ಮಹಾರಾಷ್ಟ್ರದಲ್ಲಿ ನಾಯಿ-ಹುಲಿ ರಾಜಕೀಯ ಜಗಳ: ಶಿಂಧೆ 'ಟೈಗರ್' ಕಾಮೆಂಟ್‌ಗೆ ಸಂಜಯ್ ರಾವತ್ ತಿರುಗೇಟು! Sanjay Raut

ಮಹಾರಾಷ್ಟ್ರದಲ್ಲಿ ನಾಯಿ-ಹುಲಿ ರಾಜಕೀಯ ಜಗಳ: ಶಿಂಧೆ 'ಟೈಗರ್' ಕಾಮೆಂಟ್‌ಗೆ ಸಂಜಯ್ ರಾವತ್ ತಿರುಗೇಟು!
ಮಹಾರಾಷ್ಟ್ರದಲ್ಲಿ ನಾಯಿ-ಹುಲಿ ರಾಜಕೀಯ ಜಗಳ: ಶಿಂಧೆ 'ಟೈಗರ್' ಕಾಮೆಂಟ್‌ಗೆ ಸಂಜಯ್ ರಾವತ್ ತಿರುಗೇಟು!
Published on
ಮುಂಬೈ: ಮಹಾರಾಷ್ಟ್ರ ರಾಜಕಾರಣದಲ್ಲಿ ಶಿವಸೇನೆಯ ಎರಡು ಬಣಗಳ ನಡುವಿನ ಜಿದ್ದಾಜಿದ್ದಿ ಈಗ ಬೀದಿ ಜಗಳದ ರೂಪ ಪಡೆದುಕೊಂಡಿದೆ. ಕೆಲವರು ನಾಯಿಗಳ ತರಹ ಇರುತ್ತಾರೆ, ಆದರೆ ನಿಯತ್ತಾಗಿ ಇರುವುದಿಲ್ಲ ಎಂದು ಬರೆಯುವ ಮೂಲಕ ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವತ್(Sanjay Raut) ಅವರು ಡಿಸಿಎಂ ಏಕನಾಥ್ ಶಿಂಧೆ ಬಣದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ತೀಕ್ಷ್ಣ ಹಾಗೂ ವಿವಾದಾತ್ಮಕ ಪೋಸ್ಟ್ ಹಾಕಿದ್ದಾರೆ.
ಶುಕ್ರವಾರವಷ್ಟೇ ಏಕನಾಥ್ ಶಿಂಧೆ ಅವರು ಉದ್ಧವ್ ಠಾಕ್ರೆ ಬಣವನ್ನು ಉದ್ದೇಶಿಸಿ, ನಾಯಿಗಳು ಹಿಂಡಾಗಿ ಬೊಗಳುತ್ತವೆ, ಆದರೆ ಹುಲಿ ಒಂಟಿಯಾಗಿ ಬರುತ್ತದೆ ಎಂದು ಲೇವಡಿ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಸಂಜಯ್ ರಾವತ್ ಶನಿವಾರ ಈ ವಿವಾದಾತ್ಮಕ ಪೋಸ್ಟ್ ಹಂಚಿಕೊಂಡಿದ್ದು, ಮರಾಠಿ ರಾಜಕಾರಣದಲ್ಲಿ ಸದ್ಯ ನಾಯಿ-ಹುಲಿ ಜಗಳ ತಾರಕಕ್ಕೇರಿದೆ.

ಉದ್ಧವ್ ಬಣಕ್ಕೆ ಮತ್ತೊಂದು ಬಿಗ್ ಶಾಕ್?; ಆರು ಸಂಸದರು ನಾಪತ್ತೆ!

