ಕೌಂಟ್​ಡೌನ್ ಶುರು: ನಾಳೆ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ; ಯಾರಿಗೆ ಸಿಗಲಿದೆ ಜನಾದೇಶ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ | election results

ಸಿಎಂ ಮಮತಾ ಬ್ಯಾನರ್ಜಿ, ಎಂ.ಕೆ.ಸ್ಟಾಲಿನ್, ಪಿಣರಾಯಿ ವಿಜಯನ್ ಹಾಗೂ ಹಿಮಂತ ಬಿಸ್ವಾ ಶರ್ಮಾ
ಸಿಎಂ ಮಮತಾ ಬ್ಯಾನರ್ಜಿ, ಎಂ.ಕೆ.ಸ್ಟಾಲಿನ್, ಪಿಣರಾಯಿ ವಿಜಯನ್ ಹಾಗೂ ಹಿಮಂತ ಬಿಸ್ವಾ ಶರ್ಮಾ
Published on
ನವದೆಹಲಿ: ಇತ್ತೀಚೆಗೆ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯ(election results) ಮತ ಎಣಿಕೆ ನಾಳೆ ನಡೆಯಲಿದೆ. ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದ್ದು, ನಾಳೆ(ಮೇ 04) ಬೆಳಗ್ಗೆ 8 ಗಂಟೆಯಿಂದ ಮತಎಣಿಕೆ ಆರಂಭವಾಗಲಿದೆ.
ಮತಎಣಿಕೆಗಾಗಿ ಭಾರತೀಯ ಚುನಾವಣಾ ಆಯೋಗ ಚುನಾವಣಾ ರಾಜ್ಯಗಳಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ಹಿಂದಿನಂತೆ ಹಿಂಸಾಚಾರ ಭುಗಿಲೇಳುವ ಸಾಧ್ಯತೆ ಇರುವುದರಿಂದ ಬಲವಾದ ಭದ್ರತಾ ವ್ಯವಸ್ಥೆಗಳನ್ನು ಮಾಡಿದ್ದು, ಎಲ್ಲಾ 11 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಿದೆ.
ಇನ್ನೂ ಯಾವ ರಾಜ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬುದರ ಕುರಿತು ನಾಳೆ ಮಧ್ಯಾಹ್ನ 12 ಗಂಟೆ ವೇಳೆಗೆ ಸ್ಪಷ್ಟತೆ ಬರುವ ಸಾಧ್ಯತೆಯಿದೆ. ಮುಖ್ಯವಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಹಾಗೂ ಕೇರಳ ಸಿಎಂ ಪಿಣರಾಯಿ ವಿಜಯನ್​ ಅವರ ಸಿಎಂ ಸ್ಥಾನವನ್ನು ನಿರ್ಧರಿಸುವ ಫಲಿತಾಂಶವಾಗಿದೆ. ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನ ಫಲಿತಾಂಶಗಳು ವಿಶೇಷವಾಗಿ ರಾಷ್ಟ್ರ ರಾಜಕೀಯದ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇದೆ.

ಪಶ್ಚಿಮ ಬಂಗಾಳ

2026ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಏ. 23 ಮತ್ತು ಏ. 29ರಂದು ಎರಡು ಹಂತಗಳಲ್ಲಿ ನಡೆದಿದ್ದು, ಒಟ್ಟು 294 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಮ್ಯಾಜಿಕ್ ನಂಬರ್ 148. ಈ ಚುನಾವಣೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತರೂಢ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದು, ತೀವ್ರ ಹೋರಾಟ ನಡೆದಿದೆ. ಇನ್ನೂ ಕಾಂಗ್ರೆಸ್ ಮತ್ತು ಎಡಪಕ್ಷಗಳು ಆಟಕ್ಕುಂಟು ಲೆಕ್ಕಕ್ಕೆ ಇಲ್ಲ.
ಆಡಳಿತ ವಿರೋಧಿ ಅಲೆ ಮತ್ತು ರಾಷ್ಟ್ರೀಯ ಪಕ್ಷದ ಪ್ರಭಾವದ ನಡುವೆ ಬಂಗಾಳದ ಮತದಾರರು ಯಾರ ಕೈ ಹಿಡಿಯಲಿದ್ದಾರೆ ಎಂಬ ಕುತೂಹಲವಿದೆ. ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಹಳಷ್ಟು ಸಂಸ್ಥೆಗಳು ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗೆದ್ದು, ರಾಜ್ಯದಲ್ಲಿ ಮೊದಲ ಬಾರಿ ಅಧಿಕಾರ ನಡೆಸಲಿದೆ ಎಂದು ಹೇಳಿವೆ. ಇನ್ನೂ ಕೆಲವು ಟಿಎಂಸಿಗೆ 200ರ ಗಡಿ ದಾಟುವ ಮುನ್ಸೂಚನೆ ನೀಡಿವೆ.

