ಮೈಸೂರು ರಾಜಮನೆತನದ ಹಕ್ಕನ್ನು ರಾಜಕಾರಣಿಗಳಿಗೆ ನೀಡಲ್ಲ!...ಸಿಎಂ ಡಿಕೆಶಿ ಮೊದಲ ಆರತಿ ಪ್ರಸ್ತಾಪಕ್ಕೆ ಟಿಟಿಡಿ ತಿರುಗೇಟು | Tirupati Aarti

Tirupati Aarti | ಮೈಸೂರು ರಾಜಮನೆತನದ ಹಕ್ಕನ್ನು ರಾಜಕಾರಣಿಗಳಿಗೆ ನೀಡಲ್ಲ!...ಸಿಎಂ ಡಿಕೆಶಿ ಮೊದಲ ಆರತಿ ಪ್ರಸ್ತಾಪಕ್ಕೆ ಟಿಟಿಡಿ ತಿರುಗೇಟು
Tirupati Aarti | ಮೈಸೂರು ರಾಜಮನೆತನದ ಹಕ್ಕನ್ನು ರಾಜಕಾರಣಿಗಳಿಗೆ ನೀಡಲ್ಲ!...ಸಿಎಂ ಡಿಕೆಶಿ ಮೊದಲ ಆರತಿ ಪ್ರಸ್ತಾಪಕ್ಕೆ ಟಿಟಿಡಿ ತಿರುಗೇಟು
Published on
ತಿರುಪತಿ/ಬೆಂಗಳೂರು: ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದೇವಸ್ಥಾನದ ಪ್ರಥಮ ನಿತ್ಯ ಆರತಿಯಲ್ಲಿ (Tirupati Aarti) ಭಾಗವಹಿಸುವ ಅವಕಾಶವನ್ನು ಕರ್ನಾಟಕದ ಸಚಿವರು, ಶಾಸಕರು ಹಾಗೂ ಹಿರಿಯ ಅಧಿಕಾರಿಗಳಿಗೂ ವಿಸ್ತರಿಸಬೇಕೆಂಬ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಪ್ರಸ್ತಾಪಕ್ಕೆ ತಿರುಮಲ ತಿರುಪತಿ ದೇವಸ್ಥಾನಂ (TTD) ಟ್ರಸ್ಟ್‌ನಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಈ ಪ್ರಥಮ ಆರತಿಯ ಹಕ್ಕು ಹಾಗೂ ಗೌರವ ಐತಿಹಾಸಿಕವಾಗಿ ಮೈಸೂರು ರಾಜಮನೆತನಕ್ಕೆ ಮಾತ್ರ ಸೇರಿದ್ದಾಗಿದ್ದು, ಇದನ್ನು ರಾಜಕಾರಣಿಗಳಿಗೆ ನೀಡಲು ಸಾಧ್ಯವಿಲ್ಲ ಎಂದು ಟಿಟಿಡಿ ಟ್ರಸ್ಟ್ ಮಂಡಳಿ ಸದಸ್ಯ ಜಿ. ಭಾನುಪ್ರಕಾಶ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದೇನು..?

ಕರ್ನಾಟಕ ಸರ್ಕಾರದಿಂದ ತಿರುಪತಿಗೆ ಭೇಟಿ ನೀಡುವ ಸಚಿವರು, ಶಾಸಕರು, ನ್ಯಾಯಾಧೀಶರು ಮತ್ತು ಹಿರಿಯ ಅಧಿಕಾರಿಗಳಿಗೆ ಮೊದಲ ಆರತಿಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸುವಂತೆ ಆಂಧ್ರಪ್ರದೇಶ ಸರ್ಕಾರ ಹಾಗೂ ಟಿಟಿಡಿಗೆ ಅಧಿಕೃತವಾಗಿ ಪತ್ರ ಬರೆಯುವುದಾಗಿ ಡಿ.ಕೆ. ಶಿವಕುಮಾರ್ ಹೇಳಿದ್ದರು. ಹಲವು ಶಾಸಕರು ತಿರುಪತಿಗೆ ಹೋದಾಗ ದರ್ಶನ ಸಿಗದೆ ವಾಪಸ್ ಬಂದಿದ್ದಾರೆ. ರಾಜ್ಯದ ಜನಸೇವೆ ಮಾಡುವ ಜನಪ್ರತಿನಿಧಿಗಳು ದೇವರ ಮುಂದೆ ನಿಂತು ಆರತಿ ಪಡೆಯುವಂತಾಗಬೇಕು. ಪ್ರಸ್ತುತ ಕರ್ನಾಟಕ ಸರ್ಕಾರದ ಅಧಿಕಾರಿಗಳು ಈ ಆರತಿಯಲ್ಲಿ ಭಾಗವಹಿಸುತ್ತಿದ್ದು, ಇದನ್ನು ಜನಪ್ರತಿನಿಧಿಗಳಿಗೂ ವಿಸ್ತರಿಸಬೇಕು ಎಂದು ಡಿ ಕೆ ಶಿವಕುಮಾರ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಇದು ರಾಜಕೀಯ ವೇದಿಕೆಯಲ್ಲ ಎಂದು ಟಿಟಿಡಿ ಕೌಂಟರ್!..

