ಹಿಂದೂ ಧರ್ಮ, ಅರ್ಚಕರ ವಿರುದ್ಧ ವಿವಾದಾತ್ಮಕ ಹೇಳಿಕೆ: AISA ಅಧ್ಯಕ್ಷೆ ನೇಹಾ ಬೋರಾ ವಿರುದ್ಧ ದೂರು; ರಾಹುಲ್​ ವಿರುದ್ಧ ಕಿಡಿಕಾರಿದ ಬಿಜೆಪಿ! Neha Bora

AISA member Neha Bora makes controversial statement regarding priests
ಅರ್ಚಕರ ಕುರಿತು AISA ಸದಸ್ಯೆ ನೇಹಾ ಬೋರಾ ವಿವಾದಾತ್ಮಕ ಹೇಳಿಕೆ
Published on: 

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ವಿದ್ಯಾರ್ಥಿ ಸಂಘಟನೆಯ ನಾಯಕಿಯೊಬ್ಬರು ನೀಡಿರುವ ಹೇಳಿಕೆ ಈಗ ದೇಶದಾದ್ಯಂತ ಭಾರೀ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ. ಹಿಂದೂ ದೇವಾಲಯಗಳು ಹಾಗೂ ಅರ್ಚಕರ ಕುರಿತು ಅವಹೇಳನಕಾರಿ ಮಾತುಗಳನ್ನಾಡಿದ ಆರೋಪದ ಮೇಲೆ 'ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್' (AISA) ಸದಸ್ಯೆ ನೇಹಾ ಬೋರಾ ವಿರುದ್ಧ ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ, ಇತ್ತ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವಾಕ್ಸಮರಕ್ಕೂ ಕಾರಣವಾಗಿದೆ.

ವಿವಾದಕ್ಕೆ ಕಾರಣವಾದ ಆ ಒಂದು ಹೇಳಿಕೆ!

ನೇಹಾ ಬೋರಾ ಸಾರ್ವಜನಿಕವಾಗಿ ಮಾತನಾಡುವ ವೇಳೆ, ದೇವಾಲಯಗಳಲ್ಲಿ ಅರ್ಚಕರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ ಎನ್ನಲಾಗಿದೆ. ಈ ಹೇಳಿಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದೇ ನಿರ್ದಿಷ್ಟ ಘಟನೆ ಅಥವಾ ಆಧಾರವಿಲ್ಲದೆ, ಇಡೀ ಅರ್ಚಕ ವರ್ಗ ಮತ್ತು ಹಿಂದೂ ಧಾರ್ಮಿಕ ಕೇಂದ್ರಗಳನ್ನೇ ಗುರಿಯಾಗಿಸಿ ಈ ರೀತಿ ಮಾತನಾಡಿರುವುದು ಹಿಂದೂ ಸಮಾಜದ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ಕೂಗು ಬಲವಾಗಿ ಕೇಳಿಬಂದಿದೆ.

"ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಿತಿಯಿದೆ"

ಈ ಆಕ್ಷೇಪಾರ್ಹ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಹೈಕೋರ್ಟ್‌ನ ವಕೀಲೆ ಅಮಿತಾ ಸಚ್ದೇವ್, ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿದ್ದಾರೆ. ನೇಹಾ ಬೋರಾ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.

ಈ ದೂರಿನಲ್ಲಿ, ಯಾವುದೇ ಆಧಾರವಿಲ್ಲದೆ ಮಾಡಲಾದ ಇಂತಹ ಬಾಲಿಶ ಹೇಳಿಕೆಗಳು ಒಂದು ನಿರ್ದಿಷ್ಟ ಧಾರ್ಮಿಕ ಸಮುದಾಯದ ಘನತೆಗೆ ಧಕ್ಕೆ ತರುತ್ತವೆ. ಇಂತಹ ಮಾತುಗಳು ಸಮಾಜದಲ್ಲಿ ಸೌಹಾರ್ದತೆಯನ್ನು ಹಾಳುಗೆಡವಿ, ವಿವಿಧ ಸಮುದಾಯಗಳ ನಡುವೆ ದ್ವೇಷ ಹಾಗೂ ಉದ್ವಿಗ್ನತೆ ಸೃಷ್ಟಿಸುವ ಅಪಾಯವಿದೆ.

