

Brain Science: ಭಯಾನಕ ಸಿನಿಮಾ ಅಥವಾ ಹಾರರ್ ಗೇಮ್ಗಳನ್ನು ನೋಡಿದಾಗ ಕೆಲವರಿಗೆ ಭಯಕ್ಕಿಂತ ರೋಮಾಂಚನವೇ ಹೆಚ್ಚು. ಇಂತಹ ವಿಚಿತ್ರ ಅನುಭವದ ಹಿಂದೆ ಅಡಗಿರುವ ಕಾರಣವನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ. ಸಾಮಾನ್ಯವಾಗಿ ಭಯಾನಕ ದೃಶ್ಯಗಳನ್ನು ನೋಡಿದಾಗ ಎದೆ ಬಡಿತ ಹೆಚ್ಚಾಗುತ್ತದೆ, ಮೈ ನಡುಗುತ್ತದೆ, ಕೆಲವರಂತೂ ಕಣ್ಣು ಮುಚ್ಚಿಕೊಳ್ಳುತ್ತಾರೆ. ಆದರೆ ಇದೇ ದೃಶ್ಯಗಳನ್ನು ನೋಡಿದಾಗ ಕೆಲವರು ಭಯಪಡುವ ಬದಲು ಖುಷಿಪಡುತ್ತಾರೆ ಎಂದರೆ ನಂಬುತ್ತೀರಾ? ಹೌದು, ಇಂತಹ ವಿಭಿನ್ನ ಮನಸ್ಥಿತಿಯ ಹಿಂದಿರುವ ಕಾರಣವನ್ನು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ.
ಸಾಮಾನ್ಯವಾಗಿ ಅಪಾಯದ ಸೂಚನೆ ಕಂಡಾಗ ಮನುಷ್ಯರಲ್ಲಿ ಭಯದ ಭಾವನೆ ಮೂಡುವುದು ಸಹಜ . ಇದು ಅಪಾಯದಿಂದ ದೂರವಿರಲು ಸಹಾಯ ಮಾಡುವ ಸಹಜ ಪ್ರತಿಕ್ರಿಯೆ. ಆದರೆ, ಮನೋರೋಗದ ಲಕ್ಷಣಗಳನ್ನು ಹೆಚ್ಚು ಹೊಂದಿರುವ ಕೆಲವರು ಭಯಾನಕ ಸನ್ನಿವೇಶಗಳನ್ನು ಬೇರೆಯದೇ ರೀತಿಯಲ್ಲಿ ಅನುಭವಿಸುತ್ತಾರೆ ಎಂದು ಸಂಶೋಧನೆ ತಿಳಿಸಿದೆ. ಇವರು ಭಯಪಡುವ ಬದಲು ಅಂತಹ ಸಂದರ್ಭಗಳನ್ನು ರೋಮಾಂಚನಕಾರಿ ಹಾಗೂ ಆನಂದದಾಯಕವಾಗಿ ಕಾಣಬಹುದು. ಮನೋವೈಜ್ಞಾನಿಕ ವರದಿಯ ಜರ್ನಲ್ನಲ್ಲಿ ಪ್ರಕಟವಾದ ಈ ಅಧ್ಯಯನದ ಪ್ರಕಾರ, ತಮಗೆ ಯಾವುದೇ ಅಪಾಯ ಸಂಭವಿಸುವುದಿಲ್ಲ ಎಂಬ ಅತಿಯಾದ ಆತ್ಮವಿಶ್ವಾಸವೇ ಇದಕ್ಕೆ ಪ್ರಮುಖ ಕಾರಣವಾಗಿರಬಹುದು.
ಈ ಸಂಶೋಧನೆಗಾಗಿ ಒಟ್ಟು 1,650 ಜನರನ್ನು ಒಳಗೊಂಡ ಎರಡು ಪ್ರತ್ಯೇಕ ಅಧ್ಯಯನಗಳನ್ನು ನಡೆಸಲಾಯಿತು. ಮೊದಲ ಅಧ್ಯಯನದಲ್ಲಿ 825 ಜನರನ್ನು ಆಯ್ಕೆ ಮಾಡಿಕೊಂಡು ಅವರ ವ್ಯಕ್ತಿತ್ವದ ಲಕ್ಷಣಗಳು ಹಾಗೂ ಅಪಾಯದಿಂದ ತಾವು ಸುಲಭವಾಗಿ ಪಾರಾಗಬಹುದು ಎಂಬ ನಂಬಿಕೆಯನ್ನು ಪ್ರಶ್ನಾವಳಿಗಳ ಮೂಲಕ ಪರಿಶೀಲಿಸಲಾಯಿತು. ನಂತರ ಅವರಿಗೆ ಎರಡು ವಿಭಿನ್ನ ವಿಡಿಯೋಗಳನ್ನು ತೋರಿಸಲಾಯಿತು. ಮೊದಲನೆಯದು ರೋಲರ್ ಕೋಸ್ಟರ್ನ ರೋಮಾಂಚಕಾರಿ ಸವಾರಿಯ ದೃಶ್ಯವಾಗಿದ್ದರೆ, ಎರಡನೆಯದು ಔಟ್ಲಾಸ್ಟ್ ಎಂಬ ಭಯಾನಕ ವಿಡಿಯೋ ಗೇಮ್ನ ದೃಶ್ಯವಾಗಿತ್ತು. ಈ ದೃಶ್ಯಗಳನ್ನು ನೋಡಿದ ಬಳಿಕ ಅವರಿಗೆ ಎಷ್ಟು ಭಯವಾಯಿತು, ಆತಂಕವು ಕೂಡಾ ಅಷ್ಟೇ ಉಂಟಾಯಿತೇ, ರೋಮಾಂಚನ ಅನುಭವಿಸಿದರೇ ಮತ್ತು ಆನಂದಿಸಿದರೇ ಎಂಬುದನ್ನು ದಾಖಲಿಸಲಾಯಿತು.
