ಮಧ್ಯರಾತ್ರಿ ಆಂಧ್ರ ಅಪ್ಪಳಿಸುವತ್ತ ಮುರಾಸು ಸೈಕ್ಲೋನ್​! ವಿಮಾನ ಹಾರಾಟ ರದ್ದು; 30,000ಕ್ಕೂ ಹೆಚ್ಚು ಜನರ ಸ್ಥಳಾಂತರ ಚುರುಕು | Cyclone Murasu

Cyclone-Murasu
ಆಂಧ್ರ ಕರಾವಳಿ ಅಪ್ಪಳಿಸುವತ್ತ ಮುರಾಸು ಸೈಕ್ಲೋನ್​! ವಿಮಾನ ಹಾರಾಟ ರದ್ದು; 30,000ಕ್ಕೂ ಹೆಚ್ಚು ಜನರ ಸ್ಥಳಾಂತರ ಚುರುಕು
Published on: 

Cyclone Murasu: ಬಂಗಾಳ ಕೊಲ್ಲಿಯಲ್ಲಿ ರಚನೆಗೊಂಡಿರುವ ಮುರಾಸು ಚಂಡಮಾರುತವು ಇದೀಗ ಗಂಟೆಗೆ 100ರಿಂದ 110 ಕಿ.ಮೀ ವೇಗದಲ್ಲಿ ಆಂಧ್ರಪ್ರದೇಶ ಕರಾವಳಿಯತ್ತ ಅಪ್ಪಳಿಸಲು ಸಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮತ್ತೊಮ್ಮೆ ಮುನ್ನೆಚ್ಚರಿಕೆ ನೀಡಿದೆ.

'ಅರ್ನಬ್' ಚಂಡಮಾರುತ ಸೃಷ್ಟಿಸಿದ್ದ ಅನಾಹುತದ ಬೆನ್ನಲ್ಲೇ ಆಂಧ್ರಪ್ರದೇಶಕ್ಕೆ ಮತ್ತೊಂದು ಭಾರಿ ಸಂಕಟ ಎದುರಾಗಿದೆ. ಪ್ರಸ್ತುತ ದಕ್ಷಿಣ ಭಾರತದ ಕರಾವಳಿಯತ್ತ ವೇಗವಾಗಿ ನುಗ್ಗುತ್ತಿರುವ ಮುರಾಸು ಚಂಡಮಾರುತವನ್ನು ಎದುರಿಸಲು ಸದ್ಯ ಆಂಧ್ರಪ್ರದೇಶ ಸೇರಿದಂತೆ ತಮಿಳುನಾಡು, ಒಡಿಶಾ ಮತ್ತು ತೆಲಂಗಾಣ ರಾಜ್ಯಗಳು ತೀವ್ರ ಕಟ್ಟೆಚ್ಚರ ವಹಿಸಿದ್ದು, ಈ ಪ್ರದೇಶಗಳಲ್ಲಿ ವಿಮಾನ ಮತ್ತು ರೈಲು ಸಂಚಾರಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿವೆ.

ಐಎಂಡಿ ವರದಿಯ ಪ್ರಕಾರ, ಮುರಾಸು ಚಂಡಮಾರುತವು ನವೆಂಬರ್ 2ರ ರಾತ್ರಿ 11:30ರಿಂದ ನವೆಂಬರ್ 3ರ ಮುಂಜಾನೆ 4:00 ಗಂಟೆಯ ಅವಧಿಯಲ್ಲಿ ಆಂಧ್ರಪ್ರದೇಶದ ನೆಲ್ಲೂರು ಮತ್ತು ನರಸಾಪುರದ ನಡುವೆ ಕರಾವಳಿ ದಾಟುವ ಸಾಧ್ಯತೆಯಿದೆ. ಈ ಸಮಯದಲ್ಲಿ ಗಂಟೆಗೆ 100ರಿಂದ 110 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಕೆಲವೊಮ್ಮೆ ಇದರ ವೇಗ ಗಂಟೆಗೆ 120 ಕಿಲೋಮೀಟರ್ ಮುಟ್ಟುವ ನಿರೀಕ್ಷೆಯೂ ಇದೆ.

