ಬೆಂಗಳೂರು:ಮಳೆಗಾಲ ಶುರುವಾದರೆ ಸಾಕು, ಸೊಳ್ಳೆಗಳ(Mosquito) ಕಾಟ ಹೆಚ್ಚಾಗುತ್ತದೆ. ಆದರೆ ಒಂದು ವಿಷಯವನ್ನು ನೀವು ಗಮನಿಸಿರಬಹುದು. ಒಂದೇ ಸ್ಥಳದಲ್ಲಿ ಕುಳಿತಿರುವ ಹಲವರಲ್ಲಿ ಕೆಲವರನ್ನು ಮಾತ್ರ ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ. "ನನ್ನನ್ನೇ ಯಾಕೆ ಸೊಳ್ಳೆಗಳು ಟಾರ್ಗೆಟ್ ಮಾಡುತ್ತವೆ?" ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಮೂಡಿರುತ್ತದೆ. ಇದೀಗ ವಿಜ್ಞಾನಿಗಳು ಇದಕ್ಕೆ ಉತ್ತರ ಕಂಡುಹಿಡಿದಿದ್ದಾರೆ.
ಇತ್ತೀಚೆಗೆ ಪ್ರಕಟವಾದ ಅಧ್ಯಯನದ ಪ್ರಕಾರ, ಸೊಳ್ಳೆಗಳು ಕೆಲವರನ್ನು ಹೆಚ್ಚು ಕಚ್ಚುವುದಕ್ಕೆ ಅವರ ದೇಹದಿಂದ ಹೊರಬರುವ ವಾಸನೆ ಮತ್ತು ಕೆಲವು ರಾಸಾಯನಿಕಗಳೇ ಮುಖ್ಯ ಕಾರಣವಾಗಿವೆ. ಕಣ್ಣಿನ ಬಣ್ಣ, ಕೂದಲಿನ ಬಣ್ಣ ಅಥವಾ ರಕ್ತದ ಗುಂಪು ಮುಖ್ಯ ಕಾರಣವಲ್ಲ ಎಂದು ಸಂಶೋಧಕರು ಹೇಳಿದ್ದಾರೆ.
ವಾಸನೆ, ಬೆವರು!
ಸೊಳ್ಳೆಗಳು ಮೊದಲು ಮನುಷ್ಯರು ಉಸಿರಾಟದ ಮೂಲಕ ಹೊರಬಿಡುವ ಕಾರ್ಬನ್ ಡೈಆಕ್ಸೈಡ್ (CO₂) ಅನ್ನು ಪತ್ತೆಹಚ್ಚುತ್ತವೆ. ಈ ಅನಿಲವು ದೂರದಿಂದಲೇ ಸೊಳ್ಳೆಗಳಿಗೆ ಮನುಷ್ಯರ ಇರುವಿಕೆಯನ್ನು ತಿಳಿಸುತ್ತದೆ. ನಂತರ ದೇಹದಿಂದ ಹೊರಬರುವ ವಾಸನೆ, ಬೆವರು ಹಾಗೂ ಚರ್ಮದ ಮೇಲಿನ ಕೆಲವು ರಾಸಾಯನಿಕಗಳು ಸೊಳ್ಳೆಗಳನ್ನು ಇನ್ನಷ್ಟು ಆಕರ್ಷಿಸುತ್ತವೆ.
ವಿಜ್ಞಾನಿಗಳ ಪ್ರಕಾರ, ಮನುಷ್ಯರ ಚರ್ಮದಿಂದ 300 ರಿಂದ 1,000 ಬಗೆಯ ವಾಸನೆ ಉಂಟುಮಾಡುವ ರಾಸಾಯನಿಕಗಳು ಹೊರಬರುತ್ತವೆ. ಅವುಗಳಲ್ಲಿ ಸುಮಾರು 27 ರಾಸಾಯನಿಕಗಳು ಸೊಳ್ಳೆಗಳನ್ನು ಹೆಚ್ಚು ಸೆಳೆಯುತ್ತವೆ. ಅದರಲ್ಲೂ "1-ಆಕ್ಟೆನ್-3-ಓಲ್" (1-octen-3-ol) ಎಂಬ ರಾಸಾಯನಿಕ ಹೆಚ್ಚಾಗಿ ಇರುವವರನ್ನು ಸೊಳ್ಳೆಗಳು ಹೆಚ್ಚು ಇಷ್ಟಪಡುತ್ತವೆ ಎಂದು ಅಧ್ಯಯನ ತಿಳಿಸಿದೆ.
ಗರ್ಭಿಣಿಯರು, ವಿಶೇಷವಾಗಿ ಎರಡನೇ ತ್ರೈಮಾಸಿಕದಲ್ಲಿರುವ ಮಹಿಳೆಯರು, ಸಾಮಾನ್ಯ ಜನರಿಗಿಂತ ಹೆಚ್ಚು ಸೊಳ್ಳೆಗಳ ಕಚ್ಚುವಿಕೆಗೆ ಒಳಗಾಗುವ ಸಾಧ್ಯತೆ ಇದೆ. ಕಾರಣ, ಅವರ ದೇಹದ ಉಷ್ಣತೆ ಮತ್ತು ಕಾರ್ಬನ್ ಡೈಆಕ್ಸೈಡ್ ಉತ್ಪಾದನೆ ಹೆಚ್ಚಿರುತ್ತದೆ.
