ಆಂಧ್ರ ಕರಾವಳಿಗೆ 'ಮುರಾಸು' ಹತ್ತಿರ! ಭಾರಿ ಮಳೆ, 120 ಕಿ.ಮೀ ವೇಗದ ಬಿರುಗಾಳಿ; ತಮಿಳುನಾಡು-ಪುದುಚೇರಿಯೂ ಹೈಅಲರ್ಟ್​ | Cyclone Murasu

Cyclone Murasu
ಆಂಧ್ರ ಕರಾವಳಿಗೆ 'ಮುರಾಸು' ಹತ್ತಿರ! ಭಾರಿ ಮಳೆ, 120 ಕಿ.ಮೀ ವೇಗದ ಬಿರುಗಾಳಿ; ತಮಿಳುನಾಡು-ಪುದುಚೇರಿಯೂ ಹೈಅಲರ್ಟ್​ | Cyclone Murasu
Published on: 

Cyclone Murasu: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಮುರಾಸು ಚಂಡಮಾರುತ ಆಂಧ್ರಪ್ರದೇಶದ ಕರಾವಳಿಗೆ ಇನ್ನೇನು ಕೆಲವೇ ಸಮಯಗಳಲ್ಲಿ ಅಪ್ಪಳಿಸಲಿಸಿದ್ದು, ಗಂಟೆಗೆ 120 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಿದೆ. ದಕ್ಷಿಣ ಆಂಧ್ರ, ತಮಿಳುನಾಡು, ಪುದುಚೇರಿ ಸೇರಿದಂತೆ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಗಾಳಿಗೆ ಮರಗಳು ಧರೆಗೆ ಉರುಳಿವೆ.

ಕರಾವಳಿಯತ್ತ ಮುಖಮಾಡಿರುವ ಮುರಾಸು ಚಂಡಮಾರುತದ ಪ್ರಭಾವದಿಂದಾಗಿ ಆಂಧ್ರಪ್ರದೇಶ, ತಮಿಳುನಾಡು ಹಾಗೂ ಪುದುಚೇರಿ ಬಿರುಸಿನ ಮಳೆ ಸುರಿಯುತ್ತಿದ್ದು, ಜಿಲ್ಲಾಡಳಿತಗಳು ಹೈಅಲರ್ಟ್​ ಆಗಿವೆ. ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಮಾಹಿತಿ ಪ್ರಕಾರ, ನವೆಂಬರ್ 3ರ ಮುಂಜಾನೆ 1:00 ಗಂಟೆಗೆ ಚಂಡಮಾರುತದ ಪ್ರವೇಶ ಆಗಿದೆ. 1:30ರ ವೇಳೆಗೆ ಮುರಾಸು ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯಲ್ಲಿದ್ದು, ಒಂಗೋಲ್‌ನಿಂದ ಆಗ್ನೇಯಕ್ಕೆ 40 ಕಿ.ಮೀ, ಕಾವಲಿಯಿಂದ ಈಶಾನ್ಯಕ್ಕೆ 60 ಕಿ.ಮೀ ಹಾಗೂ ಬಾಪಟ್ಲಾದಿಂದ ದಕ್ಷಿಣಕ್ಕೆ 70 ಕಿ.ಮೀ ದೂರದಲ್ಲಿ ಕೇಂದ್ರೀಕೃತವಾಗಿತ್ತು ಎಂದು ವಿವರಿಸಲಾಗಿದೆ.

ಇದು ನೆಲ್ಲೂರು ಮತ್ತು ನರಸಾಪುರದ ನಡುವೆ ಕರಾವಳಿ ದಾಟಿದ್ದು, ಕಡಲ ತೀರದಲ್ಲಿ ಗಂಟೆಗೆ 110 ಕಿ.ಮೀನಿಂದ 120 ಕಿ.ಮೀ ವೇಗದಲ್ಲಿ ಭೀಕರ ಬಿರುಗಾಳಿ ಬೀಸುತ್ತಿದೆ. ಚೀರಾಲ ಸೇರಿದಂತೆ ಹಲವು ಭಾಗಗಳಲ್ಲಿ ಸಾಲು ಸಾಲು ಮರಗಳು ಧರೆಗುರುಳಿವೆ. ಚಂಡಮಾರುತದ ಪ್ರಭಾವದಿಂದಾಗಿ ದಕ್ಷಿಣ ಕರಾವಳಿ ಆಂಧ್ರಪ್ರದೇಶದಲ್ಲಿ ಕಳೆದೆರಡು ಗಂಟೆಗಳಿಂದ ಬಿಡುವಿಲ್ಲದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

ತಮಿಳುನಾಡಿಗೂ ಕಂಟಕ

ಮುಂದಿನ 12 ಗಂಟೆಗಳ ಕಾಲ ಆಂಧ್ರದ ದಕ್ಷಿಣ ಕರಾವಳಿ ಭಾಗಗಳಲ್ಲಿ ಅತ್ಯಂತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಮುರಾಸು ತೀವ್ರಗೊಂಡ ಹಿನ್ನೆಲೆ ಪುದುಚೇರಿ ಮತ್ತು ತಮಿಳುನಾಡಿನಲ್ಲಿ ಜಡಿಮಳೆ ಶುರುವಾಗಿದೆ. ಮಧ್ಯರಾತ್ರಿಯಿಂದಲೇ ಪುದುಚೇರಿಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅತ್ತ ತಮಿಳುನಾಡಿನ ಹಲವು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಭಾರಿ ಮಳೆ ಪೀಡಿತ ಜಿಲ್ಲೆಗಳಿವು

ಚೆನ್ನೈ ಮತ್ತು ತಿರುವಳ್ಳೂರು ಜಿಲ್ಲೆಗಳಲ್ಲಿ ನಿರಂತರ ಭಾರಿ ಮಳೆಯಾಗುವ ಮುನ್ಸೂಚನೆಯಿದೆ. ಇದರೊಂದಿಗೆ ಚೆಂಗಲ್ಪಟ್ಟು, ಕಾಂಚೀಪುರಂ, ರಾಣಿಪೇಟೆ, ವೇಲೂರು ಹಾಗೂ ನೀಲಗಿರಿ ಜಿಲ್ಲೆಗಳಲ್ಲೂ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಚಂಡಮಾರುತವು ಸಂಪೂರ್ಣವಾಗಿ ಕರಾವಳಿ ದಾಟಿ ಒಳನಾಡಿಗೆ ಚಲಿಸಿದ ನಂತರ ಮಳೆಯ ತೀವ್ರತೆ ಕ್ರಮೇಣ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್).