ನಾಲ್ಕು ವರ್ಷಗಳ ಹಿಂದೆ (2022ರಲ್ಲಿ) ಏಕನಾಥ್ ಶಿಂಧೆ ಬಂಡಾಯ ಎದ್ದು ಉದ್ಧವ್ ಠಾಕ್ರೆ ಅವರ ಸರ್ಕಾರವನ್ನು ಉರುಳಿಸಿದ್ದರು. ಈಗ ಇತಿಹಾಸ ಮತ್ತೆ ಮರುಕಳಿಸುವ ಮುನ್ಸೂಚನೆ ಸಿಗುತ್ತಿದ್ದು, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಪಕ್ಷವು ಮತ್ತೊಂದು ಇಬ್ಬಾಗಕ್ಕೆ ಸಜ್ಜಾಗಿದೆ. ದೆಹಲಿಯ ಸಂಸತ್ ಸಂಕೀರ್ಣದಲ್ಲಿ ಇತ್ತೀಚೆಗೆ ನಡೆದ ಪಕ್ಷದ ಪ್ರಮುಖ ಸಂಸದೀಯ ಸಭೆಗೆ ಉದ್ಧವ್ ಬಣದ ಒಟ್ಟು 9 ಲೋಕಸಭಾ ಸಂಸದರ ಪೈಕಿ 6 ಸಂಸದರು ಗೈರುಹಾಜರಾಗುವ ಮೂಲಕ ಪಕ್ಷಕ್ಕೆ ದೊಡ್ಡ ಶಾಕ್ ನೀಡಿದ್ದಾರೆ.
ಸಭೆಗೆ ಕೇವಲ ಅರವಿಂದ್ ಸಾವಂತ್, ಅನಿಲ್ ದೇಸಾಯಿ ಮತ್ತು ರಾಜಾಭೌ ವಾಜೆ ಮಾತ್ರ ಹಾಜರಾಗಿದ್ದರು. ನಾಪತ್ತೆಯಾಗಿರುವ ಸಂಸದರಾದ ನಾಗೇಶ್ ಆಷ್ಟಿಕರ್, ಸಂಜಯ್ ದೇಶ್‌ಮುಖ್, ಸಂಜಯ್ ಜಾಧವ್, ಸಂಜಯ್ ದಿನಾ ಪಾಟೀಲ್, ಓಂಪ್ರಕಾಶ್ ರಾಜೇನಿಂಬಾಳ್ಕರ್ ಮತ್ತು ಭೌಸಾಹೇಬ್ ವಾಕಚೌರೆ ಅವರು ಸದ್ಯ ಜೈಪುರದ ರೆಸಾರ್ಟ್ ಒಂದರಲ್ಲಿ ಅಡಗ ಕುಳಿತಿದ್ದಾರೆ ಎಂದು ವರದಿಯಾಗಿದೆ. ಈ ಆರೂ ಸಂಸದರು ಶೀಘ್ರದಲ್ಲೇ ಏಕನಾಥ್ ಶಿಂಧೆ ನೇತೃತ್ವದ ಅಸಲಿ ಶಿವಸೇನೆಯನ್ನು ಸೇರಲಿದ್ದಾರೆ ಎಂಬ ವದಂತಿ ದಟ್ಟವಾಗಿದೆ.