ಸಿಎಂ ಡಿ ಕೆ ಶಿವಕುಮಾರ್ ಅವರ ಈ ಹೇಳಿಕೆಗೆ ವಿಡಿಯೋ ಮೂಲಕ ತಿರುಗೇಟು ನೀಡಿರುವ ಟಿಟಿಡಿ ಸದಸ್ಯ ಜಿ. ಭಾನುಪ್ರಕಾಶ್ ರೆಡ್ಡಿ, ದೇವಸ್ಥಾನದ ಧಾರ್ಮಿಕ ಪದ್ಧತಿಗಳಲ್ಲಿ ರಾಜಕೀಯ ತರಬೇಡಿ ಎಂದು ಆಗ್ರಹಿಸಿದ್ದಾರೆ.
ನಿತ್ಯ ಬೆಳಿಗ್ಗೆ ಗರ್ಭಗುಡಿಯಲ್ಲಿ ನಡೆಯುವ ಪ್ರಥಮ ಆರತಿಯ ಗೌರವ ಮೈಸೂರು ಮಹಾರಾಜರಿಗೆ ಸಲ್ಲುತ್ತದೆ. ಅವರ ಪರವಾಗಿ ವಿಶೇಷ ಅಧಿಕಾರಿಯೊಬ್ಬರು ಭಾಗವಹಿಸುತ್ತಾರೆ. ಇದು ಮಹಾರಾಜರಿಗೆ ನೀಡಲಾದ ಹಕ್ಕು. ನಿಮಗಾಗಲಿ, ನಿಮ್ಮ ಸಂಪುಟಕ್ಕಾಗಲಿ ಅಥವಾ ಶಾಸಕರಿಗಾಗಲಿ ನೀಡಿದ್ದಲ್ಲ. ನಿಮ್ಮ ಮಾತುಗಳನ್ನು ತಕ್ಷಣ ಹಿಂಪಡೆಯಿರಿ. ಇದು ಪವಿತ್ರ ಧಾರ್ಮಿಕ ಸ್ಥಳ, ರಾಜಕೀಯ ಅಖಾಡ ಮಾಡಬೇಡಿ ಎಂದು ಭಾನುಪ್ರಕಾಶ್ ರೆಡ್ಡಿ ಸಲಹೆ ನೀಡಿದ್ದಾರೆ.

ಟಿಟಿಡಿ ವಿರೋಧಕ್ಕೆ ಇದೇನಾ ಅಸಲಿ ಕಾರಣ..?

ಕರ್ನಾಟಕದ ಈ ಬೇಡಿಕೆಯನ್ನು ಒಪ್ಪಿಕೊಂಡರೆ ನಾಳೆ ತಮಿಳುನಾಡು ಮತ್ತು ಕೇರಳ ರಾಜ್ಯಗಳು ಕೂಡ ಇದೇ ರೀತಿಯ ಹಕ್ಕನ್ನು ಪ್ರತಿಪಾದಿಸಬಹುದು. ಹೀಗಾಗಿ ನಾಳೆ ನಡೆಯಲಿರುವ ಟಿಟಿಡಿ ಮಂಡಳಿ ಸಭೆಯಲ್ಲಿ ಕರ್ನಾಟಕ ಸರ್ಕಾರದ ಈ ಪ್ರಸ್ತಾಪವನ್ನು ವಿರೋಧಿಸಿ ಅಧಿಕೃತ ನಿರ್ಣಯ ಪಾಸ್ ಮಾಡಲಾಗುವುದು ಎಂದು ಭಾನುಪ್ರಕಾಶ್ ರೆಡ್ಡಿ ತಿಳಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net