ದಿಯಾ ಮಿರ್ಜಾ ವಿಡಿಯೋ ವಿವಾದ: ರಾಜಕಾರಣಿಗಳ ವಿರುದ್ಧ ಬಾಂಬೆ ಹೈಕೋರ್ಟ್ ಕಿಡಿ, ವಿಡಿಯೋ ರೀ-ಅಪ್ಲೋಡ್​ ಮಾಡಲು ಆದೇಶ! Dia Mirza

Dia Mirza
ಬಾಲಿವುಡ್ ನಟಿ ದಿಯಾ ಮಿರ್ಜಾ
Published on: 

ಮುಂಬೈ: ಭಾರತವು ಒಂದು ಜಾತ್ಯತೀತ ದೇಶ ಎಂಬುದನ್ನು ನೆನಪಿಸಿರುವ ಬಾಂಬೆ ಹೈಕೋರ್ಟ್, ಬಾಲಿವುಡ್ ನಟಿ ದಿಯಾ ಮಿರ್ಜಾ ( Dia Mirza ) ವಿರುದ್ಧ ರಾಜಕಾರಣಿಗಳು ನಡೆಸಿದ ಕ್ಷುಲ್ಲಕ ವಾಗ್ದಾಳಿಯ ಬಗ್ಗೆ ತೀವ್ರ ಆಕ್ರೋಶ ಹಾಗೂ ವಿಷಾದ ವ್ಯಕ್ತಪಡಿಸಿದೆ. ಪರಿಸರ ಸ್ನೇಹಿ ಮತ್ತು ಪಟಾಕಿ ರಹಿತ ದೀಪಾವಳಿ ಆಚರಿಸುವಂತೆ ದಿಯಾ ಮಿರ್ಜಾ ಜಾಗೃತಿ ಮೂಡಿಸಿದ್ದ ವಿಡಿಯೋವನ್ನು ಮುಂಬೈ ಮಹಾನಗರ ಪಾಲಿಕೆ (BMC) ತನ್ನ ಸೋಷಿಯಲ್ ಮೀಡಿಯಾ ಖಾತೆಯಿಂದ ತೆಗೆದುಹಾಕಿತ್ತು. ರಾಜಕೀಯ ಒತ್ತಡಕ್ಕೆ ಮಣಿದು ವಿಡಿಯೋ ಡಿಲೀಟ್ ಮಾಡಿದ್ದ ಪಾಲಿಕೆಯ ಕ್ರಮವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ನ್ಯಾಯಾಲಯ, ತಕ್ಷಣವೇ ಆ ವಿಡಿಯೋವನ್ನು ಮರು-ಅಪ್‌ಲೋಡ್ (Re-upload) ಮಾಡುವಂತೆ ಬೃಹನ್​ಮುಂಬೈ ಮಹಾನಗರ ಪಾಲಿಕೆಗೆ ಖಡಕ್ ಆದೇಶ ನೀಡಿದೆ.

ಮುಂಬೈ ಮಹಾನಗರ ಪಾಲಿಕೆಯ ಜಾಗೃತಿ ಅಭಿಯಾನದ ಭಾಗವಾಗಿ 44 ವರ್ಷದ ನಟಿ ದಿಯಾ ಮಿರ್ಜಾ ಅವರು ಸಾರ್ವಜನಿಕ ರಸ್ತೆಗಳಲ್ಲಿ ಪಟಾಕಿ ಸಿಡಿಸದಂತೆ ಹಾಗೂ ಹೈಕೋರ್ಟ್ ನೀಡಿದ್ದ ಆದೇಶವನ್ನು ಉಲ್ಲೇಖಿಸಿ ನಾಗರಿಕರಲ್ಲಿ ಮನವಿ ಮಾಡಿದ್ದರು. ಆದರೆ, ಮುಂಬೈ ಬಿಜೆಪಿ ಅಧ್ಯಕ್ಷ ಅಮೀತ್ ಸಾತಮ್ ಈ ವಿಡಿಯೋಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕೆಲವೇ ಗಂಟೆಗಳಲ್ಲಿ ಪಾಲಿಕೆಯು ನಟಿಯ ವಿಡಿಯೋವನ್ನು ತನ್ನ ಅಧಿಕೃತ ಖಾತೆಯಿಂದ ತೆಗೆದುಹಾಕಿತ್ತು.

Also Read
ಕೆಲವರು ಭಯಾನಕ ದೃಶ್ಯಗಳನ್ನು ಎಂಜಾಯ್​ ಮಾಡುವುದೇಕೆ? ಹೊಸ ಅಧ್ಯಯನ ಬಿಚ್ಚಿಟ್ಟಿದೆ ಅಚ್ಚರಿಯ ಸತ್ಯ...Brain Science
Dia Mirza

ಆಶ್ಚರ್ಯಕರ ಸಂಗತಿಯೆಂದರೆ, ಇದೇ ಅಭಿಯಾನದ ಭಾಗವಾಗಿ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಹಾಗೂ ಕ್ರಿಕೆಟಿಗ ಅಜಿಂಕ್ಯ ರಹಾನೆ ಅವರಂತಹ ಇತರ ಗಣ್ಯರು ಮಾಡಿದ ಜಾಗೃತಿ ವಿಡಿಯೋಗಳು ಪಾಲಿಕೆಯ ಖಾತೆಯಲ್ಲಿ ಹಾಗೆಯೇ ಮುಂದುವರಿದಿದ್ದು, ದಿಯಾ ಮಿರ್ಜಾ ಅವರ ವಿಡಿಯೋವನ್ನು ಮಾತ್ರ ಟಾರ್ಗೆಟ್ ಮಾಡಲಾಗಿತ್ತು.

