ರಾಹುಲ್, ಖರ್ಗೆ ಕ್ಷಮೆಯಾಚನೆಗೆ ಮೆಲ್ಬರ್ನ್ ಮೋದಿ ಆಯೋಜಕರ ಪಟ್ಟು!...ಅನಿವಾಸಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದೇಕೆ ಕಾಂಗ್ರೆಸ್ಸಿಗರು..? | Melbourne Meets Modi

Melbourne Meets Modi > ರಾಹುಲ್, ಖರ್ಗೆ ಕ್ಷಮೆಯಾಚನೆಗೆ ಮೆಲ್ಬರ್ನ್ ಮೋದಿ ಆಯೋಜಕರ ಪಟ್ಟು!
Melbourne Meets Modi > ರಾಹುಲ್, ಖರ್ಗೆ ಕ್ಷಮೆಯಾಚನೆಗೆ ಮೆಲ್ಬರ್ನ್ ಮೋದಿ ಆಯೋಜಕರ ಪಟ್ಟು!
Published on
ಮೆಲ್ಬರ್ನ್ (ಆಸ್ಟ್ರೇಲಿಯಾ): ಪ್ರಧಾನಿ ನರೇಂದ್ರ ಮೋದಿ ಅವರ ಆಸ್ಟ್ರೇಲಿಯಾ ಭೇಟಿಯ ಅಂಗವಾಗಿ ಆಯೋಜಿಸಲಾಗಿದ್ದ ಮೆಲ್ಬರ್ನ್ ಮೀಟ್ಸ್ ಮೋದಿ ಸಮಾವೇಶಕ್ಕೆ ಬಂದಿದ್ದ ಜನರನ್ನು ಬಾಡಿಗೆ ಜನ ಎಂದು ಆರೋಪಿಸಿದ್ದ ಕಾಂಗ್ರೆಸ್ ನಾಯಕರ ವಿರುದ್ಧ ಆಯೋಜಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಹಿರಂಗ ಪತ್ರ ಬರೆದಿರುವ ಆಯೋಜಕರು, ಆರೋಪಗಳನ್ನು ತಕ್ಷಣವೇ ಹಿಂಪಡೆದು ಬಹಿರಂಗ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.
ಮೆಲ್ಬರ್ನ್‌ನ ಮಾರ್ವೆಲ್ ಕ್ರೀಡಾಂಗಣದಲ್ಲಿ ನಡೆದ ಜುಲೈ 9 ರ ಈ ಬೃಹತ್ ಕಾರ್ಯಕ್ರಮದಲ್ಲಿ ಸುಮಾರು 30,000ಕ್ಕೂ ಹೆಚ್ಚು ಭಾರತೀಯ ಮೂಲದ ಜನ ಭಾಗವಹಿಸಿದ್ದರು. ಆದರೆ, ಈ ಕಾರ್ಯಕ್ರಮದ ಜನಸ್ತೋಮವನ್ನು ಬಾಡಿಗೆ ಜನ ಎಂದು ಕಾಂಗ್ರೆಸ್ ವಕ್ತಾರ, ರಾಜ್ಯಸಭಾ ಸದಸ್ಯ ಪವನ್ ಖೇರಾ ಸೇರಿ ಹಲವು ನಾಯಕರು ಆರೋಪಿಸಿದ್ದರು. ಅಲ್ಲದೆ, ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ವಿಶೇಷ ವಿಮಾನಗಳನ್ನು ವ್ಯವಸ್ಥೆ ಮಾಡಲಾಗಿತ್ತು ಎಂಬ ಮಾಧ್ಯಮ ವರದಿಯೊಂದನ್ನು ಹಂಚಿಕೊಂಡಿದ್ದರು.
ಕಾಂಗ್ರೆಸ್ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಮೋದಿ ಏರ್‌ವೇಸ್ ಚಾರ್ಟರ್ಡ್ ವಿಮಾನ ಸಮನ್ವಯಗೊಳಿಸಿದ ಸಮುದಾಯದ ಆಯೋಜಕರು, ಈ ಹೇಳಿಕೆಗಳು ಸಂಪೂರ್ಣ ಸುಳ್ಳು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಡ್ನಿಯಿಂದ ಮೆಲ್ಬರ್ನ್‌ಗೆ ಪ್ರಯಾಣಿಸಿದ ಪ್ರತಿಯೊಬ್ಬರೂ ತಮ್ಮ ಸ್ವಂತ ಹಣದಿಂದ ಪ್ರಯಾಣ ಹಾಗೂ ವಸತಿ ವೆಚ್ಚವನ್ನು ಭರಿಸಿದ್ದಾರೆ ಹೊರತು ಬಿಜೆಪಿ ಅಥವಾ ಭಾರತ ಸರ್ಕಾರದಿಂದ ಇದಕ್ಕೆ ಯಾವುದೇ ಹಣ ಬಳಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಒಂದು ಪೈಸೆಯನ್ನೂ ಸಹ ಖರ್ಚು ಮಾಡಿಲ್ಲ!...

