ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೆ ಭೂಕಂಪ?: ಇದು ಕೇವಲ ಟ್ರೇಲರ್ ಅಷ್ಟೆ, ಅಸಲಿ ಪಿಕ್ಚರ್ ಬಾಕಿ ಇದೆ! ಉದ್ಧವ್ ಬಣಕ್ಕೆ ಏಕನಾಥ್ ಶಿಂಧೆ ಓಪನ್ ವಾರ್ನಿಂಗ್! Eknath Shinde

ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೆ ಭೂಕಂಪ?: ಇದು ಕೇವಲ ಟ್ರೇಲರ್ ಅಷ್ಟೆ, ಅಸಲಿ ಪಿಕ್ಚರ್ ಬಾಕಿ ಇದೆ! ಉದ್ಧವ್ ಬಣಕ್ಕೆ ಏಕನಾಥ್ ಶಿಂಧೆ ಓಪನ್ ವಾರ್ನಿಂಗ್!
ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೆ ಭೂಕಂಪ?: ಇದು ಕೇವಲ ಟ್ರೇಲರ್ ಅಷ್ಟೆ, ಅಸಲಿ ಪಿಕ್ಚರ್ ಬಾಕಿ ಇದೆ! ಉದ್ಧವ್ ಬಣಕ್ಕೆ ಏಕನಾಥ್ ಶಿಂಧೆ ಓಪನ್ ವಾರ್ನಿಂಗ್!
Published on
ಮುಂಬೈ: ಮಹಾರಾಷ್ಟ್ರ ರಾಜಕಾರಣದಲ್ಲಿ ಹಲ್‌ಚಲ್ ಸೃಷ್ಟಿಸಿರುವ ಶಿವಸೇನಾ ಮುಖ್ಯಸ್ಥ ಹಾಗೂ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ(Eknath Shinde) ತಮ್ಮ ರಾಜಕೀಯ ವಿರೋಧಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶುಕ್ರವಾರ ಶಿವಸೇನಾ ಕಾರ್ಯಕರ್ತರ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಶಿಂಧೆ, ಉದ್ಧವ್ ಠಾಕ್ರೆ ಬಣದಿಂದ ಇತ್ತೀಚೆಗೆ ನಾಯಕರು ಹೊರಬರುತ್ತಿರುವುದು ಕೇವಲ ಟ್ರೇಲರ್’ ಅಷ್ಟೇ, ಅಸಲಿ ಸಿನಿಮಾ ಇನ್ನು ಮುಂದೆ ಇದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಆ ಮೂಲಕ ಉದ್ಧವ್ ಪಾಳಯದಿಂದ ಮತ್ತಷ್ಟು ನಾಯಕರು ಶೀಘ್ರದಲ್ಲೇ ತಮ್ಮತ್ತ ಬರಲಿದ್ದಾರೆ ಎಂಬ ಮುನ್ಸೂಚನೆಯನ್ನು ಅವರು ನೀಡಿದ್ದಾರೆ.
ತಮ್ಮ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿರುವ ವಿರೋಧಿಗಳ ವಿರುದ್ಧ ಗುಡುಗಿದ ಶಿಂಧೆ, ಕೆಲವು ದಿನಗಳಿಂದ ಕೆಲವರು ಗುಂಪು ಕಟ್ಟಿಕೊಂಡು ನಮ್ಮ ವಿರುದ್ಧ ಬೊಗಳುತ್ತಿದ್ದಾರೆ. ಆದರೆ ನೆನಪಿರಲಿ, ನಾಯಿಗಳು ಗುಂಪಾಗಿ ಬೊಗಳುತ್ತವೆ, ಹುಲಿ ಯಾವಾಗಲೂ ಒಂಟಿಯಾಗಿಯೇ ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತದೆ. ಇದೇ ಅಸಲಿ ಶಿವಸೇನಾ ಎಂದು ತಿರುಗೇಟು ನೀಡಿದ್ದಾರೆ.