ವಿಮಾನ ಸೇವೆ ರದ್ದು

ಚೆನ್ನೈ ವಿಮಾನ ನಿಲ್ದಾಣದಲ್ಲಿ ಕನಿಷ್ಠ 11 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಆಂಧ್ರಪ್ರದೇಶದ ವಿಜಯವಾಡ, ವಿಶಾಖಪಟ್ನಂ ಮತ್ತು ತಿರುಪತಿ ವಿಮಾನ ನಿಲ್ದಾಣಗಳಲ್ಲಿ 19 ದೇಶೀಯ ಫ್ಲೈಟ್​ಗಳ ಹಾರಾಟವನ್ನು ಕ್ಯಾನ್ಸಲ್​ ಮಾಡಲಾಗಿದೆ. ಇನ್ನು, ವಿಶಾಖಪಟ್ನಂ, ರಾಜಮಂಡ್ರಿ, ವಿಜಯವಾಡ ಮತ್ತು ತಿರುಪತಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ವಿಮಾನ ಹಾರಾಟದ ಸ್ಥಿತಿಗತಿಯನ್ನು ಪರಿಶೀಲಿಸಿ ಹೊರಡುವಂತೆ ಇಂಡಿಗೋ (IndiGo) ವಿಮಾನಯಾನ ಸಂಸ್ಥೆ ಮನವಿ ಮಾಡಿದೆ.

2,000ಕ್ಕೂ ಹೆಚ್ಚು ಜನರ ಸ್ಥಳಾಂತರ

ಆಂಧ್ರಪ್ರದೇಶ ಸರ್ಕಾರವು ಕರಾವಳಿಯ ಅಪಾಯಕಾರಿ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯವನ್ನು ಚುರುಕಾಗಿಸಿದೆ. ಈಗಾಗಲೇ 2,000ಕ್ಕೂ ಅಧಿಕ ಜನರನ್ನು ಸುರಕ್ಷಿತ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದ್ದು, ಒಟ್ಟು 30,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲು ಮುಂದಾಗಿದೆ ಎಂದು ವರದಿಯಾಗಿದೆ.

ಯಾವೆಲ್ಲ ರಾಜ್ಯಗಳಲ್ಲಿ ಭಾರಿ ಮಳೆ?

ಆಂಧ್ರಪ್ರದೇಶ: ನ.2 ಮತ್ತು 3ರಂದು ಕರಾವಳಿ ಆಂಧ್ರದಲ್ಲಿ ಸಾಧಾರಣದಿಂದ ಭಾರಿ ಹಾಗೂ ಕೆಲವು ಪ್ರತ್ಯೇಕ ಪ್ರದೇಶಗಳಲ್ಲಿ ಅತ್ಯಂತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ನವೆಂಬರ್ 4ರವರೆಗೆ ಮಳೆ ಮುಂದುವರಿಯಲಿದೆ. ಇನ್ನು, ನರೆಯ ರಾಜ್ಯಗಳಾದ ತಮಿಳುನಾಡು, ತೆಲಂಗಾಣ, ದಕ್ಷಿಣ ಒಡಿಶಾ ಮತ್ತು ದಕ್ಷಿಣ ಛತ್ತೀಸ್‌ಗಢದಲ್ಲಿ ಭಾರಿ ಮಳೆಯುವ ಮುನ್ಸೂಚನೆ ಇದೆ.

Also Read
ಭವಿಷ್ಯದಲ್ಲಿ ಮಾನವನ ಉಳಿವಿಗೆ ಅತಿದೊಡ್ಡ ಸವಾಲಾಗಲಿವೆ ಈ ರೋಬಾಟ್​ ಅನ್ನೋದಕ್ಕೆ ಇದೊಂದು ವಿಡಿಯೋ ಸಾಕು! | Humanoid Robots
Cyclone-Murasu

ಶಾಲಾ-ಕಾಲೇಜುಗಳಿಗೆ ರಜೆ

ತಮಿಳುನಾಡಿನ ಚೆನ್ನೈನಲ್ಲಿ ಭಾರಿ ಮಳೆಯಾಗುವ ಹಿನ್ನೆಲೆ ಆರೆಂಜ್ ಅಲರ್ಟ್ ಘೋಷಣೆಯಾಗಿದ್ದು, ಇಂದು ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಹವಾಮಾನ ಪರಿಸ್ಥಿತಿಯನ್ನು ನೋಡಿಕೊಂಡು ನಾಳೆಯೂ ರಜೆ ಮುಂದುವರಿಸಬೇಕೋ ಎಂಬುದನ್ನು ಜಿಲ್ಲಾ ಆಡಳಿತ ಮಂಡಳಿ ನಿರ್ಧರಿಸಲಿದೆ.

ಮೀನುಗಾರರಿಗೆ ಎಚ್ಚರಿಕೆ

ಆಂಧ್ರಪ್ರದೇಶ, ಉತ್ತರ ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಒಡಿಶಾ ಕರಾವಳಿಯ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ,(ಏಜೆನ್ಸೀಸ್).