ತಮಿಳುನಾಡು

2026ರ ತಮಿಳುನಾಡು ವಿಧಾನಸಭೆ ಚುನಾವಣೆಗೆ ಏ. 23ರಂದು ಒಂದೇ ಹಂತದಲ್ಲಿ ಮತದಾನ ನಡೆದಿದ್ದು, ಒಟ್ಟು 234 ಕ್ಷೇತ್ರಗಳಿಗೆ ಮತದಾನ ನಡೆದಿದೆ. ಮ್ಯಾಜಿಕ್ ನಂಬರ್ 118. ಈ ಚುನಾವಣೆಯಲ್ಲಿ ಸಿಎಂ ಎಂ.ಕೆ.ಸ್ಟಾಲಿನ್ ನೇತೃತ್ವದ ಆಡಳಿತರೂಢ ಡಿಎಂಕೆ, ಕಾಂಗ್ರೆಸ್, ವಿಸಿಕೆ, ಡಿಎಂಡಿಕೆ ಹಾಗೂ ಎಡಪಕ್ಷಗಳ ಒಕ್ಕೂಟ ಮತ್ತು ಎಐಐಡಿಎಂಕೆ ನೇತೃತ್ವದ ಬಿಜೆಪಿ, ಪಿಎಂಕೆ ಒಳಗೊಂಡ ಎನ್​ಡಿಎ ಕೂಟದ ನಡುವೆ ನೇರ ಸ್ಪರ್ಧೆ ನಡೆದಿದೆ.
ಪ್ರಾದೇಶಿಕ ದ್ರಾವಿಡ ಪಕ್ಷವಾದ ಡಿಎಂಕೆ, ರಾಜ್ಯಪಾಲರು ಮತ್ತು ಕೇಂದ್ರ ಸರ್ಕಾರದೊಂದಿಗೆ ನಿರಂತರ ತಿಕ್ಕಾಟ ನಡೆಸಿದ್ದು, ಸ್ವಲ್ಪಮಟ್ಟದ ಆಡಳಿತ ವಿರೋಧಿ ಅಲೆ ನಡುವೆಯೂ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಹಲವು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಇನ್ನೂ ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಸೂಪರ್ ಸ್ಟಾರ್ ದಳಪತಿ ವಿಜಯ್ ನೇತೃತ್ವದ ಟಿವಿಕೆ ಸ್ಪರ್ಧೆಯಿಂದ ತ್ರೀಕೋನ ಸ್ಪರ್ಧೆ ಏರ್ಪಟ್ಟಿದೆ. ಒಂದು ಅಥವಾ ಎರಡು ಸಮೀಕ್ಷಾ ಸಂಸ್ಥೆಗಳು ವಿಜಯ್ ನೇತೃತ್ವದ ಟಿವಿಕೆ ಅಧಿಕಾರ ಹಿಡಿಯುತ್ತದೆ ಎಂದು ಭವಿಷ್ಯ ನುಡಿದಿವೆ.