ಗೈರಾದ ಸಂಸದರು ಹೇಡಿಗಳು: ಸಂಜಯ್ ರಾವತ್ ಆಕ್ರೋಶ

ಸಂಸದರ ಈ ದಿಢೀರ್ ಬಂಡಾಯದ ಬಗ್ಗೆ ಮಾಧ್ಯಮಗಳ ಮುಂದೆ ತೀವ್ರ ಆಕ್ರೋಶ ಹೊರಹಾಕಿರುವ ಸಂಜಯ್, ತಮ್ಮನ್ನು ಶಿವಸೈನಿಕರು ಎಂದು ಕರೆದುಕೊಳ್ಳುತ್ತಿದ್ದ ಈ ಜನರೆಲ್ಲರೂ ಕೇವಲ ಹೇಡಿಗಳು. ಅಪ್ಪಟ ಶಿವಸೈನಿಕರು ಎಂದಿಗೂ ಹೇಡಿಗಳಾಗಿರಲು ಸಾಧ್ಯವಿಲ್ಲ. ಒಂದು ವೇಳೆ ಅವರು ತೆಗೆದುಕೊಂಡಿರುವ ನಿರ್ಧಾರ ಸರಿ ಎಂದಾದರೆ, ಅವರೆಲ್ಲರೂ ಜೈಪುರದಲ್ಲಿ ಹೋಗಿ ಅಡಗ ಕುಳಿತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.
ಪಕ್ಷದ ಆದೇಶ ಉಲ್ಲಂಘಿಸಿ ಸಭೆಗೆ ಗೈರಾದ ಆರೂ ಸಂಸದರಿಗೆ ಈಗಾಗಲೇ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಇವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲು ಕಾನೂನು ಹೋರಾಟ ಆರಂಭಿಸಿದ್ದೇವೆ ಎಂದ ರಾವತ್, ಲೋಕಸಭಾ ಸ್ಪೀಕರ್ ಅವರು ಸಂವಿಧಾನ, ಕಾನೂನು ಮತ್ತು ಸುಪ್ರೀಂಕೋರ್ಟ್‌ನ ನಿರ್ದೇಶನಗಳ ಪ್ರಕಾರ ನಡೆದುಕೊಂಡರೆ, ಈ ಆರೂ ಜನ ಸಂಸದರು ಅನರ್ಹರಾಗುವುದು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದು ಕೇವಲ ಟ್ರೇಲರ್ ಎಂದಿದ್ದ ಶಿಂಧೆ!

ಇದಕ್ಕೂ ಮುನ್ನ ಶುಕ್ರವಾರ ನಡೆದ ಶಿವಸೇನೆಯ 60ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ್ದ ಡಿಸಿಎಂ ಏಕನಾಥ್ ಶಿಂಧೆ, ಉದ್ಧವ್ ಬಣವನ್ನು ತೀವ್ರವಾಗಿ ತರಾಟೆಗೆ ತಗೆದುಕೊಂಡಿದ್ದರು. ಕೆಲವು ದಿನಗಳಿಂದ ಕೆಲವು ನಾಯಿಗಳು ನಮ್ಮ ವಿರುದ್ಧ ಬೊಗಳುತ್ತಿವೆ, ಆದರೆ ನಿಮ್ಮ ಮುಂದೆ ಈಗ ಹುಲಿ ನಿಂತಿದೆ. ಅವರು ಗುಂಪಾಗಿ ಬರುತ್ತಾರೆ, ಹುಲಿ ಯಾವಾಗಲೂ ಒಂಟಿಯಾಗಿಯೇ ಬರುತ್ತದೆ ಎಂದು ಗುಡುಗಿದ್ದರು.
ಅಲ್ಲದೆ, ಉದ್ಧವ್ ಬಣದ ಸಂಸದರು ತಮ್ಮತ್ತ ಬರುತ್ತಿರುವುದನ್ನು ಸೂಚ್ಯವಾಗಿ ಹೇಳಿದ್ದ ಶಿಂಧೆ, ಇದು ಕೇವಲ ಟ್ರೇಲರ್ ಅಷ್ಟೇ, ಅಸಲಿ ಸಿನಿಮಾ ಇನ್ನು ಮುಂದೆ ಬರಲಿದೆ. ಮುಂದೆ ಏನೇನು ಆಗುತ್ತದೆ ಎಂದು ನೀವೇ ಕಾದು ನೋಡಿ ಎಂದು ಸವಾಲು ಹಾಕಿದ್ದರು. ಶಿಂಧೆ ಅವರ ಈ ಹೇಳಿಕೆಗೆ ಕೌಂಟರ್ ಕೊಡಲು ಹೋಗಿಯೇ ಸಂಜಯ್ ರಾವುತ್ ಈಗ ನಿಯತ್ತಿಲ್ಲದ ನಾಯಿಗಳು ಎಂಬ ವಿವಾದಾತ್ಮಕ ಪೋಸ್ಟ್ ಹಾಕಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net