ನವದೆಹಲಿ: ದೆಹಲಿಯ ಬಿಜೆಪಿ ಸರ್ಕಾರದ ಸಚಿವ ಪರ್ವೇಶ್ ವರ್ಮಾ ಅವರು, ರಾಷ್ಟ್ರ ರಾಜಧಾನಿಯ ಜನರಿಗೆ ಒಂದು ವಿಚಿತ್ರ ವಿನಂತಿ ಮಾಡಿದ್ದು, ಯಮುನಾ ನದಿಯನ್ನು ಸ್ವಚ್ಛವಾಗಿಡುವ ಯೋಜನೆಯ ಭಾಗವಾಗಿ ನದಿಯ ದಡದುದ್ದಕ್ಕೂ ಹುಟ್ಟುಹಬ್ಬದಂತಹ ವಿಶೇಷ ಆಚರಣೆಗಳನ್ನು ಆಚರಿಸುವಂತೆ ಕರೆ ನೀಡಿದ್ದಾರೆ.
ಸೋಮವಾರ(ಅ. 19) ನಡೆದ ಚಲೋ ಯಮುನಾ ನದಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ನದಿಯೊಂದಿಗೆ ವೈಯಕ್ತಿಕ ಬಾಂಧವ್ಯ ರೂಪುಗೊಂಡಾಗ, ಜನರು ಅದನ್ನು ಸ್ವಚ್ಛವಾಗಿಡುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಈ ಹಿನ್ನೆಲೆ ನದಿ ದಡದಲ್ಲಿ ಹುಟ್ಟುಹಬ್ಬ ಸೇರಿ ಬೇರೆ ಬೇರೆ ಆಚರಣೆಗಳನ್ನು ಮಾಡಿಕೊಳ್ಳುವಂತೆ ಹೇಳಿದ್ದಾರೆ.
ಕುಟುಂಬಗಳು ಒಟ್ಟಾಗಿ ಸೇರಿ ಆಚರಿಸಲು ನದಿಯ ದಡದಲ್ಲಿ ಕೆಲವು ವಿಶೇಷ ಗುಡಿಸಲುಗಳನ್ನು ಸ್ಥಾಪಿಸಲಾಗುವುದು. ಅದೇ ರೀತಿ, ಘಾಟ್‌ಗಳನ್ನು ಸ್ವಚ್ಛಗೊಳಿಸುವಂತಹ ಸ್ವಯಂಪ್ರೇರಿತ ಚಟುವಟಿಕೆಗಳಲ್ಲಿ ಭಾಗವಹಿಸುವವರು ಸಹ ಅಲ್ಲಿಯೇ ಉಳಿಯಬಹುದು. ನವೆಂಬರ್ 7 ರಂದು ತಮ್ಮ ಹುಟ್ಟುಹಬ್ಬವನ್ನು ಅಲ್ಲಿಯೇ ಆಚರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.
ಯಮುನಾ ನದಿಯ ಶುದ್ಧೀಕರಣ ಮತ್ತು ಅಭಿವೃದ್ಧಿಯ ಕುರಿತು ಸರ್ಕಾರ ತೆಗೆದುಕೊಂಡ ಹಲವಾರು ನಿರ್ಧಾರಗಳನ್ನು ತಿಳಿಸಿದ ಅವರು, ಮುಂದಿನ ಚುನಾವಣೆಗೆ ಮುನ್ನ ನದಿಯನ್ನು ಸ್ವಚ್ಛಗೊಳಿಸುವುದು ಗುರಿಯಾಗಿದೆ ಎಂದಿದ್ದಾರೆ. ಇನ್ನೂ ನಿನ್ನೆ ನಡೆದ ಚಲೋ ಯಮುನಾ' ಕಾರ್ಯಕ್ರಮದಲ್ಲಿ 35 ಸಾವಿರ ಜನರು ಭಾಗವಹಿಸಿ ನದಿಯ ಎರಡೂ ಬದಿಗಳಲ್ಲಿರುವ 70 ಸ್ಥಳಗಳನ್ನು ಸ್ವಚ್ಛಗೊಳಿಸಿದ್ದಾರೆ (ಏಜೆನ್ಸೀಸ್).