ವಾಟ್ಸಾಪ್ ಜಾಗತಿಕ CEO ಆಗಿ ಕ್ರೆಡ್ ಸಂಸ್ಥಾಪಕ ಕುನಾಲ್ ಶಾ ನೇಮಕ! Kunal Shah

ವಾಟ್ಸಾಪ್ ಜಾಗತಿಕ CEO ಆಗಿ ಕ್ರೆಡ್ ಸಂಸ್ಥಾಪಕ ಕುನಾಲ್ ಶಾ ನೇಮಕ!
ವಾಟ್ಸಾಪ್ ಜಾಗತಿಕ CEO ಆಗಿ ಕ್ರೆಡ್ ಸಂಸ್ಥಾಪಕ ಕುನಾಲ್ ಶಾ ನೇಮಕ!
Published on
ನ್ಯೂಯಾರ್ಕ್: ಜಾಗತಿಕ ತಂತ್ರಜ್ಞಾನ (Tech) ವಲಯದಲ್ಲಿ ಭಾರತದ ಮತ್ತೊಬ್ಬ ಪ್ರಭಾವಿ ಉದ್ಯಮಿ ಇತಿಹಾಸ ಬರೆದಿದ್ದಾರೆ. ಪ್ರಖ್ಯಾತ ಫಿಂಟೆಕ್ ಸಂಸ್ಥೆಯಾದ ಕ್ರೆಡ್ (CRED) ಸಂಸ್ಥಾಪಕ, ಕನ್ನಡಿಗ ಕುನಾಲ್ ಶಾ(Kunal Shah) ಅವರು ವಿಶ್ವದ ಅತಿ ದೊಡ್ಡ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆದ ವಾಟ್ಸಾಪ್ ಸಂಸ್ಥೆಯ ಜಾಗತಿಕ ಸಿಇಒ ಆಗಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ವಾಟ್ಸಾಪ್‌ನ ಪ್ರಮುಖ ಮಾತೃ ಸಂಸ್ಥೆಯಾದ ಮೆಟಾ ಸೋಮವಾರ ಈ ಮಹತ್ವದ ಘೋಷಣೆ ಮಾಡಿದೆ.
ಕಳೆದ 2019 ರಿಂದ ವಾಟ್ಸಾಪ್ ಮುನ್ನಡೆಸುತ್ತಿದ್ದ ವಿಲ್ ಕ್ಯಾಥ್‌ಕಾರ್ಟ್ ಅವರ ಜಾಗಕ್ಕೆ ಕುನಾಲ್ ಶಾ ಬರಲಿದ್ದಾರೆ. ಗೂಗಲ್‌ನ ಸುಂದರ್ ಪಿಚೈ, ಮೈಕ್ರೋಸಾಫ್ಟ್‌ನ ಸತ್ಯ ನಾಡೆಲ್ಲಾ ಅವರ ಸಾಲಿಗೆ ಈಗ ಕುನಾಲ್ ಶಾ ಕೂಡ ಸೇರ್ಪಡೆಯಾಗುವ ಮೂಲಕ ಜಾಗತಿಕ ಟೆಕ್ ಜಗತ್ತಿನಲ್ಲಿ ಭಾರತದ ಪತಾಕೆಯನ್ನು ಮತ್ತಷ್ಟು ಎತ್ತರಕ್ಕೆ ಹಾರಿಸಿದ್ದಾರೆ.