ಈ ವಿಷಯಕ್ಕೆ ಸಂಬಂಧಿಸಿದಂತೆ ಮುಂಬೈ ಮೇಯರ್ ರಿತು ತಾವ್ಡೆ ಹಾಗೂ ಮಹಾರಾಷ್ಟ್ರ ಸಚಿವ ನಿತೀಶ್ ರಾಣೆ, ನಟಿ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದರು. ದಿಯಾ ಮಿರ್ಜಾ ಯಾವಾಗಲೂ ಹಿಂದೂ ವಿರೋಧಿ ಹಾಗೂ ಸರ್ಕಾರ ವಿರೋಧಿ ನಿಲುವು ತಳೆಯುತ್ತಾರೆ ಎಂದು ಮೇಯರ್ ಆರೋಪಿಸಿದ್ದರು. ಮತ್ತೊಂದೆಡೆ ಸಚಿವ ನಿತೀಶ್ ರಾಣೆ ಮಾತನಾಡಿ, "ದಿಯಾ ಮಿರ್ಜಾ ದೀಪಾವಳಿ ಬಗ್ಗೆ ಮಾತ್ರ ಜಾಗೃತಿ ಸಂದೇಶ ನೀಡುತ್ತಾರೆ. ಆದರೆ ಈದ್, ಮೊಹರಂ ಅಥವಾ ಬಕ್ರೀದ್ ಹಬ್ಬಗಳ ಸಮಯದಲ್ಲಿ ಇಂತಹ ಸಲಹೆಗಳನ್ನು ನೀಡುವುದಿಲ್ಲ. ಇಂತಹ ನಟ-ನಟಿಯರು ಸನಾತನ ಹಿಂದೂ ಧರ್ಮದ ವಿರುದ್ಧವಾಗಿದ್ದಾರೆ, ಈ ಕುರಿತು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಮುಂದೆ ಹೀಗಾಗದಂತೆ ತಡೆಯುತ್ತೇವೆ" ಎಂದು ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದರು.

ಈ ರಾಜಕೀಯ ರಾದ್ಧಾಂತದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಗಿರೀಶ್ ಕುಲಕರ್ಣಿ ಮತ್ತು ನೀಲಾ ಗೋಖಲೆ ಅವರನ್ನೊಳಗೊಂಡ ಉನ್ನತ ನ್ಯಾಯಪೀಠವು, ಜನಪ್ರತಿನಿಧಿಗಳ ಇಂತಹ 'ಕ್ಷುಲ್ಲಕ ಮನಸ್ಥಿತಿ' ಕಂಡು ನಮಗೆ ತೀವ್ರ ನೋವಾಗಿದೆ ಎಂದು ಹೇಳಿದೆ. ಪರಿಸರ ಜಾಗೃತಿ, ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ತಡೆಯುವ ಸದುದ್ದೇಶದಿಂದ ಮಾಡಿದ ವಿಡಿಯೋಗೆ ರಾಜಕೀಯ ಹಾಗೂ ಧಾರ್ಮಿಕ ಬಣ್ಣ ಬಳಿದಿರುವುದು ಅತ್ಯಂತ ದುರದೃಷ್ಟಕರ. ಭಾರತವು ಸಂವಿಧಾನಾತ್ಮಕವಾಗಿ ಜಾತ್ಯತೀತ ದೇಶ ಎಂಬುದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ನ್ಯಾಯಾಲಯ ರಾಜಕಾರಣಿಗಳಿಗೆ ಬಿಸಿ ಮುಟ್ಟಿಸಿದೆ.

Also Read
ಭೂಮಿಯ ರಕ್ಷಣಾ ಕವಚವನ್ನೇ ಭೇದಿಸಿದ ಸೌರ ಬಿರುಗಾಳಿ: ವಿಜ್ಞಾನಿಗಳನ್ನೇ ಬೆಚ್ಚಿಬೀಳಿಸಿತು ಹೊಸ ಸಂಶೋಧನೆ...Solar Superstorm
Dia Mirza

ಇದರೊಂದಿಗೆ, ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸಲು ಮುಂಬೈ ಮಹಾನಗರ ಪಾಲಿಕೆಯ ಕಮಿಷನರ್ ಅವರು ಪ್ರಸಿದ್ಧ ಗಣ್ಯರನ್ನು ಆಯ್ಕೆ ಮಾಡಿಕೊಂಡಿರುವುದು ಸಂಪೂರ್ಣವಾಗಿ ಸರಿಯಾದ ನಿರ್ಧಾರವಾಗಿತ್ತು ಎಂದು ಹೈಕೋರ್ಟ್ ಬೆಂಬಲಿಸಿದೆ. ಯಾವುದೇ ಅನಗತ್ಯ ವಿವಾದಗಳಿಲ್ಲದೆ ಜಾಗೃತಿ ಮೂಡಿಸಬೇಕಾದ ವಿಷಯದಲ್ಲಿ ಇಂತಹ ಅನಗತ್ಯ ಮತ್ತು ಭಾವನಾತ್ಮಕ ವಿಚಾರಗಳನ್ನು ತರುವುದು ತಪ್ಪು ಎಂದು ಅಭಿಪ್ರಾಯಪಟ್ಟ ಪೀಠವು, ತಕ್ಷಣವೇ ದಿಯಾ ಮಿರ್ಜಾ ಅವರ ವಿಡಿಯೋವನ್ನು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗುವಂತೆ ಮರು-ಅಪ್‌ಲೋಡ್ ಮಾಡುವಂತೆ ಪಾಲಿಕೆಗೆ ಸ್ಪಷ್ಟ ನಿರ್ದೇಶನ ನೀಡಿದೆ, (ಏಜೆನ್ಸೀಸ್​).