ಲಾಲು ಪ್ರಸಾದ್ ಯಾದವ್‌ರಿಂದ ಅಧಿಕಾರ ದುರುಪಯೋಗ!...ಪತ್ನಿ, ಪುತ್ರ ಸೇರಿ ಏಳು ಜನರಿಗೆ ಬಿಗ್ ಶಾಕ್ ಕೊಟ್ಟ ದೆಹಲಿ ಕೋರ್ಟ್! | IRCTC Scam

IRCTC Scam | ಲಾಲು ಪ್ರಸಾದ್ ಯಾದವ್‌ರಿಂದ ಅಧಿಕಾರ ದುರುಪಯೋಗ!...ಪತ್ನಿ, ಪುತ್ರ ಸೇರಿ ಏಳು ಜನರಿಗೆ ಬಿಗ್ ಶಾಕ್ ಕೊಟ್ಟ ದೆಹಲಿ ಕೋರ್ಟ್!
IRCTC Scam | ಲಾಲು ಪ್ರಸಾದ್ ಯಾದವ್‌ರಿಂದ ಅಧಿಕಾರ ದುರುಪಯೋಗ!...ಪತ್ನಿ, ಪುತ್ರ ಸೇರಿ ಏಳು ಜನರಿಗೆ ಬಿಗ್ ಶಾಕ್ ಕೊಟ್ಟ ದೆಹಲಿ ಕೋರ್ಟ್!
Published on
ನವದೆಹಲಿ: ಐಆರ್‌ಸಿಟಿಸಿ ಹೋಟೆಲ್ ಹಂಚಿಕೆ ಅಕ್ರಮ ಪ್ರಕರಣದಲ್ಲಿ (IRCTC Scam) ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್, ಅವರ ಪತ್ನಿ ರಾಬ್ರಿ ದೇವಿ ಹಾಗೂ ಪುತ್ರ ತೇಜಸ್ವಿ ಯಾದವ್ ಸೇರಿದಂತೆ ಏಳು ಜನರು ಮತ್ತು ಸಂಬಂಧಿತ ಕಂಪನಿಗಳ ವಿರುದ್ಧ ದೋಷಾರೋಪ ಹೊರಿಸಲು ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ಆದೇಶ ನೀಡಿದೆ. ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಈ ಆರೋಪ ನಿಗದಿಪಡಿಸಲಾಗುತ್ತಿದ್ದು, ಲಾಲು ಕುಟುಂಬಕ್ಕೆ ಭಾರೀ ಹಿನ್ನಡೆ ಉಂಟಾಗಿದೆ.
ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರು ಈ ಆದೇಶವನ್ನು ಹೊರಡಿಸಿದ್ದು, ಆರೋಪಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲವಾದ ಅನುಮಾನಗಳಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಈ ತನಿಖೆಯು ರಾಜಕೀಯ ದ್ವೇಷದಿಂದ ಕೂಡಿದೆ ಎಂಬ ವಾದವನ್ನು ನ್ಯಾಯಾಲಯ ತಳ್ಳಿಹಾಕಿದ್ದು, ತನಿಖೆಯ ಸ್ವರೂಪ, ಸಮಯ ಮತ್ತು ಹಾದಿಯು ಇಂತಹ ವಾದವನ್ನು ಬೆಂಬಲಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ವಿಚಾರಣೆ ಎದುರಿಸಲಿರುವ ಒಂಬತ್ತು ಆರೋಪಿಗಳಲ್ಲಿ ಲಾಲು ಪ್ರಸಾದ್ ಯಾದವ್, ರಾಬ್ರಿ ದೇವಿ, ತೇಜಸ್ವಿ ಯಾದವ್, ಲಾಲು ಅವರ ಆಪ್ತ ಪ್ರೇಮ್ ಚಂದ್ ಗುಪ್ತಾ ಮತ್ತು ಅವರ ಪತ್ನಿ ಸರಳಾ ಗುಪ್ತಾ, ಸುಜಾತಾ ಹೋಟೆಲ್ಸ್‌ನ ನಿರ್ದೇಶಕರಾದ ವಿನಯ್ ಕೊಚ್ಚರ್ ಮತ್ತು ಲಾರಾ ಪ್ರಾಜೆಕ್ಟ್ಸ್ ಮತ್ತು ಸುಜಾತಾ ಹೋಟೆಲ್ಸ್ ಸಂಸ್ಥೆಗಳು ಸೇರಿವೆ. ಇದೇ ಪ್ರಕರಣದಲ್ಲಿ ನ್ಯಾಯಾಲಯವು ಏಳು ಜನರನ್ನು ಖುಲಾಸೆಗೊಳಿಸಿದ್ದು, ಅವರಲ್ಲಿ ಲಾಲು ಪ್ರಸಾದ್ ಅವರ ಅಳಿಯ ರಾಹುಲ್ ಯಾದವ್, ಗೌರವ್ ಗುಪ್ತಾ, ನಾಥ್ ಮಲ್ ಕಂಕರಿಯಾ, ವಿಜಯ್ ತ್ರಿಪಾಠಿ, ದೇವಕಿ ನಂದನ್ ತುಳಸ್ಯಾನ್, ರಾಜೀವ್ ರೇಲನ್ ಮತ್ತು ಅಭಿಷೇಕ್ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ ಸೇರಿವೆ.

ಲಾಲು ಯಾದವ್ ಮತ್ತು ಕುಟುಂಬದ ಮೇಲಿರುವ ಆರೋಪಗಳೇನು..?

