ಈ ವರ್ಷ ಅಮೆರಿಕದ ಪಾಕಿಸ್ತಾನ್ ಪ್ರೀತಿ ಇನ್ನೂ ಉಕ್ಕಿ, ಇರಾನ್ ಜತೆಗಿನ ಸಮರವನ್ನು ಶಮನಗೊಳಿಸಲು ಮಧ್ಯಸ್ಥಿಕೆಗಾಗಿ ಟ್ರಂಪ್ ಆಶ್ರಯಿಸಿದರು; ತಮ್ಮ ಅಳಿಯ ಜಾರೆಡ್ ಕುಶ್ನರ್, ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಉಪಾಧ್ಯಕ್ಷ ಜೆಡಿ ವ್ಯಾನ್ಸ್ರನ್ನು ಮಾತುಕತೆಗಾಗಿ ಇಸ್ಲಾಮಾಬಾದ್ಗೆ ಕಳುಹಿಸಿದರು. ಅಲ್ಲಿ ಮೊದಲ ಸುತ್ತಿನ ಮಾತುಕತೆಗಳು ವಿಫಲವಾಗಿ ಎರಡನೆಯ ಸುತ್ತಿನ ಮಾತುಕತೆಗಳು ಸ್ವಿಜರ್ಲ್ಯಾಂಡ್ನಲ್ಲಿ ನಡೆಯಬಹುದು ಎಂಬ ಮಾತುಗಳು ಕೇಳಿಬಂದಾಗ, "ಮಾತುಕತೆಗಳು ಪಾಕಿಸ್ತಾನದಲ್ಲೇ ನಡೆಯುತ್ತವೆ, ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ನಾನೇ ಇಸ್ಲಾಮಾಬಾದ್ಗೆ ಹೋಗಬಹುದು' ಅಂದರು ಟ್ರಂಪ್! ಇದೆಲ್ಲವನ್ನೂ ನೋಡಿ ಭಾರತದಲ್ಲಿ ಕೆಲವರು ಹಾಡತೊಡಗಿದ ರಾಗವೆಂದರೆ, "ರಾಜತಂತ್ರದಲ್ಲಿ ಮೋದಿ ಸೋತುಹೋಗಿದ್ದಾರೆ, ಪಾಕಿಸ್ತಾನ ಗೆಲವು ಸಾಧಿಸಿದೆ, ಇದರಿಂದಾಗಿ ಭಾರತಕ್ಕೆ ಹಾನಿಯಾಗಲಿದೆ, ಈ ಹಾನಿಗೆ ಮೋದಿ ಸರ್ಕಾರವೇ ಹೊಣೆ' ಎಂದು! ಈ "ತೀರ್ಮಾನ'ದ ಸತ್ಯಾಸತ್ಯತೆ ಎಷ್ಟು? "ಜಗದಗಲ'ದಲ್ಲಿ ಇಂದು ಅದನ್ನು ಶೋಧಿಸೋಣ.