ಮಹಾರಾಷ್ಟ್ರದ ನಾಸಿಕ್ನ ಒಂದು ಪ್ರತಿಷ್ಠಿತ ಐಟಿ/ಬಿಪಿಒ ಕಂಪನಿ. ಈ ಕ್ಷೇತ್ರದ ಕಂಪನಿಗಳು ವೃತ್ತಿಪರತೆಯನ್ನು ಕಾಪಾಡಿಕೊಂಡು ಬರುವುದರಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಆದರೆ, ಈ ಕಂಪನಿಯು ವೃತ್ತಿಪರತೆಯ ಹೆಸರಿನಲ್ಲಿ ಹಿಂದೂ ಧಾರ್ವಿುಕ ನಂಬಿಕೆ ಮತ್ತು ಪರಂಪರೆಯನ್ನು ಧಿಕ್ಕರಿಸಿ, ಅನ್ಯ ಧರ್ಮದ ನಂಬಿಕೆ, ಆಚರಣೆಗಳಿಗೆ ಪ್ರೋತ್ಸಾಹ ನೀಡಿರುವುದು ಈಗ ವಿವಾದದ ಬಿರುಗಾಳಿಯನ್ನೇ ಸೃಷ್ಟಿಸಿದೆ. ಈ ಕಂಪನಿಯಲ್ಲಿ ಕಾರ್ಯ ನಿರ್ವಹಿಸುವ 9ಕ್ಕೂ ಹೆಚ್ಚು ಉದ್ಯೋಗಿಗಳು (ಹೆಚ್ಚಾಗಿ ಮಹಿಳೆಯರು) ಹಿರಿಯ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿ ದೂರು ದಾಖಲಿಸಿದ್ದಾರೆ. 2026ರ ಮಾರ್ಚ್ ಮತ್ತು ಏಪ್ರಿಲ್ನಲ್ಲಿ ಈ ಪ್ರಕರಣಗಳು ಸರಣಿ ಎಫ್ಐಆರ್ಗಳಾಗಿ ಮಾರ್ಪಟ್ಟಿವೆ. ಈ ಪ್ರಕರಣದಲ್ಲಿ ಅತ್ಯಂತ ಆಘಾತಕಾರಿ ವಿಷಯವೆಂದರೆ ಕಂಪನಿಯ ಮಾನವ ಸಂಪನ್ಮೂಲ (ಎಚ್ಆರ್) ವಿಭಾಗದ ನಡವಳಿಕೆ. ಉದ್ಯೋಗಿಗಳು ಲೈಂಗಿಕ ಕಿರುಕುಳ ಅಥವಾ ಧಾರ್ವಿುಕ ಒತ್ತಡದ ಬಗ್ಗೆ ದೂರು ನೀಡಲು ನೀಡಿದಾಗ, ಎಚ್ಆರ್ ಅಧಿಕಾರಿಗಳು ನ್ಯಾಯ ಒದಗಿಸುವ ಬದಲು ಸಂತ್ರಸ್ತರನ್ನೇ ದಬಾಯಿಸಿದ್ದಾರೆ. ‘ದೂರು ನೀಡಿದರೆ ಕೆಲಸದಿಂದ ತೆಗೆದುಹಾಕುತ್ತೇವೆ ಅಥವಾ ನಿಮ್ಮ ಕೆರಿಯರ್ ಹಾಳು ಮಾಡುತ್ತೇವೆ’ ಎಂದು ಬೆದರಿಕೆ ಹಾಕಿದ್ದಾರೆ. ಪೊಲೀಸ್ ತನಿಖೆಯ ನಂತರ ಕಂಪನಿಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ (ಎಜಿಎಂ) ಸೇರಿ ಏಳು ಉನ್ನತ ಅಧಿಕಾರಿಗಳನ್ನು ಬಂಧಿಸಲಾಗಿದ್ದು, ಈ ಜಾಲದ ಆಳವನ್ನು ದರ್ಶಿಸುತ್ತದೆ. ಉದ್ಯೋಗಿಗಳು ನೀಡಿದ ದೂರಿನ ನಂತರ ದಾಖಲಾದ 9 ಎಫ್ಐಆರ್ಗಳ ಪ್ರಕಾರ, ಇದು ಕೇವಲ ವೈಯಕ್ತಿಕ ಘರ್ಷಣೆಯಲ್ಲ, ಬದಲಿಗೆ ವ್ಯವಸ್ಥಿತವಾದ ಸಾಂಸ್ಥಿಕ ಸಂಚು ಎಂಬುದು ತಿಳಿದುಬಂದಿದ್ದು, ಒಂದು ಜಾಲದಂತೆ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಸಂಶಯ ಸೃಷ್ಟಿಯಾಗಿದೆ.