿಭಾಗದ ನುಸುಳುವಿಕೆಗೆ ಸೀಮಿತವಾಗಿದ್ದ ಉಗ್ರಗಾಮಿ ಚಟುವಟಿಕೆಗಳು ಇಂದು ದೇಶದ ಹೃದಯಭಾಗದ ಜನವಸತಿ ಪ್ರದೇಶಗಳಲ್ಲಿ ‘ಸ್ಲೀಪರ್ ಸೆಲ್’ಗಳ ರೂಪದಲ್ಲಿ ಆಳವಾಗಿ ಬೇರೂರುತ್ತಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ. ಇತ್ತೀಚೆಗೆ ಪಾಕಿಸ್ತಾನಪ್ರೇರಿತ ಭಯೋತ್ಪಾದಕ ಗುಂಪುಗಳು ಹೆಣೆದಿದ್ದ ಬೃಹತ್ ಜಾಲವನ್ನು ಭದ್ರತಾ ಪಡೆಗಳು ಭೇದಿಸಿರುವುದು, ನಮ್ಮ ಗುಪ್ತಚರ ದಳದ ದಕ್ಷತೆಗೆ ಸಾಕ್ಷಿಯಾಗಿದ್ದರೂ, ವ್ಯವಸ್ಥೆಯ ಮುಂದಿರುವ ಸವಾಲುಗಳನ್ನು ಕಡೆಗಣಿಸುವಂತಿಲ್ಲ.
ಈ ಇಡೀ ಪ್ರಕರಣ ದೆಹಲಿಯ ಮೆಟ್ರೋ ನಿಲ್ದಾಣಗಳಲ್ಲಿ ಕಂಡುಬಂದ ಪೋಸ್ಟರ್​ಗಳಿಂದ ಆರಂಭವಾಯಿತು. ತನಿಖಾ ಸಂಸ್ಥೆಗಳು ಇದು ಕೇವಲ ಒಂದು ಪೋಸ್ಟರ್ ಎಂದು ನಿರ್ಲಕ್ಷಿಸದೆ, ಇದರ ಬೆನ್ನತ್ತಿದಾಗ ಬಯಲಾದ ಸತ್ಯಗಳು ಬೆಚ್ಚಿಬೀಳಿಸುವಂತಿವೆ. ದೆಹಲಿಯಿಂದ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದವರೆಗೆ ಹಬ್ಬಿದ್ದ ಈ ಜಾಲದಲ್ಲಿ 8 ಮಂದಿ ಶಂಕಿತರನ್ನು ಬಂಧಿಸಲಾಗಿದೆ. ಈ ಉಗ್ರರು ತಮಿಳುನಾಡಿನ ತಿರುಪುರ್​ನಂತಹ ಕೈಗಾರಿಕಾ ಪ್ರದೇಶಗಳಲ್ಲಿ ಗಾರ್ವೆಂಟ್ ಕಾರ್ವಿುಕರಂತೆ ವೇಷ ಮರೆಸಿಕೊಂಡು ಅಡಗಿದ್ದರು. ಜನನಿಬಿಡ ಪ್ರದೇಶಗಳಲ್ಲಿ ಸಾಮಾನ್ಯ ನಾಗರಿಕರಂತೆ ಬೆರೆಯುವುದು, ತನಿಖಾ ಸಂಸ್ಥೆಗಳ ಕಣ್ಣು ತಪ್ಪಿಸಲು ಅವರು ಕಂಡುಕೊಂಡ ಸುಲಭದ ದಾರಿಯಾಗಿತ್ತು.
ಭಯೋತ್ಪಾದಕರು ಸ್ಥಳೀಯ ಸೌಲಭ್ಯಗಳನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಇದು ನಿದರ್ಶನ. ನಕಲಿ ಆಧಾರ್ ಕಾರ್ಡ್, ಬಾಡಿಗೆ ಮನೆ ಮತ್ತು ಸಣ್ಣಪುಟ್ಟ ಉದ್ಯೋಗಗಳನ್ನು ಆಸರೆಯಾಗಿ ಬಳಸಿಕೊಂಡು ದೀರ್ಘಕಾಲದವರೆಗೆ ಸದ್ದಿಲ್ಲದೆ ವಾಸಿಸುವಲ್ಲಿ ಉಗ್ರರು ಯಶಸ್ವಿಯಾಗುತ್ತಿದ್ದಾರೆ. ಬಾಂಗ್ಲಾದೇಶ, ಪಾಕಿಸ್ತಾನ ಮೂಲದ ಹ್ಯಾಂಡ್ಲರ್​ಗಳು ಆಧುನಿಕ ತಂತ್ರಜ್ಞಾನದ ಮೂಲಕ ಇವರನ್ನು ನಿಯಂತ್ರಿಸುತ್ತಿದ್ದುದು ಇನ್ನೊಂದು ಗಮನಾರ್ಹ ಅಂಶ. ಕೆಂಪುಕೋಟೆಯಂತಹ ಐತಿಹಾಸಿಕ ತಾಣಗಳು ಮತ್ತು ಜನನಿಬಿಡ ಮಾರುಕಟ್ಟೆಗಳನ್ನು ಗುರಿಯಾಗಿಸಿಕೊಂಡಿದ್ದ ಈ ಗುಂಪು, ದೇಶದ ಆರ್ಥಿಕ ಸ್ಥಿರತೆಯನ್ನು ಬುಡಮೇಲು ಮಾಡಲು ಸಂಚು ರೂಪಿಸಿತ್ತು.
