

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 2021ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತಮ್ಮ ಕಾಲಿಗೆ ಪೆಟ್ಟಾಗಿರುವ ಬಗ್ಗೆ (Mamata Banerjee Leg Injury) ನಾಟಕವಾಡಿದ್ದರು ಎಂದು ಸಿಎಂ ಸುವೇಂದು ಅಧಿಕಾರಿ ಆರೋಪಿಸಿದ್ದು, ಅವರು ಹೇಳಿರುವ ಸುಳ್ಳುಗಳ ಕುರಿತು ಸರ್ಕಾರದಿಂದ ಸಮಗ್ರ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ನಡೆಯಲಿರುವ ನಂದಿಗ್ರಾಮ ಮತ್ತು ರೇಜಿನಗರ ಉಪಚುನಾವಣೆಗಳ ಹಿನ್ನಲೆ ನೀತಿ ಸಂಹಿತೆ ಇನ್ನೂ ಜಾರಿಯಲ್ಲಿರುವುದರಿಂದ, ಅಕ್ಟೋಬರ್ 9 ರ ನಂತರ ತಮ್ಮ ಆರೋಪಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ನೀಡುವುದಾಗಿ ಸಿಎಂ ಅಧಿಕಾರಿ ತಿಳಿಸಿದ್ದಾರೆ.
2021ರಲ್ಲಿ ನಂದಿಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಮಮತಾ ಬ್ಯಾನರ್ಜಿ ತಮ್ಮ ಕಾಲು ಗಾಯದ ಕುರಿತು ಸುಳ್ಳು ನಾಟಕವಾಡಿದರು ಎಂದಿರುವ ಅಧಿಕಾರಿ, ಯಾವುದೇ ರೀತಿಯ ಮುಳೆ ಮುರಿದಿರುವುದಕ್ಕೆ ಸಾಕ್ಷ್ಯವಿಲ್ಲ ಎಂದು ವೈದ್ಯಕೀಯ ವರದಿಯಲ್ಲಿ ತಿಳಿಸಲಾಗಿದೆ. ನಾವು ಈ ವಿಷಯದ ಕುರಿತು ತನಿಖೆಯನ್ನು ಆರಂಭಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಮೂರು ಬಾರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ದೀದಿ, 2021ರ ಮಾರ್ಚ್ 10 ರಂದು ನಂದಿಗ್ರಾಮದ ಬಾರುಲಿಯಾದ ರೇಯಾಪಾರ ಪ್ರದೇಶದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ತಮ್ಮ ಎಡಕಾಲಿಗೆ ಗಾಯ ಮಾಡಿಕೊಂಡಿದ್ದರು. ಆರಂಭದಲ್ಲಿ, ಕೆಲ ಅಜ್ಞಾತ ವ್ಯಕ್ತಿಗಳು ತಮ್ಮನ್ನು ತಳ್ಳಿದ್ದರಿಂದ ಕಾರಿನ ತೆರೆದ ಬಾಗಿಲಿಗೆ ಡಿಕ್ಕಿಹೊಡೆದು ಎಡಕಾಲಿಗೆ ಗಾಯವಾಯಿತು ಎಂದು ಅವರು ಹೇಳಿಕೊಂಡಿದ್ದರು. ನಂತರ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದ ಅವರು, ಚುನಾವಣಾ ಪ್ರಚಾರದ ವೇಳೆ ಭಾರೀ ಜನಸ್ತೋಮದ ನೂಕುನುಗ್ಗಲಿನಿಂದಾಗಿ ಈ ಗಾಯವಾಯಿತು ಎಂದು ತಿಳಿಸಿದ್ದರು. ಅವರನ್ನು ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರ ಎಡ ಪಾದದ ಮೂಳೆ ಮತ್ತು ಅಸ್ಥಿರಜ್ಜು ಗಾಯಗಳಾಗಿರುವುದಾಗಿ ವರದಿಯಾಗಿತ್ತು.
ಈ ಎಲ್ಲಾ ಘಟನೆಯ ಬಳಿಕ ಮಮತಾ ಬ್ಯಾನರ್ಜಿ ವೀಲ್‌ಚೇರ್‌ನಲ್ಲೇ ಕುಳಿತು ಚುನಾವಣಾ ಪ್ರಚಾರ ನಡೆಸುತ್ತಿರುವುದು ಕಂಡುಬಂದಿತ್ತು. ಆ ಚುನಾವಣೆಯಲ್ಲಿ ಟಿಎಂಸಿ ಐತಿಹಾಸಿಕ ವಿಜಯ ಸಾಧಿಸಿ 210ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡರೆ, ಬಿಜೆಪಿ 77 ಕ್ಷೇತ್ರಗಳಲ್ಲಿ ಜಯಗಳಿಸಿತ್ತು.
ಸಿಎಂ ಸುವೇಂದು ಅಧಿಕಾರಿಯ ಆರೋಪಗಳನ್ನು ತಳ್ಳಿಹಾಕಿರುವ ಟಿಎಂಸಿ ಶಾಸಕ ಕುನಾಲ್ ಘೋಷ್, ಪ್ರಸ್ತುತ ರಾಜ್ಯದಲ್ಲಿ ಸರ್ಕಾರವನ್ನು ನಡೆಸುತ್ತಿರುವುದರಿಂದ ಮುಖ್ಯಮಂತ್ರಿ ಆದವರು ಏನು ಬೇಕಾದರೂ ಹೇಳಿಕೆಗಳನ್ನು ನೀಡಬಹುದು ಎಂದು ಕಿಡಿಕಾರಿದ್ದಾರೆ. ಮುಂದುವರದು ಮಾತನಾಡಿದ ಘೋಷ್, ಮುರಿತವಿದ್ದರೆ ಮಾತ್ರ ಬ್ಯಾಂಡೇಜ್ ಹಾಕಲಾಗುತ್ತದೆ ಎಂದು ಅವರಿಗೆ ಹೇಳಿದ್ಯಾರು..? ಯಾರಾದರೂ ದೊಡ್ಡ ಮಟ್ಟದ ಗಾಯಕ್ಕೆ ತುತ್ತಾಗಿದ್ದರೆ ಆಗಲೂ ಸಹ ಬ್ಯಾಂಡೇಜ್ ಧರಿಸಬೇಕಾಗುತ್ತದೆ ಎಂದರು(ಏಜೆನ್ಸೀಸ್).