

ಲಖನೌ: ಸಾಮಾನ್ಯವಾಗಿ ವ್ಯಕ್ತಿ ಮೃತಪಟ್ಟ 13 ದಿನಗಳ ನಂತರ ಕುಟುಂಬಸ್ಥರು ಮತ್ತು ಬಂಧುಗಳು ಸೇರಿ ತಿಥಿ ( Terahvin ) ಕಾರ್ಯಕ್ರಮವನ್ನು ಮಾಡುವುದು ಭಾರತೀಯ ಸಂಪ್ರದಾಯ. ಆದರೆ, ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯ ಜೋಹ್ರಿ ಗ್ರಾಮದ 80 ವರ್ಷದ ವೃದ್ಧ ಚೌಧರಿ ಬಲ್ಜೋರ್ ಸಿಂಗ್ ಅವರು ಈ ಸಂಪ್ರದಾಯಕ್ಕೆ ಸಂಪೂರ್ಣ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ತಾವು ಬದುಕಿರುವಾಗಲೇ ತಮ್ಮದೇ 13ನೇ ದಿನದ ತಿಥಿ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.
ಭಾನುವಾರ ನಡೆದ ಈ ಅಪರೂಪದ ಕಾರ್ಯಕ್ರಮದಲ್ಲಿ ಸುಮಾರು 900 ಮಂದಿ ಪಾಲ್ಗೊಂಡು ಭರ್ಜರಿ ಭೋಜನ ಸವಿದಿದ್ದಾರೆ. ಸ್ವತಃ ಬಲ್ಜೋರ್ ಸಿಂಗ್ ಅವರೇ ಕಾರ್ಯಕ್ರಮದುದ್ದಕ್ಕೂ ಹಾಜರಿದ್ದು, ಆಗಮಿಸಿದ ಎಲ್ಲಾ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಅವರೊಂದಿಗೆ ಕುಳಿತು ಊಟ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ತಾವು ಬದುಕಿರುವಾಗಲೇ ಇಂತಹದೊಂದು ವಿಚಿತ್ರ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂಬುದನ್ನು ಸ್ವತಃ ಬಲ್ಜೋರ್ ಸಿಂಗ್ ಅವರೇ ವಿವರಿಸಿದ್ದಾರೆ. ತಾವು ಮೃತಪಟ್ಟ ನಂತರ ಕುಟುಂಬದವರ ಮೇಲೆ ಈ ಕಾರ್ಯಕ್ರಮದ ಹೊರೆ ಹಾಕಲು ಅವರಿಗೆ ಇಷ್ಟವಿರಲಿಲ್ಲವಂತೆ. ಅಲ್ಲದೆ, ತಾವು ಸತ್ತ ಮೇಲೆ ಕಾರ್ಯಕ್ರಮದ ವ್ಯವಸ್ಥೆಗಳ ಬಗ್ಗೆ ಬಂಧುಗಳಿಂದ ಅಥವಾ ಸಮಾಜದಿಂದ ತಮ್ಮ ಕುಟುಂಬವು ಯಾವುದೇ ಟೀಕೆ ಅಥವಾ ಆರೋಪಗಳನ್ನು ಎದುರಿಸಬಾರದು ಎಂಬುದು ಅವರ ಆಶಯವಾಗಿತ್ತು. ನನ್ನ ಕೆಲಸವನ್ನು ನಾನೇ ಸ್ವತಃ ಮಾಡಿಕೊಳ್ಳುತ್ತಿದ್ದೇನೆ. ಜನರು ಸಹಭೋಜನಕ್ಕೆ ಸೇರುವುದನ್ನು ನಾನು ನೋಡಿದ್ದೇನೆ, ನಾನು ಬದುಕಿರುವಾಗಲೇ ಎಲ್ಲರನ್ನೂ ಒಟ್ಟಿಗೆ ಸೇರಿಸಿ ಊಟ ಹಾಕಿಸಬೇಕೆಂಬುದು ನನ್ನ ಆಸೆಯಾಗಿತ್ತು ಎಂದು 80ರ ಹರೆಯದ ಬಲ್ಜೋರ್ ಸಿಂಗ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಭಾನುವಾರ ಬೆಳಗ್ಗೆ ಜೋಹ್ರಿ ಗ್ರಾಮದ ಬಲ್ಜೋರ್ ಸಿಂಗ್ ಅವರ ಮನೆಯಲ್ಲಿ ಸಾಂಪ್ರದಾಯಿಕ 'ಹವನ' (ಹೋಮ) ನಡೆಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಧ್ಯಾಹ್ನದ ವೇಳೆಗೆ ಅಂಗಳದಲ್ಲಿ ಬೃಹತ್ ಪಾತ್ರೆಗಳಲ್ಲಿ ಅಡುಗೆ ಸಿದ್ಧಪಡಿಸಿ, ಸುಮಾರು 900 ಅತಿಥಿಗಳಿಗೆ ಭರ್ಜರಿ ಔತಣಕೂಟ ಏರ್ಪಡಿಸಲಾಗಿತ್ತು. ಪೂರಿ, ರಾಯಿತ, ಎರಡು ಬಗೆಯ ಪಲ್ಯಗಳು ಹಾಗೂ ಲಡ್ಡು ಸೇರಿದಂತೆ ವಿವಿಧ ಸಾಂಪ್ರದಾಯಿಕ ಭಕ್ಷ್ಯಗಳನ್ನು ಅತಿಥಿಗಳಿಗೆ ಬಡಿಸಲಾಯಿತು. ಶೋಕದ ವಾತಾವರಣವಿರಬೇಕಾದ ತಿಥಿ ಕಾರ್ಯಕ್ರಮವು, ಬಲ್ಜೋರ್ ಸಿಂಗ್ ಅವರ ಉಪಸ್ಥಿತಿಯಿಂದಾಗಿ ಸಂಭ್ರಮದ ಮಿಲನ ಮಹೋತ್ಸವದಂತೆ ಕಂಡುಬಂದಿತು.