ಈ ಪ್ರಕರಣವು 2004 ಮತ್ತು 2009 ರ ನಡುವೆ ಲಾಲು ಪ್ರಸಾದ್ ಯಾದವ್ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದೆ. ರಾಂಚಿ ಮತ್ತು ಪುರಿಯಲ್ಲಿರುವ ರೈಲ್ವೆಯ ಬಿಎನ್‌ಆರ್ ಹೋಟೆಲ್‌ಗಳ ನಿರ್ವಹಣಾ ಗುತ್ತಿಗೆಯನ್ನು ನಿಯಮಗಳನ್ನು ಉಲ್ಲಂಘಿಸಿ ಸುಜಾತಾ ಹೋಟೆಲ್ಸ್‌ಗೆ ನೀಡಲಾಗಿದೆ ಎಂದು ಸಿಬಿಐ ಆರೋಪಿಸಿತ್ತು. ಆರೋಪಗಳ ಪ್ರಕಾರ, ವಿನಯ್ ಕೊಚ್ಚರ್​ಗೆ ಸೇರಿದ ಸುಜಾತಾ ಹೋಟೆಲ್ಸ್‌ಗೆ ಗುತ್ತಿಗೆಯನ್ನು ವಿಸ್ತರಿಸಲು ಪ್ರತಿಯಾಗಿ, ಪಟನಾದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಪ್ರಮುಖ ಜಮೀನನ್ನು ಮಾರುಕಟ್ಟೆ ಅಥವಾ ಸರ್ಕಾರಿ ದರಕ್ಕಿಂತ ಅತ್ಯಂತ ಕಡಿಮೆ ಬೆಲೆಗೆ ಲಾಲು ಕುಟುಂಬಕ್ಕೆ ನಿಕಟವಾಗಿದ್ದ ಕಂಪನಿಗೆ ವರ್ಗಾಯಿಸಲಾಗಿತ್ತು.
ಈ ಜಮೀನಿನ ವಹಿವಾಟು ಹೋಟೆಲ್ ಗುತ್ತಿಗೆಗೆ ಪ್ರತಿಯಾಗಿ ನೀಡಿದ ಲಂಚ ಎಂದು ಸಿಬಿಐ ಆರೋಪಿಸಿದೆ. ಅಲ್ಲದೆ ಪ್ರೇಮ್ ಚಂದ್ ಗುಪ್ತಾ ಅವರ ಪತ್ನಿ ಸರಳಾ ಗುಪ್ತಾ ಅವರಿಗೆ ಸೇರಿದ ಕಂಪನಿಯ ಮೂಲಕ ಈ ಆಸ್ತಿಯನ್ನು ವರ್ಗಾಯಿಸಲಾಗಿತ್ತು ಎಂದು ತನಿಖಾ ಸಂಸ್ಥೆ ಹೇಳಿತ್ತು.
ಇದರ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ವಹಿವಾಟಿನ ಮೂಲಕ ಗಳಿಸಿದ ಅಕ್ರಮ ಹಣದ ಮೂಲದ ತನಿಖೆ ನಡೆಸಿತ್ತು. ಪಟನಾದ ಜಮೀನನ್ನು ಹೊಂದಿದ್ದ ಕಂಪನಿಯ ಮಾಲೀಕತ್ವವನ್ನು ನಂತರ ಕಡಿಮೆ ದರದಲ್ಲಿ ಶೇರುಗಳನ್ನು ಖರೀದಿಸುವ ಮೂಲಕ ರಾಬ್ರಿ ದೇವಿ ಮತ್ತು ತೇಜಸ್ವಿ ಯಾದವ್ ಅವರ ನಿಯಂತ್ರಣಕ್ಕೆ ತರಲಾಗಿತ್ತು ಎಂದು ಇಡಿ ಆರೋಪಪಟ್ಟಿಯಲ್ಲಿ ತಿಳಿಸಿದೆ. ಜಮೀನು ಮತ್ತು ಶೇರುಗಳನ್ನು ಖರೀದಿಸಲು ಬಳಸಿದ ಹಣದ ಮೂಲಗಳು ಸಂಶಯಾಸ್ಪದವಾಗಿದ್ದು, ಅದನ್ನು ವಿವಿಧ ಕಂಪನಿಗಳ ಜಾಲದ ಮೂಲಕ ವರ್ಗಾಯಿಸಲಾಗಿತ್ತು ಎಂದು ಸಂಸ್ಥೆ ಹೇಳಿದೆ.
ಜುಲೈ 2018 ರಲ್ಲಿ ಸಿಬಿಐ ಈ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡಿತ್ತು. ತದನಂತರ ಇಡಿ ಪಿಎಂಎಲ್‌ಎ ಕಾಯ್ದೆಯಡಿ ಪ್ರತ್ಯೇಕ ತನಿಖೆ ನಡೆಸಿತ್ತು. ಇದೀಗ ನ್ಯಾಯಾಲಯದ ಆದೇಶದಿಂದಾಗಿ ಈ ಮನಿ ಲ್ಯಾಂಡರಿಂಗ್ ಪ್ರಕರಣವು ಅಧಿಕೃತ ವಿಚಾರಣೆಯ ಹಂತಕ್ಕೆ ತಲುಪಿದೆ. ದೋಷಾರೋಪ ಎದುರಿಸುತ್ತಿರುವ ಯಾದವ್ ಕುಟುಂಬ ಹಾಗೂ ಇತರ ಆರೋಪಿಗಳು ಶಾಸನಬದ್ಧವಾಗಿ ದೋಷಾರೋಪಣೆ ಪ್ರಕ್ರಿಯೆಗಾಗಿ ಅಕ್ಟೋಬರ್ 3 ರಂದು ನ್ಯಾಯಾಲಯದ ಮುಂದೆ ಹಾಜರಾಗಬೇಕಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net