ಕೇರಳ

2026ರ ಕೇರಳ ವಿಧಾನಸಭೆ ಚುನಾವಣೆಗೆ ಏ. 09ರಂದು ಒಂದೇ ಹಂತದಲ್ಲಿ ಮತದಾನ ನಡೆದಿದೆ. ಒಟ್ಟು 140 ಕ್ಷೇತ್ರಗಳಿಗೆ ಮತದಾನ ನಡೆದಿದೆ. ಮ್ಯಾಜಿಕ್ ನಂಬರ್ 71. ಸಿಎಂ ಪಿಣರಾಯಿ ವಿಜಯನ್ ಅವರ ಆಡಳಿತರೂಢ ಸಿಪಿಎಂ ನೇತೃತ್ವದ ಯುಡಿಎಫ್​ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್​ ನಡುವೆ ನೇರ ಸ್ಪರ್ಧೆ ನಡೆದಿದೆ. ಕಳೆದ 10 ವರ್ಷಗಳ ಆಡಳಿತ ವಿರೋಧಿ ಅಲೆಯಿಂದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೆ ಬರಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ತಿಳಿಸಿವೆ.

ಅಸ್ಸಾಂ

2026ರ ಅಸ್ಸಾಂ ವಿಧಾನಸಭೆ ಚುನಾವಣೆಗೆ ಏ. 09ರಂದು ಒಂದೇ ಹಂತದಲ್ಲಿ ಮತದಾನ ನಡೆದಿದ್ದು, ಒಟ್ಟು 126 ಕ್ಷೇತ್ರಗಳಿಗೆ ಮತದಾನ ನಡೆದಿದೆ. ಮ್ಯಾಜಿಕ್ ನಂಬಋರ್ 64. ಸಿಎಂ ಹಿಮಂತ ಬಿಸ್ವಾ ಶರ್ಮಾ ನೇತೃತ್ವದಲ್ಲಿ ಆಡಳಿತರೂಢ ಬಿಜೆಪಿ ನೇತೃತ್ವದ ಮೈತ್ರಿಕೂಟ ಮತ್ತು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದ ನಡುವೆ ನೇರ ಸ್ಪೆರ್ಧೆ ನಡೆದಿದೆ.
ಕಳೆದ 10 ವರ್ಷಗಳ ಆಡಳಿತದ ಹೊರತಾಗಿಯೂ ಸಿಎಂ ಹಿಮಂತ ಬಿಸ್ವಾ ಶರ್ಮಾ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲಿದೆ ಎಂದು ಹಲವು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಆದರೆ ಕಾಂಗ್ರೆಸ್ 10 ವರ್ಷಗಳ ಬಳಿಕ ಮರಳಿ ಅಧಿಕಾರಕ್ಕೇರುವ ವಿಶ್ವಾಸದಲ್ಲಿದ್ದು, ಮತಗಟ್ಟೆ ಸಮೀಕ್ಷೆಯನ್ನು ತಿರಸ್ಕರಿಸಿದೆ.

ಪಾಂಡಿಚೇರಿ

ಕೇಂದ್ರಾಡಳಿತ ಪ್ರದೇಶ ಪಾಂಡಿಚೇರಿ ವಿಧಾನಸಭೆ ಚುನಾವಣೆಯೂ ಏ. 09ರಂದು ಒಂದೇ ಹಂತದಲ್ಲಿ ನಡೆದಿದ್ದು, ಒಟ್ಟು 30 ಕ್ಷೇತ್ರಗಳಿಗೆ ಮತದಾನ ನಡೆದಿದೆ. ಮ್ಯಾಜಿಕ್ ನಂಬರ್ 16. ಸಿಎಂ ರಂಗಸ್ವಾಮಿ ನೇತೃತ್ವದ ಎನ್​ಆರ್ ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿಕೂಟ ಮತ್ತು ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದ ನಡುವೆ ಸ್ಪರ್ಧೆ ನಡೆದಿದೆ. ಹಲವು ಮತಗಟ್ಟೆ ಸಮೀಕ್ಷೆ ಪ್ರಕಾರ ಮರಳಿ ಎನ್​ಆರ್ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿವೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net