ಕುನಾಲ್ ಶಾ ಆಯ್ಕೆಗೆ ಜುಕರ್‌ಬರ್ಗ್ ಮೆಚ್ಚುಗೆ

ವಾಟ್ಸಾಪ್ ಜಗತ್ತಿನಾದ್ಯಂತ 300 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿದ್ದು, ಕೇವಲ ಮೆಸೇಜಿಂಗ್ ಆ್ಯಪ್ ಆಗಿ ಉಳಿದಿಲ್ಲ. ಇದೀಗ ಡಿಜಿಟಲ್ ಪಾವತಿ, ಬಿಸಿನೆಸ್ ಮೆಸೇಜಿಂಗ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದೊಂದಿಗೆ ಹೊಸ ಯುಗಕ್ಕೆ ಕಾಲಿಡುತ್ತಿದೆ. ಇಂತಹ ಸಂದರ್ಭದಲ್ಲಿ ಕುನಾಲ್ ಶಾ ಅವರ ಉದ್ಯಮಶೀಲತೆಯ ಅನುಭವ ಸಂಸ್ಥೆಗೆ ಅಗತ್ಯವಿದೆ ಎಂದು ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ.
ಕುನಾಲ್ ಶಾ ಅವರು ಕ್ರೆಡ್ ಸಂಸ್ಥೆಯನ್ನು ಭಾರತದ ಅತ್ಯಂತ ಪ್ರಮುಖ ತಂತ್ರಜ್ಞಾನ ಕಂಪನಿಯನ್ನಾಗಿ ಬೆಳೆಸಿದ್ದಾರೆ. ಜಗತ್ತಿನ ಅತಿ ದೊಡ್ಡ ಮೆಸೇಜಿಂಗ್ ಆ್ಯಪ್ ಅನ್ನು ಮುನ್ನಡೆಸಲು ಬೇಕಾದ ಜಾಗತಿಕ ದೃಷ್ಟಿಕೋನ ಮತ್ತು ಹೊಸದನ್ನು ನಿರ್ಮಿಸುವ ಮನಸ್ಥಿತಿ ಅವರಲ್ಲಿದೆ. ಶತಕೋಟಿ ಜನರಿಗೆ ವಾಟ್ಸಾಪ್ ಅನ್ನು ಮತ್ತಷ್ಟು ಹತ್ತಿರವಾಗಿಸಲು ಕುನಾಲ್ ಜೊತೆ ಕೆಲಸ ಮಾಡಲು ನಾನು ಉತ್ಸುಕನಾಗಿದ್ದೇನೆ ಎಂದು ಮಾರ್ಕ್ ಜುಕರ್‌ಬರ್ಗ್ ಶ್ಲಾಘಿಸಿದ್ದಾರೆ.

ಸೊನ್ನೆಯಿಂದ 3,200 ಕೋಟಿ ರೂಪಾಯಿ ಸಾಮ್ರಾಜ್ಯ ಕಟ್ಟಿದ ಕಥೆ!

2018ರಲ್ಲಿ ಕೇವಲ 1 ಮಿಲಿಯನ್ ಡಾಲರ್ ಸ್ವಂತ ಬಂಡವಾಳದೊಂದಿಗೆ ಕುನಾಲ್ ಶಾ ಅವರು ‘ಕ್ರೆಡ್’ ಆ್ಯಪ್ ಅನ್ನು ಆರಂಭಿಸಿದ್ದರು. ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುವ ಗ್ರಾಹಕರಿಗೆ ರಿವಾರ್ಡ್ ನೀಡುವ ವಿಶಿಷ್ಟ ಯೋಚನೆಯೊಂದಿಗೆ ಶುರುವಾದ ಈ ಸಂಸ್ಥೆ, ಇಂದು 1.7 ಕೋಟಿಗೂ ಹೆಚ್ಚು ಪ್ರೀಮಿಯಂ ಸದಸ್ಯರನ್ನು ಹೊಂದಿದೆ.
ಇತ್ತೀಚೆಗಷ್ಟೇ ಕ್ರೆಡ್ ಸಂಸ್ಥೆಯು ತನ್ನ ವಾರ್ಷಿಕ ಆದಾಯವನ್ನು ಬರೋಬ್ಬರಿ 3,200 ಕೋಟಿ ರೂಪಾಯಿಗಳಿಗೆ (325 ಮಿಲಿಯನ್ ಡಾಲರ್) ಹೆಚ್ಚಿಸಿಕೊಂಡು, ಮೊದಲ ಬಾರಿಗೆ ಲಾಭದ ಹಳಿಗೆ ಮರಳಿತ್ತು. ಮೆಟಾ ಸೇರಿದಂತೆ ವಿಶ್ವದ ದೊಡ್ಡ ಹೂಡಿಕೆದಾರರಿಂದ ಕ್ರೆಡ್ 900 ಮಿಲಿಯನ್ ಡಾಲರ್‌ಗೂ ಅಧಿಕ ಹೂಡಿಕೆ ಪಡೆದಿದೆ.

