ಸಂವಿಧಾನ ಬಡವರ ರಕ್ಷಣಾ ಗುರಾಣಿ; ಅದನ್ನು ರಕ್ಷಿಸುವುದು ನನ್ನ ಕರ್ತವ್ಯ; ರಾಹುಲ್ ಗಾಂಧಿ | Rahul Gandhi

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
Published on

ನವದೆಹಲಿ: ಭಾರತೀಯ ಸಂವಿಧಾನ ಬಡವರ ರಕ್ಷಣಾ ಗುರಾಣಿ, ಅದನ್ನು ರಕ್ಷಿಸುವುದು ನನ್ನ ಕರ್ತವ್ಯ. ಅದರ ಮೇಲಿನ ಯಾವುದೇ ದಾಳಿಯನ್ನು ವಿರೋಧಿಸುವುದಾಗಿ ಇಂದು(ನ. 26) ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಹೇಳಿದ್ದಾರೆ.

ಸಂವಿಧಾನ ದಿನದ ಅಂಗವಾಗಿ ಇಂದು ಎಕ್ಸ್​ನಲ್ಲಿ ಶುಭಕೋರಿರುವ ಅವರು, ಭಾರತದ ಸಂವಿಧಾನವು ಕೇವಲ ಒಂದು ಪುಸ್ತಕವಲ್ಲ, ಅದು ದೇಶದ ಪ್ರತಿಯೊಬ್ಬ ನಾಗರಿಕನಿಗೂ ನೀಡಿದ ಪವಿತ್ರ ವಾಗ್ದಾನವಾಗಿದೆ. ಯಾವುದೇ ಧರ್ಮ ಅಥವಾ ಜಾತಿಗೆ ಸೇರಿದವರಾಗಿರಲಿ, ಯಾವುದೇ ಪ್ರದೇಶದಿಂದ ಬಂದವರಾಗಿರಲಿ, ಯಾವುದೇ ಭಾಷೆಯನ್ನು ಮಾತನಾಡಿದರೂ, ಬಡವರಾಗಿರಲಿ ಅಥವಾ ಶ್ರೀಮಂತರಾಗಿರಲಿ, ಎಲ್ಲರಿಗೂ ಸಮಾನತೆ, ಗೌರವ ಮತ್ತು ನ್ಯಾಯ ದೊರೆಯುತ್ತದೆ ಎಂದು ಖಾತ್ರಿಪಡಿಸುವ ಪವಿತ್ರ ಭರವಸೆ ಎಂದು ಎಂದು ಹೇಳಿದ್ದಾರೆ.

ಸಂವಿಧಾನವು ಬಡವರು ಮತ್ತು ವಂಚಿತರಿಗೆ ರಕ್ಷಣಾತ್ಮಕ ಗುರಾಣಿಯಾಗಿದೆ, ಅದು ಅವರ ಶಕ್ತಿ ಮತ್ತು ಅದು ಪ್ರತಿಯೊಬ್ಬ ನಾಗರಿಕನ ಧ್ವನಿಯಾಗಿದೆ. ಅದು ಸುರಕ್ಷಿತವಾಗಿರುವವರೆಗೆ, ಪ್ರತಿಯೊಬ್ಬ ಭಾರತೀಯನ ಹಕ್ಕುಗಳು ಸುರಕ್ಷಿತವಾಗಿರುತ್ತವೆ. ಸಂವಿಧಾನದ ಮೇಲೆ ಯಾವುದೇ ರೀತಿಯ ದಾಳಿಗೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡೋಣ. ಅದನ್ನು ರಕ್ಷಿಸುವುದು ನನ್ನ ಕರ್ತವ್ಯ, ಅದರ ಮೇಲಿನ ಪ್ರತಿಯೊಂದು ದಾಳಿಯ ಮುಂದೆ ನಾನು ಮೊದಲು ನಿಲ್ಲುತ್ತೇನೆ. ಸಂವಿಧಾನ ದಿನದಂದು ನಿಮ್ಮೆಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳು. ಜೈ ಹಿಂದ್, ಜೈ ಸಂವಿಧಾನ ಎಂದು ಬರೆದಿದ್ದಾರೆ.

1949ರಲ್ಲಿ ಸಂವಿಧಾನ ಸಭೆಯು ಸಂವಿಧಾನವನ್ನು ಅಂಗೀಕರಿಸಿದ ದಿನವನ್ನು ಗುರುತಿಸಲು 2015ರಿಂದ ನ.ರ 26ರಂದು ಸಂವಿಧಾನ ದಿನ ಅಥವಾ ಸಂವಿಧಾನ್ ದಿವಸ್ ಅನ್ನು ಆಚರಿಸಲಾಗುತ್ತದೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net