ಚೆನ್ನೈ: ಹೊರನೋಟಕ್ಕೆ ಅದು ಸಾಮಾನ್ಯ ಪ್ಲಾಸ್ಟಿಕ್ ಬಾಟಲಿ ಮತ್ತು ಬಾಕ್ಸ್‌ಗಳನ್ನು ತಯಾರಿಸುವ ಕಾರ್ಖಾನೆ. ಆದರೆ, ಅದರೊಳಗೆ ನಡೆಯುತ್ತಿದ್ದುದು ಮಾತ್ರ ಅಂತಾರಾಷ್ಟ್ರೀಯ ಮಟ್ಟದ ಮಾದಕವಸ್ತು ಕಳ್ಳಸಾಗಣೆಯ ಕರಾಳ ದಂಧೆ ಚೆನ್ನೈನ ಪ್ಲಾಸ್ಟಿಕ್ ತಯಾರಿಕಾ ಘಟಕವೊಂದರ ಮೇಲೆ ದಿಢೀರ್ ದಾಳಿ ನಡೆಸಿರುವ ಮಾದಕ ವಸ್ತು ನಿಯಂತ್ರಣ ಮಂಡಳಿ (NCB) ಅಧಿಕಾರಿಗಳು, ಅಕ್ರಮವಾಗಿ ಬಚ್ಚಿಟ್ಟಿದ್ದ ಬರೋಬ್ಬರಿ 1 ಕೋಟಿ ಮೌಲ್ಯದ 50 ಕೆ.ಜಿ. ನಿಷೇಧಿತ ರಾಸಾಯನಿಕವನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ-ಮಗ ಸೇರಿದಂತೆ ಮೂವರು ಕಿಂಗ್‌ಪಿನ್‌ಗಳನ್ನು ಖಾಕಿ ಪಡೆ ಹೆಡೆಮುರಿ ಕಟ್ಟಿದೆ.
ಚೆನ್ನೈನ ಎಂಕೆಬಿ ನಗರದ ಅಣ್ಣೈ ಇಂದಿರಾ ನಗರದಲ್ಲಿರುವ ಎಎನ್ ಎಂಟರ್‌ಪ್ರೈಸಸ್ (AN Enterprises) ಎಂಬ ಪ್ಲಾಸ್ಟಿಕ್ ಕಾರ್ಖಾನೆಯ ಮೇಲೆ ಎನ್‌ಸಿಬಿ ಅಧಿಕಾರಿಗಳು ಹದ್ದಿನ ಕಣ್ಣಿಟ್ಟು ಈ ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಖಾನೆಯಲ್ಲಿ ಪರಿಶೀಲನೆ ನಡೆಸಿದಾಗ, ಅನುಮಾನ ಬಾರದಂತೆ ಎರಡು ಗೋಣಿ ಚೀಲಗಳಲ್ಲಿ ತಲಾ 25 ಕೆ.ಜಿ.ಯಂತೆ ಬಚ್ಚಿಟ್ಟಿದ್ದ ಒಟ್ಟು 50 ಕೆ.ಜಿ. ಸ್ಯೂಡೋಎಫೆಡ್ರಿನ್ ರಾಸಾಯನಿಕ ಪತ್ತೆಯಾಗಿದೆ. ಅಕ್ರಮ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಸುಮಾರು 1 ಕೋಟಿ ಎಂದು ಅಂದಾಜಿಸಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಸ್ಫೋಟಕ ಮಾಹಿತಿಗಳು ಹೊರಬಿದ್ದಿವೆ. ಈ ನಿಷೇಧಿತ ರಾಸಾಯನಿಕವನ್ನು ಹೈದರಾಬಾದ್‌ನಿಂದ ಅಕ್ರಮವಾಗಿ ಚೆನ್ನೈಗೆ ತರಿಸಿಕೊಳ್ಳಲಾಗಿತ್ತು. ಇಲ್ಲಿಂದ 'ಮೆಥಾಂಫೆಟಮೈನ್' ಎಂಬ ಅತ್ಯಂತ ಅಪಾಯಕಾರಿ ಡ್ರಗ್ಸ್ ತಯಾರಿಸುವ ಉದ್ದೇಶಕ್ಕಾಗಿ ವಿದೇಶಕ್ಕೆ ಕಳ್ಳಸಾಗಣೆ ಮಾಡಲು ಸಿದ್ಧತೆ ನಡೆಸಲಾಗಿತ್ತು. ಸದ್ಯ ಈ ಮಾಲು ಯಾವ ದೇಶಕ್ಕೆ ರವಾನೆಯಾಗಲಿತ್ತು ಎಂಬುದರ ಕುರಿತು ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಸ್ಯೂಡೋಎಫೆಡ್ರಿನ್ ಅನ್ನು ಸಾಮಾನ್ಯವಾಗಿ ಕೆಲವು ಔಷಧಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಆದರೆ, ಡ್ರಗ್ಸ್ ಮಾಫಿಯಾ ಇದನ್ನು ಯುವಜನತೆಯ ಬದುಕು ನಾಶಪಡಿಸುವ, ಅತ್ಯಂತ ವ್ಯಸನಕಾರಿಯಾದ ಕೃತಕ ಮಾದಕವಸ್ತು 'ಮೆಥಾಂಫೆಟಮೈನ್' ತಯಾರಿಸಲು ಪ್ರಮುಖ ಕಚ್ಚಾ ವಸ್ತುವಾಗಿ ಬಳಸಿಕೊಳ್ಳುತ್ತಿದೆ. ಈಗ ವಶಪಡಿಸಿಕೊಂಡಿರುವ 50 ಕೆ.ಜಿ. ರಾಸಾಯನಿಕದಿಂದ ಅಷ್ಟೇ ಪ್ರಮಾಣದ ಮಾರಕ ಡ್ರಗ್ಸ್ ತಯಾರಿಸುವ ಬೃಹತ್ ಸಂಚು ರೂಪಿಸಲಾಗಿತ್ತು ಎಂದು ಎನ್‌ಸಿಬಿ ಮೂಲಗಳು ತಿಳಿಸಿವೆ.
ಇತ್ತೀಚಿನ ದಿನಗಳಲ್ಲಿ ಚೆನ್ನೈ ಬಂದರು ಮತ್ತು ವಿಮಾನ ನಿಲ್ದಾಣಗಳ ಮೂಲಕ ಅಂತಾರಾಷ್ಟ್ರೀಯ ಡ್ರಗ್ಸ್ ಜಾಲಗಳು ಸಕ್ರಿಯವಾಗಿರುವ ಬಗ್ಗೆ ಎನ್‌ಸಿಬಿ ತೀವ್ರ ನಿಗಾ ವಹಿಸಿದೆ. ವಿಶೇಷವಾಗಿ ಸ್ಯೂಡೋಎಫೆಡ್ರಿನ್ ಮತ್ತು ಎಫೆಡ್ರಿನ್‌ನಂತಹ ರಾಸಾಯನಿಕಗಳನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಂತಹ ದೇಶಗಳಿಗೆ ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ತನಿಖಾ ಸಂಸ್ಥೆಗೆ ಲಭ್ಯವಾಗಿದೆ.
ಸದ್ಯ ಬಂಧಿತರಾಗಿರುವ ಮೂವರೂ ಚೆನ್ನೈ ನಿವಾಸಿಗಳಾಗಿದ್ದು, ಈ ಕಾರ್ಖಾನೆಗೆ ರಾಸಾಯನಿಕ ಪೂರೈಸಿದ ಮೂಲ ಯಾವುದು? ವಿದೇಶದಲ್ಲಿ ಈ ಸರಕನ್ನು ಸ್ವೀಕರಿಸಲು ಕಾಯುತ್ತಿದ್ದ ಅಂತಾರಾಷ್ಟ್ರೀಯ ಡ್ರಗ್ಸ್ ಪೆಡ್ಲರ್‌ಗಳು ಯಾರು? ಎಂಬುದನ್ನು ಪತ್ತೆಹಚ್ಚಲು ಎನ್‌ಸಿಬಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.