ಈ ಅಪರೂಪದ ಸಮಾರಂಭದ ಅತ್ಯಂತ ಮಹತ್ವದ ಘಟ್ಟವೆಂದರೆ ಸಾಂಪ್ರದಾಯಿಕ 'ಪಗಡಿ' (ಪೇಟ ತೊಡಿಸುವ) ಶಾಸ್ತ್ರ. ಸಾಮಾನ್ಯವಾಗಿ ಕುಟುಂಬದ ಹಿರಿಯರು ನಿಧನರಾದ ನಂತರ, ಕುಟುಂಬದ ಮುಂದಿನ ಜವಾಬ್ದಾರಿಯನ್ನು ವಹಿಸಿಕೊಳ್ಳುವ ವ್ಯಕ್ತಿಗೆ ಪೇಟ ತೊಡಿಸಿ ಅಧಿಕೃತವಾಗಿ ಜವಾಬ್ದಾರಿ ಹಸ್ತಾಂತರಿಸಲಾಗುತ್ತದೆ. ಆದರೆ ಬಲ್ಜೋರ್ ಸಿಂಗ್ ಅವರು ತಮ್ಮ ಸಮ್ಮುಖದಲ್ಲೇ ಈ ಶಾಸ್ತ್ರವನ್ನು ನೆರವೇರಿಸಿದರು. ಸುಮಾರು ಎರಡು ಬಿಘಾ ಜಮೀನು ಹೊಂದಿರುವ ಅವರು, ತಮ್ಮ 10 ವರ್ಷದ ಮೊಮ್ಮಗ ಮುಕುಲ್ ತಲೆಗೆ ಸ್ವತಃ ಪೇಟ ತೊಡಿಸುವ ಮೂಲಕ ಕುಟುಂಬದ ಜವಾಬ್ದಾರಿಯನ್ನು ಮುಂದಿನ ಪೀಳಿಗೆಗೆ ಸಾಂಕೇತಿಕವಾಗಿ ಹಸ್ತಾಂತರಿಸಿದರು.
ಬಲ್ಜೋರ್ ಸಿಂಗ್ ಅವರಿಗೆ ಮೂವರು ಪುತ್ರಿಯರಿದ್ದು, ಮಗಳು ಪಿಂಕಿ, ಅಳಿಯ ಸುಖ್‌ಪಾಲ್, ಮೂವರು ಮೊಮ್ಮಕ್ಕಳು ಹಾಗೂ ಮೊಮ್ಮಗ ಮುಕುಲ್ ಸೇರಿದಂತೆ ಇಡೀ ಕುಟುಂಬವು ಈ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು. ತಾವು ಬದುಕಿರುವಾಗಲೇ ಕುಟುಂಬದ ಜವಾಬ್ದಾರಿಗಳ ಹಸ್ತಾಂತರ ಸುಗಮವಾಗಿ ನಡೆಯಬೇಕು ಎಂಬ ಹಿರಿಯನ ದೂರದೃಷ್ಟಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮದೇ ತಿಥಿ ಊಟಕ್ಕೆ ಜನರನ್ನು ಆಹ್ವಾನಿಸಿ, ಮೊಮ್ಮಗನಿಗೆ ಪಟ್ಟ ಕಟ್ಟಿದ ಈ ಘಟನೆಯು ಸುತ್ತಮುತ್ತಲಿನ ಹಳ್ಳಿಗಳಲ್ಲೂ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಮತ್ತು ಚೌಧರಿ ಸಮುದಾಯದ ಮುಖಂಡರಷ್ಟೇ ಅಲ್ಲದೆ, ಉತ್ತರ ಪ್ರದೇಶದ ರಾಜ್ಯ ಸಚಿವ ಕೆ.ಪಿ. ಮಲಿಕ್ ಅವರೂ ಭಾಗವಹಿಸಿದ್ದರು. ಸಾಮಾನ್ಯವಾಗಿ ಸಾವಿನ ನಂತರದ ದುಃಖ ಮತ್ತು ಸ್ಮರಣೆಗೆ ಸೀಮಿತವಾಗಿರುವ 'ತಿಥಿ' ಕಾರ್ಯಕ್ರಮವು, ಬಲ್ಜೋರ್ ಸಿಂಗ್ ಅವರ ಈ ವಿಭಿನ್ನ ನಿರ್ಧಾರದಿಂದಾಗಿ ಜೀವಂತ ವ್ಯಕ್ತಿಯನ್ನು ಭೇಟಿಯಾಗಿ, ಅವರೊಂದಿಗೆ ಕುಳಿತು ಊಟ ಮಾಡಿ ಶುಭ ಹಾರೈಸುವ ಅಪರೂಪದ ಸಂದರ್ಭವಾಗಿ ಮಾರ್ಪಟ್ಟಿತು. ತಮ್ಮ ಜೀವಿತಾವಧಿಯಲ್ಲೇ ತಮ್ಮ ಆಸೆಯನ್ನು ಪೂರೈಸಿಕೊಂಡ ಬಲ್ಜೋರ್ ಸಿಂಗ್ ಅವರ ಈ ನಡೆ ಈಗ ಎಲ್ಲೆಡೆ ವೈರಲ್ ಆಗಿದೆ, (ಏಜೆನ್ಸೀಸ್).