Also Read
ಹಿಂದೂ-ಯಹೂದಿ ಒಂದಾದರೆ ಮುಸ್ಲಿಂ ದೇಶಗಳಿಗೆ ಗಂಡಾಂತರ: ಟೆಹ್ರಾನ್ ಸಭೆಯಲ್ಲಿ ಆಸಿಮ್ ಮುನೀರ್ ಆತಂಕ! Asim Munir
AISA member Neha Bora makes controversial statement regarding priests

"ಭಾರತೀಯ ಸಂವಿಧಾನ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ ನಿಜ. ಆದರೆ ಆ ಸ್ವಾತಂತ್ರ್ಯ ಅನಿಯಮಿತವಲ್ಲ. ಇನ್ನೊಬ್ಬರ ಧಾರ್ಮಿಕ ನಂಬಿಕೆ, ಗೌರವವನ್ನು ಹಾಳುಮಾಡಲು ಕಾನೂನಿನಲ್ಲಿ ಜಾಗವಿಲ್ಲ. ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಮಾತನಾಡಬೇಕು" ಎಂದು ವಕೀಲೆ ಗುಡುಗಿದ್ದಾರೆ. ಸದ್ಯ ಪೊಲೀಸರು ಈ ದೂರಿನ ಕುರಿತು ಪರಿಶೀಲನೆ ನಡೆಸುತ್ತಿದ್ದು, ತನಿಖೆಯ ನಂತರ ಎಫ್‌ಐಆರ್ ದಾಖಲಾಗುವ ಸಾಧ್ಯತೆಯಿದೆ.

ರಾಹುಲ್ ಗಾಂಧಿ, ಕಾಂಗ್ರೆಸ್ ವಿರುದ್ಧ ಬಿಜೆಪಿ ಅಟ್ಯಾಕ್!

ನೇಹಾ ಬೋರಾ ಹೇಳಿಕೆಯನ್ನು ಮುಂದಿಟ್ಟುಕೊಂಡು ಭಾರತೀಯ ಜನತಾ ಪಕ್ಷ (ಬಿಜೆಪಿ), ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರುದ್ಧ ನೇರ ದಾಳಿ ನಡೆಸಿದೆ. ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ನೇಹಾ ಬೋರಾ ಅವರ ವಿಡಿಯೋ ತುಣುಕು ಮತ್ತು ಈ ಹಿಂದೆ ರಾಹುಲ್ ಗಾಂಧಿ ಆಡಿದ್ದ ಕೆಲವು ಮಾತುಗಳನ್ನು ಒಟ್ಟಿಗೆ ಜೋಡಿಸಿ ಟೀಕಿಸಿದೆ.

"ಕಾಂಗ್ರೆಸ್‌ನ ಹೊಸ 'ಪೋಸ್ಟರ್ ಗರ್ಲ್' ಆಗಿರುವ ನೇಹಾ ಬೋರಾ, ರಾಹುಲ್ ಗಾಂಧಿ ಈ ಹಿಂದೆ ಹೇಳಿದ್ದನ್ನೇ ಬೇರೆ ಪದಗಳಲ್ಲಿ ಪುನರಾವರ್ತಿಸುತ್ತಿದ್ದಾರೆ. ಇವರ ಸನಾತನ ವಿರೋಧಿ ಮತ್ತು ಅರಾಜಕತಾವಾದಿ ಚಿಂತನೆ ಇಡೀ ದೇಶಕ್ಕೆ ಅಪಾಯಕಾರಿ" ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಸನಾತನ ಧರ್ಮ ಮತ್ತು ಹಿಂದೂ ಧಾರ್ಮಿಕ ನಂಬಿಕೆಗಳನ್ನು ವ್ಯವಸ್ಥಿತವಾಗಿ ಕಡೆಗಣಿಸುವುದು ಮತ್ತು ಅಪಮಾನ ಮಾಡುವುದು ಕಾಂಗ್ರೆಸ್ ಹಾಗೂ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ಅಜೆಂಡಾ ಎಂದು ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ, (ಏಜೆನ್ಸೀಸ್​).