ಈ ಕುರಿತು ಮಾತನಾಡಿದ ಆಯೋಜಕರಲ್ಲಿ ಒಬ್ಬರಾದ ಅಮಿತ್ ಕರಾಂತ್, ಪ್ರಯಾಣಿಕರು ತಮ್ಮ ಸ್ವಂತ ವೆಚ್ಚದಲ್ಲಿ ಬಂದಿದ್ದು, ಬೇರೆ ರಾಜ್ಯಗಳಿಂದ ಜನರನ್ನು ತರಲು ಒಂದು ಪೈಸೆಯನ್ನೂ ಖರ್ಚು ಮಾಡಿಲ್ಲ ಎಂದಿದ್ದಾರೆ. ಹೀಗಿರುವಾಗ ಇದನ್ನು ಬಾಡಿಗೆ ಜನ ಎಂದು ಕರೆಯುವುದು ತೀರಾ ನಿರಾಶಾದಾಯಕ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೆ ಅಲ್ಲದೇ ಆಯೋಜಕರು ಮತ್ತು ಸ್ವಯಂಸೇವಕರು ತಮ್ಮ ಕುಟುಂಬ, ಉದ್ಯೋಗ ಹಾಗೂ ವೃತ್ತಿಪರ ಸಮಯವನ್ನು ತ್ಯಾಗ ಮಾಡಿ, ವೈಯಕ್ತಿಕ ಆರ್ಥಿಕ ಹೊಣೆ ಹೊತ್ತು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಧಾನಿ ಮೋದಿ ಅಥವಾ ಬಿಜೆಪಿಯನ್ನು ಟೀಕಿಸುವ ಹಕ್ಕು ಕಾಂಗ್ರೆಸ್‌ಗಿದೆ, ಆದರೆ ಭಾರತದ ಆಂತರಿಕ ರಾಜಕೀಯಕ್ಕೆ ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಸಮುದಾಯವನ್ನು ಬಲಿಪಶು ಮಾಡಬಾರದು ಎಂದು ಆಯೋಜಕರು ಹೇಳಿದ್ದಾರೆ. ಹೀಗಾಗಿ, ಚಾರ್ಟರ್ಡ್ ವಿಮಾನದ ವೆಚ್ಚವನ್ನು ಬಿಜೆಪಿ ಅಥವಾ ಸರ್ಕಾರ ಭರಿಸಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಬಹಿರಂಗವಾಗಿ ಒಪ್ಪಿಕೊಳ್ಳಬೇಕು, ಸುಳ್ಳು ಆರೋಪವನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ಶ್ರಮಿಸಿದ ಆಯೋಜಕರು, ಸ್ವಯಂಸೇವಕರು ಹಾಗೂ ಸಂಪೂರ್ಣ ಅನಿವಾಸಿ ಭಾರತೀಯ ಸಮುದಾಯದ ಕ್ಷಮೆಯಾಚಿಸಬೇಕು ಎಂದು ಆಯೋಜಕರು ಕಾಂಗ್ರೆಸ್ ಹಿರಿಯ ನಾಯಕರನ್ನು ಒತ್ತಾಯಿಸಿದ್ದಾರೆ.
ಆಸ್ಟ್ರೇಲಿಯಾ ಪ್ರಧಾನಿ ಆಂಟನಿ ಆಲ್ಬನೀಸ್ ಹಾಗೂ ವಿಕ್ಟೋರಿಯಾ ಪ್ರಿಮಿಯರ್ ಜಸಿಂತಾ ಅಲ್ಲನ್ ಭಾಗವಹಿಸಿದ್ದ ಈ ಬೃಹತ್ ಕಾರ್ಯಕ್ರಮವು ಭಾರತ-ಆಸ್ಟ್ರೇಲಿಯಾ ಬಾಂಧವ್ಯದ ಸಂಕೇತವಾಗಿತ್ತು ಎಂದು ಆಯೋಜಕರು ಸ್ಮರಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net