ಸಂಪಾದಕೀಯ: ಈಚಿನ ದಿನಗಳಲ್ಲಿ ದೇಶದ ವಿವಿಧೆಡೆ ರೈಲುಗಳಲ್ಲಿ ಅಗ್ನಿ ದುರಂತಗಳು ಸಂಭವಿಸಿದ್ದು, ಇವು ಕೇವಲ ಆಕಸ್ಮಿಕವಾಗಿರದೆ ವ್ಯವಸ್ಥಿತ ವಿಧ್ವಂಸಕ ಕೃತ್ಯಗಳು ಎಂಬುದಾಗಿ ರೈಲ್ವೆ ಇಲಾಖೆ ಹೇಳಿದೆ. ಇದು, ಆತಂಕ ಮೂಡಿಸುವ ವಿಚಾರವಾಗಿದ್ದು, ಜನರಲ್ಲಿ ಸುರಕ್ಷತಾ ಭಾವನೆ ಮೂಡುವ ನಿಟ್ಟಿನಲ್ಲಿ ಉನ್ನತ ಮಟ್ಟದ ತನಿಖೆ ನಡೆದು, ಕ್ಷಿಪ್ರವಾಗಿ ಕ್ರಮವಾಗಬೇಕಿದೆ. ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಹಾಗೂ ಇತರ ಭದ್ರತಾ ಸಂಸ್ಥೆಗಳು ತನಿಖೆ ಕೈಗೆತ್ತಿಕೊಂಡಿವೆ. ಹೌರಾದಲ್ಲಿ ಮಿಥಿಲಾ ಎಕ್ಸ್ಪ್ರೆಸ್ ರೈಲು ನಿಂತಿದ್ದಾಗ ಅಗ್ನಿ ದುರಂತ ಸಂಭವಿಸಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಲಿಲ್ಲ. ಈ ಬಗ್ಗೆ ತನಿಖೆ ನಡೆಸಿದಾಗ ಕೋಚ್ ಒಂದರಲ್ಲಿ ಪೆಟ್ರೋಲ್ನಲ್ಲಿ ಅದ್ದಿದ ಬಟ್ಟೆ ಅರ್ಧ ಸುಟ್ಟಿದ್ದು ಪತ್ತೆಯಾಗಿತ್ತು. ಇದು ಮಾತ್ರವಲ್ಲ, ಅಮರಪುರದಲ್ಲಿ ರೈಲ್ವೆ ಬೆಡ್ಡಿಂಗ್ ಸಾಮಗ್ರಿಗಳಿಗೆ ಬೆಂಕಿ ಹಚ್ಚಿದ್ದು, ಕೋಟಾದಲ್ಲಿ ರಾಜಧಾನಿ ಎಕ್ಸ್ಪ್ರೆಸ್ ರೈಲಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಸಸಾರಾಮ್‌ನಲ್ಲಿ ವ್ಯಕ್ತಿಯೊಬ್ಬ ರೈಲ್ವೆ ಕೋಚ್ ಒಳಗೆ ಉರಿಯುತ್ತಿದ್ದ ವಸ್ತುವನ್ನು ಎಸೆದಿದ್ದು- ಈ ಘಟನೆಗಳು ಸಹ ಉದ್ದೇಶಪೂರ್ವಕ ಎಂದು ರೈಲ್ವೆ ಇಲಾಖೆ ಪಟ್ಟಿಮಾಡಿದೆ.