ಚುನಾವಣೆಗೆ ಸ್ಪರ್ಧಿಸಿದ್ದು ಸಾಕು, ಮನೇಲಿ ಇರಿ: ದೀದಿಗೆ ಸಿಎಂ ಸುವೇಂದು ವ್ಯಂಗ್ಯ...ನಂದಿಗ್ರಾಮ ಬಿಟ್ಟಿದ್ದೇಕೆ ಎನ್ನುವುದರ ಬಗ್ಗೆ ವಿವರಣೆ! | Suvendu Adhikari

ಚುನಾವಣೆಗೆ ಸ್ಪರ್ಧಿಸಿದ್ದು ಸಾಕು, ಮನೇಲಿ ಇರಿ: ದೀದಿಗೆ ಸಿಎಂ ಸುವೇಂದು ವ್ಯಂಗ್ಯ...ನಂದಿಗ್ರಾಮ ಬಿಟ್ಟಿದ್ದೇಕೆ ಎನ್ನುವುದರ ಬಗ್ಗೆ ವಿವರಣೆ! | Suvendu Adhikari
Published on: 

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಚುನಾವಣಾ ರಾಜಕೀಯದಿಂದ ನಿವೃತ್ತರಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುವಂತೆ ಬಹಿರಂಗವಾಗಿ ಸಲಹೆ ನೀಡಿದ್ದಾರೆ. ದಕ್ಷಿಣ ಕೋಲ್ಕತ್ತಾದ ಭವಾನೀಪುರ ಕ್ಷೇತ್ರವನ್ನು ಉಳಿಸಿಕೊಂಡು, ನಂದಿಗ್ರಾಮ ಕ್ಷೇತ್ರವನ್ನು ತೆರವುಗೊಳಿಸಲು ಅಂತಿಮವಾಗಿ ತಾವು ಏಕೆ ನಿರ್ಧರಿಸಿದೆವು ಎಂಬುದರ ಕುರಿತು ವಿಧಾನಸಭೆಯಲ್ಲಿ ಮಾತನಾಡುತ್ತಾ ಅವರು ಈ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ತಮ್ಮ ಭಾಷಣದಲ್ಲಿ ಈ ಹಿಂದೆ ನಡೆದ ಚುನಾವಣಾ ಜಯಗಳನ್ನು ಸ್ಮರಿಸಿಕೊಂಡ ಸುವೇಂದು ಅಧಿಕಾರಿ, ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಮ್ಮೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಡಲು ತಾವು ಬಯಸಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ನಂದಿಗ್ರಾಮವನ್ನು ಉಳಿಸಿಕೊಂಡು ಭವಾನೀಪುರವನ್ನು ಬಿಟ್ಟುಕೊಡಬಹುದಿತ್ತು ಎಂದಿರುವ ಸಿಎಂ ಸುವೇಂದು, ಒಂದು ವೇಳೆ ಹಾಗೆ ಮಾಡಿದ್ದರೆ, ಈ ಹಿಂದೆ ನನ್ನ ವಿರುದ್ಧ ಎರಡು ಬಾರಿ ಸೋತಿರುವ ವ್ಯಕ್ತಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಮತ್ತೊಮ್ಮೆ ಅವಕಾಶ ಸಿಕ್ಕಂತಾಗುತ್ತಿತ್ತು ಎಂದು ಅವರು ಹೇಳಿದರು. 2021ರ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮದಲ್ಲೂ ಮತ್ತು ಇತ್ತೀಚಿನ ಚುನಾವಣೆಯಲ್ಲಿ ಭವಾನೀಪುರದಲ್ಲೂ ಮಮತಾ ಬ್ಯಾನರ್ಜಿ ವಿರುದ್ಧ ತಮಗೆ ಸಿಕ್ಕ ಐತಿಹಾಸಿಕ ಜಯವನ್ನು ಅವರು ಈ ವೇಳೆ ನೆನಪಿಸಿಕೊಂಡರು.