ಬಾಳಾಸಾಹೇಬ್ ಅವರೇ ನನ್ನ ಗಾಡ್‌ಫಾದರ್

ಹಿಂದೂಹೃದಯ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಅವರು ಸ್ಥಾಪಿಸಿದ ಶಿವಸೇನೆ ಇಂದು ತಮ್ಮ ನೇತೃತ್ವದಲ್ಲಿ ಸಾಮಾನ್ಯ ಜನರ ಧ್ವನಿಯಾಗಿ ಮತ್ತಷ್ಟು ಬಲಿಷ್ಠವಾಗಿ ಬೆಳೆಯುತ್ತಿದೆ ಎಂದು ಶಿಂಧೆ ಪ್ರತಿಪಾದಿಸಿದ್ದಾರೆ. ರಾಜಕಾರಣದಲ್ಲಿ ನನಗೆ ಯಾವುದೇ ಗಾಡ್‌ಫಾದರ್ ಇರಲಿಲ್ಲ. ನನ್ನ ಹಿಂದೆ ಇದ್ದದ್ದು ಬಾಳಾಸಾಹೇಬ್ ಎಂಬ ಮಹಾಶಕ್ತಿ ಮಾತ್ರ. ಸಾಮಾನ್ಯ ಶಾಖಾ ಪ್ರಮುಖನಾಗಿದ್ದ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಅದೇ ಶಕ್ತಿ ಎಂದು ಭಾವುಕರಾಗಿ ನುಡಿದಿದ್ದಾರೆ.
ಶಿವಸೇನೆ ಎಂಬುದು ಕೇವಲ ಕೆಲವು ನಾಯಕರ ಅಥವಾ ಒಂದು ಕುಟುಂಬದ ಸೊತ್ತಲ್ಲ, ಅದು ಪ್ರತಿಯೊಬ್ಬ ಸಾಮಾನ್ಯ ಕಾರ್ಯಕರ್ತನ ಹಾಗೂ ನಾಗರಿಕನ ಆಸ್ತಿ ಎಂದು ಶಿಂಧೆ ಸ್ಪಷ್ಟಪಡಿಸಿದ್ದಾರೆ. ಇತ್ತೀಚಿನ ಚುನಾವಣೆಗಳಲ್ಲಿ ಶಿವಸೇನೆಯು ಮಹಾರಾಷ್ಟ್ರದ ಹಳ್ಳಿ ಹಳ್ಳಿಗಳನ್ನು ತಲುಪಿ ಎರಡನೇ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.

ಉದ್ಧವ್ ಠಾಕ್ರೆ ವಿರುದ್ಧ ಶಿಂಧೆ ನೇರ ವಾಗ್ದಾಳಿ

ಠಾಕ್ರೆ ಕುಟುಂಬದ ಹೆಸರನ್ನು ಪ್ರಸ್ತಾಪಿಸದೆ ತೀವ್ರ ವಾಗ್ದಾಳಿ ನಡೆಸಿದ ಏಕನಾಥ್ ಶಿಂಧೆ, ಕೆಲವರು ಬಾಳಾಸಾಹೇಬ್ ಅವರ ಪವಿತ್ರ ಸಿದ್ಧಾಂತಗಳಿಗೆ ದ್ರೋಹ ಬಗೆದಿದ್ದಾರೆ. ಬಾಳಾಸಾಹೇಬ್ ಅವರು ತಮ್ಮ ಜೀವಿತಾವಧಿಯಲ್ಲಿ ಯಾವ ಕಾಂಗ್ರೆಸ್ ಮತ್ತು ಎನ್‌ಸಿಪಿ ಪಕ್ಷಗಳನ್ನು ತೀವ್ರವಾಗಿ ವಿರೋಧಿಸಿದ್ದರೋ, ಇಂದು ಅದೇ ಪಕ್ಷಗಳ ಹಂಗಿನಲ್ಲಿ ಬದುಕುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಹಿಂದೆ ಇದೇ ಕಾಂಗ್ರೆಸ್ ಮತ್ತು ಎನ್‌ಸಿಪಿ ಪಕ್ಷಗಳು ಶಿವಸೇನೆಯನ್ನು ಮುಗಿಸಲು ಸಂಚು ರೂಪಿಸಿದ್ದವು. ಆದರೆ ಇಂದು ಉದ್ಧವ್ ಬಣದ ನಾಯಕರು ತಮ್ಮ ರಾಜಕೀಯ ಉಳಿವಿಗಾಗಿ ಅವರ ಶರಣಾಗತಿಯಾಗಿದ್ದಾರೆ ಎಂದು ಶಿಂಧೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಕೊಂಡಾಡಿದ ಅವರು, ದೇಶಕ್ಕಾಗಿ ಮೋದಿ ಪಡುತ್ತಿರುವ ಶ್ರಮವನ್ನು ಬಾಳಾಸಾಹೇಬ್ ಬದುಕಿದ್ದರೆ ಖಂಡಿತಾ ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದರು ಎಂದರು.

ಮಹಾಯುತಿ ಮೈತ್ರಿಯಲ್ಲಿ ಯಾವುದೇ ಬಿರುಕಿಲ್ಲ

ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳನ್ನು ಶಿಂಧೆ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಮತ್ತು ಮಹಾರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ ಬದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಶಿವಸೇನೆಯ ನಿಜವಾದ ಶಕ್ತಿ ಇರುವುದು ಶಾಸಕರು ಅಥವಾ ಸಂಸದರಲ್ಲ, ಬದಲಿಗೆ ಹಗಲಿರುಳು ಶ್ರಮಿಸುವ ನಿಷ್ಠಾವಂತ ಶಿವಸೈನಿಕರಲ್ಲಿ ಇದೆ ಎಂದು ಹೇಳುವ ಮೂಲಕ ಕಾರ್ಯಕರ್ತರಲ್ಲಿ ಹೊಸ ಜೋಶ್ ತುಂಬಿದರು. ಶಿಂಧೆ ಅವರ ಈ ಟ್ರೇಲರ್ ಹೇಳಿಕೆಯು ಉದ್ಧವ್ ಠಾಕ್ರೆ ಬಣದಲ್ಲಿ ಮತ್ತೊಮ್ಮೆ ಆತಂಕ ಮೂಡಿಸಿರುವುದಂತೂ ಸುಳ್ಳಲ್ಲ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net