ಯಮುನಾ ನದಿಯಲ್ಲಿ ಸತ್ತ ಮೀನುಗಳು ತೇಲುತ್ತಿರುವ ವಿಡಿಯೋ ವೈರಲ್; ನೀರು ಕಲುಷಿತದ ಬಗ್ಗೆ AAP - BJP ನಡುವೆ ರಾಜಕೀಯ ಕೆಸರೆರಚಾಟ

ಯಮುನಾ ನದಿಯಲ್ಲಿ ಸತ್ತ ಮೀನು ಪತ್ತೆ
ಯಮುನಾ ನದಿಯಲ್ಲಿ ಸತ್ತ ಮೀನು ಪತ್ತೆ
Published on: 
  • ಯಮುನಾ ನದಿಯಲ್ಲಿ ಸತ್ತ ಮೀನುಗಳು ತೇಲುತ್ತಿರುವ ವಿಡಿಯೋ ವೈರಲ್.

  • ಮತ್ತೆ ಸರ್ಕಾರ ಹಾಗೂ ಎಎಪಿ ನಾಯಕರ ಮಧ್ಯೆ ರಾಜಕೀಯ ವಾಕ್ಸಮರ.

  • ಎಎಪಿ ಕಾರ್ಯಕರ್ತರು ನದಿಗೆ ಸತ್ತ ಮೀನು ಹಾಕಿಲ್ಲ ಎಂದು ಎಎಪಿ ಸ್ಪಷ್ಟನೆ.

Dead Fish In Yamuna: ದೆಹಲಿಯ ಸೋನಿಯಾ ವಿಹಾರ್ ಬಳಿ ಯಮುನಾ ನದಿಯಲ್ಲಿ ಮೀನುಗಳ ಮಾರಣ ಹೋಮವಾಗಿದೆ. ತೇಲುತ್ತಿರುವ ಸತ್ತ ಮೀನುಗಳ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ರಾಜಕೀಯ ಹಗ್ಗ-ಜಗ್ಗಾಟಕ್ಕೆ ಕಾರಣವಾಗಿದೆ. ಬಿಜೆಪಿ ಮತ್ತು ವಿರೋಧ ಪಕ್ಷ ಆಮ್ ಆದ್ಮಿ ಪಕ್ಷದ ನಡುವೆ ಟ್ವೀಟ್ ವಾರ್ ನಡೆಯುತ್ತಿದೆ.

ಯಮುನಾ ನದಿಯಲ್ಲಿ ಕೆಲವು ದಿನಗಳ ಹಿಂದೆ 'ನಮೋ ಯಮುನಾ ರಿವರ್ ಸಫಾರಿ' ಎನ್ನುವ ಕ್ರೂಸ್ ಸೇವೆ ಆರಂಭವಾಗಿತ್ತು. ಇದು ಅಧಿಕೃತವಾಗಿ ಉದ್ಘಾಟನೆಗೊಂಡ ಕೆಲವೇ ದಿನಗಳಲ್ಲಿ ಮೀನುಗಳು ಸಾವನ್ನಪ್ಪಿವೆ. ಈ ತಿಂಗಳಲ್ಲಿ ಸಾವಿರಾರು ಮೀನುಗಳು ಮೃತಪಟ್ಟಿರುವ 2ನೇ ಘಟನೆ ಇದಾಗಿದೆ.

Also Read
ಸ್ವಚ್ಛತೆಯ ಭಾಗವಾಗಿ ಯಮುನಾ ನದಿ ದಡದಲ್ಲಿ ಬರ್ತಡೇ ಆಚರಿಸಿಕೊಳ್ಳಲು ಕರೆ ನೀಡಿದ ಸಚಿವ ಪರ್ವೇಶ್ ವರ್ಮಾ | Parvesh Verma
ಯಮುನಾ ನದಿಯಲ್ಲಿ ಸತ್ತ ಮೀನು ಪತ್ತೆ

ಪರ್ವೇಶ್​ ವರ್ಮಾ ಹೇಳಿದ್ದೇನು?

ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಲು ಯಾರೋ ಕುತಂತ್ರಿಗಳು ಈ ಕೆಲಸ ಮಾಡಿದ್ದಾರೆ. ಯಮುನೆಯಲ್ಲಿ ಫೆರ್ರಿ ಸೇವೆಗಳು ಪ್ರಾರಂಭವಾದ ಮರುದಿನವೇ, ಉದ್ದೇಶಪೂರ್ವಕವಾಗಿ ಎಲ್ಲಿಯೋ ಸತ್ತ ಮೀನನ್ನು ನದಿಗೆ ತಂದು ಹಾಕಿದ್ದಾರೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳು ತಿಳಿಸಿದರು. ಈ ಸಂಬಂಧ ಇಂದು ಎಫ್‌ಐಆರ್ ದಾಖಲಿಸಲಾಗುತ್ತಿದೆ. ಈ ಕೃತ್ಯ ಎಸೆಗಿದವರು ಯಾರು ಮತ್ತು ಅವರಿಗೆ ಎಎಪ್ ಕಾರ್ಯಕರ್ತರೊಂದಿಗೆ ಯಾವುದೇ ಸಂಬಂಧವಿದೆಯೇ ಎನ್ನುವುದರ ಸುತ್ತ ತನಿಖೆ ನಡೆಸಲಾಗುತ್ತದೆ ಎಂದು ದೆಹಲಿ ಪರಿಸರ ಸಚಿವ ಪರ್ವೇಶ್ ವರ್ಮಾ ಹೇಳಿದರು.