Also Read
ಕಾಲು ಗಾಯದ ನಾಟಕವಾಡಿ ಅಧಿಕಾರಕ್ಕೇರಿದ್ದರಾ ಮಮತಾ ಬ್ಯಾನರ್ಜಿ..? ಇದರ ಬಗ್ಗೆ ತನಿಖೆ ನಡೆಸಿಯೇ ಸಿದ್ಧ ಅಂದ್ರು ಸಿಎಂ ಸುವೇಂದು! | Mamata Banerjee Leg Injury
ಚುನಾವಣೆಗೆ ಸ್ಪರ್ಧಿಸಿದ್ದು ಸಾಕು, ಮನೇಲಿ ಇರಿ: ದೀದಿಗೆ ಸಿಎಂ ಸುವೇಂದು ವ್ಯಂಗ್ಯ...ನಂದಿಗ್ರಾಮ ಬಿಟ್ಟಿದ್ದೇಕೆ ಎನ್ನುವುದರ ಬಗ್ಗೆ ವಿವರಣೆ! | Suvendu Adhikari

ನಂದಿಗ್ರಾಮ ಮತ್ತು ರೇಜಿನಗರ ಉಪಚುನಾವಣೆ ಗೆಲುವಿನ ಹಿನ್ನೆಲೆ

ಇತ್ತೀಚೆಗೆ ನಡೆದ ನಂದಿಗ್ರಾಮ ಮತ್ತು ರೇಜಿನಗರ ವಿಧಾನಸಭಾ ಉಪಚುನಾವಣೆಗಳಲ್ಲಿ ಭರ್ಜರಿ ಜಯಗಳಿಸಿ ನೂತನ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಹಸಿರಾಣಿ ರಾತ್ ( ಸುವೇಂದು ಅಧಿಕಾರಿ ಆಪ್ತ ಸಹಾಯಕ ಚಂದ್ರನಾಥ್ ರಾತ್ ತಾಯಿ) ಮತ್ತು ಶಂಕರವ್ ಸರ್ಕಾರ್ ಅವರ ಪದಗ್ರಹಣದ ಬಳಿಕ ಸುವೇಂದು ಅಧಿಕಾರಿ ಈ ಮಾತುಗಳನ್ನಾಡಿದರು.

ನಂದಿಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ದಾಖಲೆ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರೆ, ಮುಸ್ಲಿಂ ಬಹುಸಂಖ್ಯಾತ ರೇಜಿನಗರದಲ್ಲೂ ಬಿಜೆಪಿ ಮಹತ್ವದ ಗೆಲುವು ದಾಖಲಿಸಿದೆ. ನಂದಿಗ್ರಾಮದಲ್ಲಿ ತಮ್ಮ ನಿರ್ಧಾರದಿಂದ ಅಸಮಾಧಾನಗೊಂಡಿದ್ದ ಜನರಿಗೆ ಭರವಸೆ ನೀಡಿದ ಅವರು, ನೂತನ ಶಾಸಕಿ ಹಸಿರಾಣಿ ರಾತ್ ಅವರ ಮೂಲಕ ಕ್ಷೇತ್ರಕ್ಕೆ ನೀಡಿದ್ದ ಎಲ್ಲಾ ಮಾತುಗಳನ್ನು ಉಳಿಸಿಕೊಳ್ಳುವುದಾಗಿ ತಿಳಿಸಿದರು. ನಂದಿಗ್ರಾಮದ ಜನತೆ 1.22 ಲಕ್ಷಕ್ಕೂ ಅಧಿಕ ಮತಗಳ ಭಾರಿ ಅಂತರದಿಂದ ರಾತ್ ಅವರನ್ನು ಗೆಲ್ಲಿಸಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಚಂದ್ರನಾಥ್ ರಾತ್ ಹತ್ಯೆ: ಸಿಬಿಐ ತನಿಖೆಯ ಪ್ರಸ್ತಾಪ!

