'ಅರ್ನಬ್'​, 'ಮುರಾಸು' ಬೆನ್ನಲ್ಲೇ 'ಅಕ್ವಾನ್'​ ಸೈಕ್ಲೋನ್​! 145 ಕಿ.ಮೀ. ವೇಗದ ಗಾಳಿ ಬೀಸುವ ಮುನ್ಸೂಚನೆ; ಆಂಧ್ರ, ಒಡಿಶಾ ಹೈಅಲರ್ಟ್ | Cyclone Akvan

Cyclone Akvan
'ಅರ್ನಬ್'​, 'ಮುರಾಸು' ಬೆನ್ನಲ್ಲೇ 'ಅಕ್ವಾನ್'​ ಸೈಕ್ಲೋನ್​! 145 ಕಿ.ಮೀ. ವೇಗದ ಗಾಳಿ ಬೀಸುವ ಮುನ್ಸೂಚನೆ; ಆಂಧ್ರ, ಒಡಿಶಾ ಹೈಅಲರ್ಟ್ | Cyclone Akvan
Published on: 

Cyclone Akvan: ನ.20ರಂದು ಅಪ್ಪಳಿಸಲಿರುವ ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ‘ಅಕ್ವಾನ್’ ಚಂಡಮಾರುತ ಈಗ ಆಂಧ್ರಪ್ರದೇಶದ ಕರಾವಳಿಯತ್ತ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಮುನ್ಸೂಚನೆ ಲಭಿಸಿದೆ.

ಆಂಧ್ರಕ್ಕೆ ಇದು 3ನೇ ಚಂಡಮಾರುತ

ಆಂಧ್ರಪ್ರದೇಶ–ಯಾನಂ ಕರಾವಳಿಯ ನಡುವೆ ಅಪ್ಪಳಿಸುವ ಸಾಧ್ಯತೆ ಹಿನ್ನೆಲೆ ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಚುರುಕುಗೊಳಿಸಲಾಗಿದೆ. ಒಡಿಶಾದಲ್ಲಿ ರಕ್ಷಣಾ ಮತ್ತು ಸ್ಥಳಾಂತರ ಕಾರ್ಯಾಚರಣೆಗಾಗಿ 74 ತಂಡಗಳನ್ನು ನಿಯೋಜಿಸಲಾಗಿದೆ ಎಂದು ವರದಿಯಾಗಿದೆ.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆಯ ಪ್ರಕಾರ, ನವೆಂಬರ್ 17ರ ಸಂಜೆ ವೇಳೆಗೆ ಇದು ತೀವ್ರ ಚಂಡಮಾರುತವಾಗಿ ಬಲವಾಗುವ ಸಾಧ್ಯತೆಯಿದೆ. ನವೆಂಬರ್ 19ರ ವೇಳೆಗೆ ಅತಿ ತೀವ್ರ ಸೈಕ್ಲೋನ್​ ಆಗಿ ರೂಪುಗೊಳ್ಳುವ ನಿರೀಕ್ಷೆಯಿದೆ. ನವೆಂಬರ್ 16ರ ರಾತ್ರಿ 11.30ರ ವೇಳೆಗೆ ಚಂಡಮಾರುತವು ದಕ್ಷಿಣ ಮತ್ತು ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯ ಮಧ್ಯಭಾಗದಲ್ಲಿ ಬಹುತೇಕ ಒಂದೇ ಸ್ಥಳದಲ್ಲಿ ಸ್ಥಿರವಾಗಿತ್ತು. ಚೆನ್ನೈನಿಂದ ಸುಮಾರು 610 ಕಿ.ಮೀ. ಪೂರ್ವಕ್ಕೆ, ಮಚಲಿಪಟ್ಟಣಂನಿಂದ 660 ಕಿ.ಮೀ. ಆಗ್ನೇಯಕ್ಕೆ ಹಾಗೂ ವಿಶಾಖಪಟ್ಟಣಂನಿಂದ 670 ಕಿ.ಮೀ. ದಕ್ಷಿಣ-ಆಗ್ನೇಯಕ್ಕೆ ಕೇಂದ್ರಿತವಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂದಿನ ದಿನಗಳಲ್ಲಿ ವಾಯವ್ಯ ದಿಕ್ಕಿನತ್ತ ಚಲಿಸುವ ಸಾಧ್ಯತೆಯಿರುವ ಚಂಡಮಾರುತ, ನವೆಂಬರ್ 20ರ ಮಧ್ಯಾಹ್ನದ ವೇಳೆಗೆ ನೆಲ್ಲೂರು ಮತ್ತು ತುನಿ ನಡುವಿನ ಆಂಧ್ರಪ್ರದೇಶ ಹಾಗೂ ಯಾನಂ ಕರಾವಳಿಯನ್ನು ದಾಟುವ ನಿರೀಕ್ಷೆಯಿದೆ. ಈ ವೇಳೆ ಗಾಳಿಯ ವೇಗ ಗಂಟೆಗೆ 120ರಿಂದ 130 ಕಿ.ಮೀ. ಇರಲಿದ್ದು, ಕೆಲವೊಮ್ಮೆ 145 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಒಡಿಶಾ ಹೈಅಲರ್ಟ್​

ಚಂಡಮಾರುತದ ಪರಿಣಾಮ ಎದುರಿಸಲು ಒಡಿಶಾ ಸರ್ಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಅಗತ್ಯ ಮೀರಿ ಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ದಕ್ಷಿಣ ಜಿಲ್ಲೆಗಳಲ್ಲಿನ ಅಪಾಯದ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಮುಂಚಿತವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯವನ್ನು ಈಗಾಗಲೇ ಚುರುಕುಗೊಳಿಸಲಾಗಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ 74 ತಂಡಗಳನ್ನು ನಿಯೋಜಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

Also Read
ತುಟಿ ದೊಡ್ಡದಾದಷ್ಟೂ ವರದಕ್ಷಿಣೆ ಹೆಚ್ಚು! ಈ ಬುಡಕಟ್ಟಿನ ಸಂಪ್ರದಾಯದ ಹಿಂದಿರುವ ವಿಚಿತ್ರ ಕಥೆ ಕೇಳಿದ್ರೆ ನಿಮ್ಮ ಹುಬ್ಬೇರುತ್ತೆ | Lip Plate Tradition
Cyclone Akvan

ಭುವನೇಶ್ವರ ಹವಾಮಾನ ಕೇಂದ್ರದ ನಿರ್ದೇಶಕಿ ಮನೋರಮಾ ಮೊಹಂತಿ ಮಾತನಾಡಿ, ಹಿಂದಿನ ಚಂಡಮಾರುತ ‘ಅರ್ನಬ್’ಗೆ ಹೋಲಿಸಿದರೆ ‘ಅಕ್ವಾನ್’ನಿಂದ ಒಡಿಶಾಕ್ಕೆ ಉಂಟಾಗುವ ಪರಿಣಾಮ ಕಡಿಮೆ ಇರಬಹುದು. ಈ ಬಾರಿ ಭಾರಿ ಮಳೆಯ ಕುರಿತು ಯಾವುದೇ ರೆಡ್ ಅಲರ್ಟ್ ನೀಡಿಲ್ಲ ಎಂದಿದ್ದಾರೆ. ಇನ್ನು, ವಿಪತ್ತು ನಿರ್ವಹಣಾ ಸಚಿವ ಸುರೇಶ್ ಪೂಜಾರಿ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಜನರ ಜೀವ ಮತ್ತು ಆಸ್ತಿಪಾಸ್ತಿಗಳ ರಕ್ಷಣೆಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ,(ಏಜೆನ್ಸೀಸ್).