ಕ್ರೆಡ್ ಸಂಸ್ಥೆಯಿಂದ ಹೊರನಡೆದ ಕುನಾಲ್; ಗ್ರಾಹಕರ ಡೇಟಾ ಸುರಕ್ಷಿತ

ವಾಟ್ಸಾಪ್ ಜಾಗತಿಕ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಕುನಾಲ್ ಶಾ ಅವರು ಕ್ರೆಡ್ ಸಂಸ್ಥೆಯ ದೈನಂದಿನ ಕಾರ್ಯಾಚರಣೆಯ ಜವಾಬ್ದಾರಿಯಿಂದ (CEO ಹುದ್ದೆಯಿಂದ) ಕೆಳಗಿಳಿಯಲಿದ್ದಾರೆ. ಸಂಸ್ಥೆಯ ತಂತ್ರಜ್ಞಾನ ಮತ್ತು ಹಣಕಾಸು ವಿಭಾಗದ ಮುಖ್ಯಸ್ಥರಾಗಿರುವ ಮಿತ್ ಜೈನ್ ಅವರು ಕ್ರೆಡ್‌ನ ಮಧ್ಯಂತರ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಇದೇ ವೇಳೆ ಗ್ರಾಹಕರ ಮಾಹಿತಿ ಸೋರಿಕೆಯಾಗುವ ಆತಂಕದ ಬಗ್ಗೆ ಸ್ಪಷ್ಟನೆ ನೀಡಿರುವ ಕುನಾಲ್ ಶಾ, ಮೆಟಾ ಸಂಸ್ಥೆಯು ಕ್ರೆಡ್‌ನಲ್ಲಿ ಕೇವಲ ಅಲ್ಪಸಂಖ್ಯಾತ ಹೂಡಿಕೆದಾರನಾಗಿದೆಯೇ ಹೊರತು, ಕ್ರೆಡ್‌ನ ಯಾವುದೇ ಗ್ರಾಹಕರ ವೈಯಕ್ತಿಕ ಡೇಟಾ ಅಥವಾ ಬ್ಯಾಂಕಿಂಗ್ ಮಾಹಿತಿಯನ್ನು ಮೆಟಾ ಪಡೆದುಕೊಳ್ಳಲು ಸಾಧ್ಯವಿಲ್ಲ. ಬಳಕೆದಾರರ ಡೇಟಾ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತವೇ ವಾಟ್ಸಾಪ್‌ನ ಅತಿ ದೊಡ್ಡ ಮಾರುಕಟ್ಟೆ

ವಾಟ್ಸಾಪ್‌ಗೆ ಇಡೀ ವಿಶ್ವದಲ್ಲೇ ಭಾರತವೇ ಅತ್ಯಂತ ದೊಡ್ಡ ಮಾರುಕಟ್ಟೆಯಾಗಿದೆ. ಅದರಲ್ಲೂ ಭಾರತದಲ್ಲಿ ವ್ಯಾಪಾರ ಮತ್ತು ಡಿಜಿಟಲ್ ಪಾವತಿಗಳು ವೇಗವಾಗಿ ಬೆಳೆಯುತ್ತಿವೆ. ಭಾರತದ ಗ್ರಾಹಕರ ನಾಡಿಮಿಡಿತ ಮತ್ತು ಡಿಜಿಟಲ್ ಮಾರುಕಟ್ಟೆಯ ಬಗ್ಗೆ ಆಳವಾದ ಜ್ಞಾನ ಹೊಂದಿರುವ ಕುನಾಲ್ ಶಾ ಅವರ ನೇಮಕವು ವಾಟ್ಸಾಪ್‌ನ ಮುಂದಿನ ಆರ್ಥಿಕ ಬೆಳವಣಿಗೆಗೆ ಭಾರಿ ನೆರವಾಗಲಿದೆ ಎಂದು ಮೆಟಾ ಸಂಸ್ಥೆಯ ಮುಖ್ಯ ಉತ್ಪನ್ನ ಅಧಿಕಾರಿ ಕ್ರಿಸ್ ಕಾಕ್ಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಾಟ್ಸಾಪ್‌ನ ಇಂದಿನ ಸ್ಥಿತಿಗೂ ಮತ್ತು ಅದರ ನಿಜವಾದ ಸಂಪೂರ್ಣ ಸಾಮರ್ಥ್ಯಕ್ಕೂ ನಡುವೆ ಭಾರಿ ದೊಡ್ಡ ಅಂತರವಿದೆ. ಅದನ್ನು ಯಶಸ್ವಿಯಾಗಿ ಮುನ್ನಡೆಸಲು ನಾನು ಸಿದ್ಧನಾಗಿದ್ದೇನೆ ಎಂದು ಕುನಾಲ್ ಶಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net