ಉಗ್ರರ ಇಂತಹ ಕುತಂತ್ರಗಳನ್ನು ಹತ್ತಿಕ್ಕಲು ಕೇವಲ ಕೇಂದ್ರ ತನಿಖಾ ಸಂಸ್ಥೆಗಳ ಪ್ರಯತ್ನವಷ್ಟೇ ಸಾಲದು. ರಾಜ್ಯಗಳ ನಡುವಿನ ಪೊಲೀಸ್ ಸಮನ್ವಯ ಇದರಲ್ಲಿ ಅತ್ಯಂತ ನಿರ್ಣಾಯಕ. ಒಂದು ರಾಜ್ಯದಲ್ಲಿ ಅಪರಾಧ ಎಸಗಿ ಮತ್ತೊಂದು ರಾಜ್ಯದಲ್ಲಿ ಆಶ್ರಯ ಪಡೆಯುವ ಉಗ್ರರನ್ನು ಸದೆಬಡಿಯಲು ‘ರಿಯಲ್ ಟೈಮ್ ಮಾಹಿತಿ ವಿನಿಮಯ ವ್ಯವಸ್ಥೆ ಬಲಗೊಳ್ಳಬೇಕು. ಪ್ರತಿ ರಾಜ್ಯದ ಪೊಲೀಸ್ ವ್ಯವಸ್ಥೆ ತನ್ನ ವ್ಯಾಪ್ತಿಯಲ್ಲಿರುವ ಬೇರೆ ರಾಜ್ಯಗಳ ಕಾರ್ವಿುಕರು ಮತ್ತು ಬಾಡಿಗೆದಾರರ ದಾಖಲೆಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸುವ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಇದರಲ್ಲಿ ಸಾರ್ವಜನಿಕರ ಪಾತ್ರವೂ ಮಹತ್ವದ್ದು. ಸುತ್ತಮುತ್ತಲಿನ ಪರಿಸರದಲ್ಲಿ ಸಂಶಯಾಸ್ಪದ ವ್ಯಕ್ತಿಗಳು ಅಥವಾ ಚಟುವಟಿಕೆಗಳು ಕಂಡುಬಂದಾಗ ತಕ್ಷಣ ಪೊಲೀಸರಿಗೆ ಸಾರ್ವಜನಿಕರು ಮಾಹಿತಿ ನೀಡಬೇಕು. ಭದ್ರತಾ ಪಡೆಗಳ ಕಟ್ಟೆಚ್ಚರದಿಂದ ಇಂದು ಅನಾಹುತ ತಪ್ಪಿರಬಹುದು, ಆದರೆ ಉಗ್ರರ ಸಂಚು ನಿರಂತರವಾಗಿರುತ್ತದೆ ಎಂಬುದನ್ನು ಮರೆಯಬಾರದು.
ದೇಶದ ಒಳಗಿರುವ ಇಂತಹ ಕರಾಳ ಜಾಲಗಳನ್ನು ಬೇರುಸಹಿತ ಕಿತ್ತೆಸೆಯಲು ಕಠಿಣ ಕಾನೂನು ಜಾರಿ ಮತ್ತು ಸದಾ ಜಾಗೃತವಾಗಿರುವ ತನಿಖಾ ವ್ಯವಸ್ಥೆ ಇಂದಿನ ತುರ್ತು ಅಗತ್ಯ. ಭಯೋತ್ಪಾದನೆ ವಿರುದ್ಧದ ಈ ಹೋರಾಟದಲ್ಲಿ ಒಂದು ಸಣ್ಣ ಅಸಡ್ಡೆಯೂ ಭಾರಿ ಬೆಲೆ ತೆರುವಂತೆ ಮಾಡಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net