ಬಿಯರ್ ಸೇವಿಸುವವರನ್ನು ಬಿಡಲ್ಲ!
ಇನ್ನೊಂದು ಕುತೂಹಲಕಾರಿ ವಿಷಯವೆಂದರೆ ಮದ್ಯಪಾನ ಮಾಡುವವರನ್ನು, ಅದರಲ್ಲೂ ಬಿಯರ್ ಸೇವಿಸುವವರನ್ನು ಸೊಳ್ಳೆಗಳು ಹೆಚ್ಚು ಆಕರ್ಷಿಸುತ್ತವೆ. ಬಿಯರ್ ಕುಡಿದ ನಂತರ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಜೊತೆಗೆ ಹೆಚ್ಚು ಕಾರ್ಬನ್ ಡೈಆಕ್ಸೈಡ್ ಹೊರಬಿಡಲಾಗುತ್ತದೆ ಮತ್ತು ಚರ್ಮದ ವಾಸನೆಯಲ್ಲೂ ಬದಲಾವಣೆ ಉಂಟಾಗುತ್ತದೆ. ಇದರಿಂದ ಸೊಳ್ಳೆಗಳು ಸುಲಭವಾಗಿ ಸೆಳೆಯಲ್ಪಡುತ್ತವೆ ಎಂದು ಸಂಶೋಧನೆ ಹೇಳಿದೆ.
ದೇಹದಲ್ಲಿ ಹೆಚ್ಚು ಬೆವರು ಬರುವವರು, ಹೆಚ್ಚಿನ ದೈಹಿಕ ಚಟುವಟಿಕೆ ಮಾಡುವವರು ಹಾಗೂ ದೇಹದ ಉಷ್ಣತೆ ಹೆಚ್ಚಿರುವವರನ್ನೂ ಸೊಳ್ಳೆಗಳು ಹೆಚ್ಚು ಕಚ್ಚುವ ಸಾಧ್ಯತೆ ಇದೆ. ಓಟಗಾರರು ಅಥವಾ ವ್ಯಾಯಾಮ ಮಾಡಿದ ನಂತರದ ಸಮಯದಲ್ಲಿ ಸೊಳ್ಳೆಗಳ ದಾಳಿಗೆ ಹೆಚ್ಚು ಒಳಗಾಗಬಹುದು ಎಂದು ತಜ್ಞರು ಹೇಳುತ್ತಾರೆ.
2022ರಲ್ಲಿ ನಡೆದ ಮತ್ತೊಂದು ಅಧ್ಯಯನದಲ್ಲಿ, ಕೆಲವರ ದೇಹದ ವಾಸನೆ ಸೊಳ್ಳೆಗಳನ್ನು 100 ಪಟ್ಟು ಹೆಚ್ಚು ಆಕರ್ಷಿಸಬಹುದು ಎಂಬುದು ಪತ್ತೆಯಾಗಿದೆ. ಆಶ್ಚರ್ಯದ ಸಂಗತಿ ಎಂದರೆ, ಈ ಗುಣವು ಹಲವು ತಿಂಗಳುಗಳವರೆಗೆ ಬದಲಾಗದೆ ಇರಬಹುದು. ಅಂದರೆ ಕೆಲವರು ಸಹಜವಾಗಿಯೇ "ಸೊಳ್ಳೆ ಮ್ಯಾಗ್ನೆಟ್" ಆಗಿರುತ್ತಾರೆ.
ಸೊಳ್ಳೆಗಳಿಂದ ಹೇಗೆ ರಕ್ಷಿಸಿಕೊಳ್ಳಬೇಕು?
ತಜ್ಞರ ಪ್ರಕಾರ, ಸಡಿಲವಾದ ಬಟ್ಟೆ ಧರಿಸುವುದು, ಸೊಳ್ಳೆ ನಿವಾರಕ ಕ್ರೀಮ್ ಅಥವಾ ಸ್ಪ್ರೇ ಬಳಸುವುದು, ಸೊಳ್ಳೆ ಪರದೆ ಬಳಸುವುದು ಹಾಗೂ ಮದ್ಯಪಾನವನ್ನು ಕಡಿಮೆ ಮಾಡುವುದು ಉತ್ತಮ. ಜೊತೆಗೆ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು ಅಗತ್ಯ.
ಒಟ್ಟಾರೆ, ಸೊಳ್ಳೆಗಳು ಯಾರನ್ನಾದರೂ ಯಾದೃಚ್ಛಿಕವಾಗಿ ಕಚ್ಚುವುದಿಲ್ಲ. ನಮ್ಮ ದೇಹದ ವಾಸನೆ, ಕಾರ್ಬನ್ ಡೈಆಕ್ಸೈಡ್ ಪ್ರಮಾಣ, ಉಷ್ಣತೆ ಮತ್ತು ಕೆಲವು ರಾಸಾಯನಿಕಗಳೇ ಅವುಗಳ ಆಯ್ಕೆಯನ್ನು ನಿರ್ಧರಿಸುತ್ತವೆ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ,(ಏಜೆನ್ಸೀಸ್).