ಅಧ್ಯಯನದಲ್ಲಿ ಮನೋವಿಕೃತ ವ್ಯಕ್ತಿತ್ವದ ಲಕ್ಷಣಗಳು ಹೆಚ್ಚಿರುವವರು ಭಯಾನಕ ದೃಶ್ಯಗಳನ್ನು ನೋಡಿದಾಗ ಇತರರಿಗಿಂತ ಕಡಿಮೆ ಆತಂಕ ಅನುಭವಿಸಿ, ಹೆಚ್ಚು ರೋಮಾಂಚನ ಅನುಭವಿಸುವ ಪ್ರವೃತ್ತಿ ಹೊಂದಿರುವುದು ಕಂಡುಬಂದಿದೆ. ಅದರಲ್ಲೂ ತಮಗೆ ಯಾವುದೇ ಹಾನಿಯಾಗುವುದಿಲ್ಲ ಎಂಬ ಬಲವಾದ ನಂಬಿಕೆ ಹೊಂದಿದ್ದವರಲ್ಲಿ ನಕಾರಾತ್ಮಕ ಭಾವನೆಗಳು ಕಡಿಮೆಯಾಗಿದ್ದವು.
ಎರಡನೇ ಅಧ್ಯಯನದಲ್ಲಿ ಸಂಶೋಧಕರು ಮತ್ತೊಂದು ಅಂಶವನ್ನು ಪರಿಶೀಲಿಸಿದರು. ಅದೇನೆಂದರೆ ಬೇಸರದ ಮನಸ್ಥಿತಿ. ಇಂತಹ ವ್ಯಕ್ತಿಗಳು ಬೇಗನೆ ಬೇಸರಗೊಳ್ಳುತ್ತಾರೆಯೇ ಮತ್ತು ಅದಕ್ಕಾಗಿಯೇ ಭಯಾನಕ ಅನುಭವಗಳನ್ನು ಇಷ್ಟಪಡುತ್ತಾರೆಯೇ ಎಂಬುದನ್ನು ಅಧ್ಯಯನ ಮಾಡಲಾಯಿತು. ಆದರೆ ಸಂಶೋಧನೆಯ ಪ್ರಕಾರ, ಬೇಸರವು ಭಯಾನಕ ದೃಶ್ಯಗಳನ್ನು ಆನಂದಿಸುವುದಕ್ಕೆ ಪ್ರಮುಖ ಕಾರಣವಾಗಿರಲಿಲ್ಲ. ಬದಲಾಗಿ, ತಮಗೆ ಅಪಾಯ ಸಂಭವಿಸುವುದಿಲ್ಲ ಎಂಬ ಅತಿಯಾದ ಭರವಸೆಯೇ ಭಯವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿರಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಎಲ್ಲರಿಗೂ ಭಯವೇ ಆಗುವುದಿಲ್ಲಾ ಅಂತಲ್ಲಾ, ಕೆಲವು ವ್ಯಕ್ತಿಗಳು ಭಯವನ್ನು ಅನುಭವಿಸುವ ಮತ್ತು ಅದನ್ನು ಅರ್ಥೈಸಿಕೊಳ್ಳುವ ರೀತಿ ವಿಭಿನ್ನವಾಗಿರಬಹುದು. ಭಯಾನಕ ಸನ್ನಿವೇಶವನ್ನು ಅಪಾಯವೆಂದು ನೋಡುವ ಬದಲು ರೋಮಾಂಚಕಾರಿ ಅನುಭವವೆಂದು ಪರಿಗಣಿಸುವ ಸಾಧ್ಯತೆ ಇದೆ. ಆದರೆ, ಈ ಅಧ್ಯಯನದಲ್ಲಿ ನೈಜ ಅಪಾಯಕಾರಿ ಘಟನೆಗಳ ಬದಲಿಗೆ ವಿಡಿಯೋ ದೃಶ್ಯಗಳನ್ನು ಬಳಸಲಾಗಿತ್ತು. ಅಲ್ಲದೆ, ಭಾಗವಹಿಸಿದವರು ತಮ್ಮ ಭಾವನೆಗಳನ್ನು ತಾವೇ ದಾಖಲಿಸಿದ್ದರು. ಹೀಗಾಗಿ ಈ ಫಲಿತಾಂಶಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಇನ್ನಷ್ಟು ಸಂಶೋಧನೆ ಅಗತ್ಯವಿದೆ.
ಒಟ್ಟಿನಲ್ಲಿ, ಎಲ್ಲರಿಗೂ ಭಯ ಒಂದೇ ರೀತಿಯಲ್ಲಿ ಅನುಭವವಾಗುವುದಿಲ್ಲ ಎಂಬುದನ್ನು ಈ ಅಧ್ಯಯನ ಸೂಚಿಸುತ್ತದೆ. ಕೆಲವರಿಗೆ ಭಯಾನಕ ದೃಶ್ಯಗಳು ಆತಂಕದ ಮೂಲವಾದರೆ, ಇನ್ನು ಕೆಲವರಿಗೆ ಅದೇ ದೃಶ್ಯಗಳು ರೋಮಾಂಚನದ ಅನುಭವ ನೀಡಬಹುದು, (ಏಜೆನ್ಸೀಸ್).