ಮುಂದುವರಿದು ಮಾತನಾಡಿದ ಸಿಎಂ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಅಂದರೆ ಮೇ 6ರಂದು ಮಧ್ಯಮಗ್ರಾಮದಲ್ಲಿ ಹತ್ಯೆಗೀಡಾದ ತಮ್ಮ ಆಪ್ತ ಸಹಾಯಕ ಚಂದ್ರನಾಥ್ ರಾತ್ ಅವರ ಸಾವಿನ ಬಗ್ಗೆ ಸುವೇಂದು ಅಧಿಕಾರಿ ಗಂಭೀರ ಪ್ರಶ್ನೆಗಳನ್ನು ಎತ್ತಿದರು. ತಮ್ಮ ಪಿಎ ಆಗಿ ಕೆಲಸ ಮಾಡಿದ್ದರಿಂದಲೇ ಚಂದ್ರನಾಥ್ ರಾತ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶೂಟರ್‌ಗಳು ಹಾಗೂ ಸುಪಾರಿ ಕಿಲ್ಲರ್‌ಗಳು ಸೇರಿದಂತೆ ಒಟ್ಟು ಏಳು ಮಂದಿಯನ್ನು ಸಿಬಿಐ ಬಂಧಿಸಿದೆ ಎಂದು ತಿಳಿಸಿದ ಅವರು, ಹತ್ಯೆಗಾಗಿ ನೀಡಲಾಗಿದೆ ಎನ್ನಲಾದ 2 ಕೋಟಿ ರೂ. ಹಣದ ಮೂಲ ಯಾವುದು ಎಂಬುದು ಇನ್ನೂ ತನಿಖೆಯಿಂದ ಪತ್ತೆಯಾಗಬೇಕಿದೆ ಎಂದರು. ಕಮಾಲ್ ಸ್ಟ್ರೀಟ್, ಕಾಳಘಾಟ್ ಅಥವಾ ಡೈಮಂಡ್ ಹಾರ್ಬರ್‌ನಿಂದ ಈ ಹಣ ಬಂದಿದೆಯೇ ಎಂಬುದನ್ನು ತನಿಖಾ ಸಂಸ್ಥೆಗಳು ಪತ್ತೆ ಹಚ್ಚಬೇಕು ಎಂದು ಅವರು ಆಗ್ರಹಿಸಿದರು. ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಕಚೇರಿ ಇರುವ ಕಮಾಲ್ ಸ್ಟ್ರೀಟ್, ಮಮತಾ ಬ್ಯಾನರ್ಜಿ ನಿವಾಸವಿರುವ ಕಾಳಘಾಟ್ ಮತ್ತು ಅಭಿಷೇಕ್ ಬ್ಯಾನರ್ಜಿ ಅವರ ಲೋಕಸಭಾ ಕ್ಷೇತ್ರವಾದ ಡೈಮಂಡ್ ಹಾರ್ಬರ್ ಕಡೆಗೆ ಈ ಆರೋಪವು ಪರೋಕ್ಷವಾಗಿ ಬೆರಳು ಮಾಡಿ ತೋರಿಸಿದೆ.

Also Read
ಪಶ್ಚಿಮ ಬಂಗಾಳದಿಂದಲೇ ಟಿಎಂಸಿ ಹೆಸರು ಮತ್ತು ಚಿಹ್ನೆ ಅಳಿಸಿ ಹಾಕಲಾಗಿದೆ: ಸಿಎಂ ಸುವೇಂದು ಅಧಿಕಾರಿ | Suvendu Adhikari
ಚುನಾವಣೆಗೆ ಸ್ಪರ್ಧಿಸಿದ್ದು ಸಾಕು, ಮನೇಲಿ ಇರಿ: ದೀದಿಗೆ ಸಿಎಂ ಸುವೇಂದು ವ್ಯಂಗ್ಯ...ನಂದಿಗ್ರಾಮ ಬಿಟ್ಟಿದ್ದೇಕೆ ಎನ್ನುವುದರ ಬಗ್ಗೆ ವಿವರಣೆ! | Suvendu Adhikari

ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ 15 ವರ್ಷಗಳ ಆಡಳಿತ ಅಂತ್ಯಗೊಂಡು ಬಿಜೆಪಿ ಅಧಿಕಾರಕ್ಕೆ ಬಂದ ಐದು ತಿಂಗಳ ಬಳಿಕ ನಡೆದ ಈ ಮೊದಲ ಚುನಾವಣಾ ಪರೀಕ್ಷೆಯಲ್ಲಿ ಬಿಜೆಪಿ ಭರ್ಜರಿ ಯಶಸ್ಸು ಕಂಡಿದೆ. ಅದರಲ್ಲೂ ವಿಶೇಷವಾಗಿ ಮುಸ್ಲಿಂ ಬಹುಸಂಖ್ಯಾತ ರೇಜಿನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 75,000 ಮತಗಳ ಅಂತರದಿಂದ ಗೆಲುವು ಸಾಧಿಸಿರುವುದು ಪಕ್ಷದ ವ್ಯಾಪ್ತಿಯನ್ನು ವಿಸ್ತರಿಸಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಸುವೇಂದು ಅಧಿಕಾರಿ ಬಣ್ಣಿಸಿದರು. ಬಿಜೆಪಿಯು ಅಲ್ಪಸಂಖ್ಯಾತರ ವಿರೋಧಿ ಎಂಬ ವಿರೋಧ ಪಕ್ಷಗಳ ಆರೋಪವನ್ನು ತಳ್ಳಿಹಾಕಿದ ಅವರು, ರೇಜಿನಗರದಲ್ಲಿ ಸರ್ಕಾರದ ಅನ್ನಪೂರ್ಣ ಯೋಜನೆಯ ಲಾಭ ಪಡೆದ 70,000 ಮಹಿಳೆಯರಲ್ಲಿ 35,000 ಮಂದಿ ಅಲ್ಪಸಂಖ್ಯಾತ ಕುಟುಂಬಗಳವರೇ ಆಗಿದ್ದಾರೆ ಎಂದು ತಿಳಿಸಿದರು. ಮತದಾರರು ಧರ್ಮವನ್ನು ಮೀರಿ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಗಳಿಗೆ ಮತ ಹಾಕಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.

ತಮ್ಮ ಸರ್ಕಾರದ ಮೊದಲ ಆರು ತಿಂಗಳ ಆಡಳಿತವು ಕೇವಲ ಆರಂಭವಷ್ಟೇ ಎಂದ ಅಧಿಕಾರಿ, ಇದುವರೆಗೆ ಆಗಿರುವ ಕೆಲಸ ಕೇವಲ ಟೀ ಮತ್ತು ಬಿಸ್ಕತ್‌ನಂತೆ ಮಾತ್ರ, ಮುಂಬರುವ ದಿನಗಳಲ್ಲಿ ಉಪಾಹಾರ ಮತ್ತು ಮಧ್ಯಾಹ್ನದ ಊಟದಂತಹ ದೊಡ್ಡ ಅಭಿವೃದ್ಧಿ ಯೋಜನೆಗಳು ಜನರಿಗೆ ಸಿಗಲಿವೆ ಎಂದು ಭರವಸೆ ನೀಡಿದರು. ಬಂಗಾಳದ ಸರ್ವಾಂಗೀಣ ಅಭಿವೃದ್ಧಿಗಾಗಿ ಜನತೆ ಸರ್ಕಾರದೊಂದಿಗೆ ಕೈಜೋಡಿಸಬೇಕೆಂದು ಅವರು ಮನವಿ ಮಾಡಿದರು(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net