ಎಎಪಿ ಕಿಡಿ

ಎಎಪಿ ಕಾರ್ಯಕರ್ತರು ನದಿಗೆ ಮೀನು ತಂದು ಹಾಕಿದ್ದಾರೆ ಎನ್ನುವ ಬಿಜೆಪಿ ಆರೋಪವನ್ನು ತಳ್ಳಿ ಹಾಕಿದ ಆಮ್​ ಆದ್ಮಿ ಪಕ್ಷದ ನಾಯಕರುಈ ನೀರು ಮೀನುಗಳಿಗೇ ಸುರಕ್ಷಿತವಾಗಿಲ್ಲ ಎಂದಾದರೆ, ಮನುಷ್ಯರಿಗೆ ಸುರಕ್ಷಿತವೇ ಎಂದು ಪ್ರಶ್ನಿಸಿದ್ದಾರೆ.

ನೀರಿನಲ್ಲಿ ಸತ್ತ ಮೀನುಗಳ ವಿಡಿಯೋ ಹಂಚಿಕೊಂಡ ಎಎಪ್ ಎಂಎಲ್‌ಎ ಹಾಗೂ ಮಾಜಿ ಸಚಿವ ಸೌರಭ್ ಭಾರದ್ವಾಜ್, ಸತ್ತ ಮೀನು ಎಲ್ಲಿಂದಲೋ ತಂದು ಹಾಕಿಲ್ಲ. ಆ ಬಗ್ಗೆ ದೂರಿನಲ್ಲಿಯೂ ಉಲ್ಲೇಖಿಸಿಲ್ಲ. ಯಮುನೆಯ ಕಲುಷಿತ ನೀರಿನಿಂದ ಮೀನು ಸತ್ತಿವೆ. ಇದು ಎಲ್ಲರಿಗೂ ತಿಳಿದಿರುವ ಸತ್ಯ. ಯಮುನಾ ನದಿಯ ಮಾಲಿನ್ಯದ ಬಗ್ಗೆ ತನಿಖೆಯಾಗಬೇಕು. ಸಾವಿರಾರು ಮೀನುಗಳು ಹೇಗೆ ಸತ್ತವು ಎನ್ನುವದರ ಬಗ್ಗೆ ತನಿಖೆ ನಡೆಸುವ ಧೈರ್ಯ ಸರ್ಕಾರಕ್ಕಿದೆಯೇ ಎನ್ನುವ ಸವಾಲನ್ನು ಅವರು ಹಾಕಿದರು.

ಅಕ್ಟೋಬರ್‌ನಲ್ಲಿಯೂ ಮೀನುಗಳ ಮಾರಣ ಹೋಮ

ಕೆಲವು ವಾರದ ಹಿಂದೆ ಬಿಜೆಪಿ ಸಂಸತ್​ ಸದಸ್ಯ ಮನೋಜ್​ ತಿವಾರಿ ಅವರು ಯಮುನಾ ನದಿಯಲ್ಲಿ ಮುಳುಗಿ, ನೀರನ್ನು ಕುಡಿದಿದ್ದರು. ಆ ಮೂಲಕ ಯಮುನಾ ನದಿ ಕಲುಷಿತಗೊಂಡಿಲ್ಲ ಎನ್ನುವುದನ್ನು ತೋರ್ಪಡಿಸುವುದು ಅವರ ಉದ್ದೇಶವಾಗಿತ್ತು.

ದೆಹಲಿಯ ವಜೀರಾಬಾದ್ ಬ್ಯಾರೇಜ್‌ನ ಮೇಲ್ಭಾಗದಲ್ಲಿರುವ ಬುರಾರಿಯಲ್ಲಿ ಅಕ್ಟೋಬರ್‌ನಲ್ಲಿ ಮೀನುಗಳು ಸತ್ತಿರುವುದು ಕಂಡುಬಂದಿತ್ತು. ಮಳೆಗಾಲದ ಸಮಯದಲ್ಲಿ ಒಳಹರಿವು ಇರಬೇಕಾದ ಅವಧಿಯಲ್ಲಿಯೇ ಈ ಸಾವುಗಳು ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿತ್ತು. ಸದ್ಯ ದೆಹಲಿ ರಾಜ್ಯ ರಾಜಕೀಯದಲ್ಲಿ, ಯಮುನಾ ನದಿಯಲ್ಲಿ ಸತ್ತ ಮೀನುಗಳ ಬಗ್ಗೆ ಜೋರಾಗಿ ಚರ್ಚೆ ನಡೆಯುತ್ತಿದೆ. ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ, (ಏಜೆನ್ಸೀಸ್).