ಕ್ಷೇತ್ರ ಪುನರ್ವಿಂಗಡನೆ ಪ್ರಕ್ರಿಯೆ; ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾದ್ರೆ ತಮಿಳುನಾಡು ಸುಮ್ಮನಿರಲ್ಲ; 60ರ ದಶಕದ DMK ನೆನಪಿಸಿ ಕೇಂದ್ರಕ್ಕೆ ಸಿಎಂ ಸ್ಟಾಲಿನ್​ ವಾರ್ನಿಂಗ್

ಸಿಎಂ ಎಂ.ಕೆ.ಸ್ಟಾಲಿನ್
ಸಿಎಂ ಎಂ.ಕೆ.ಸ್ಟಾಲಿನ್
Published on
ಚೆನ್ನೈ: ವಿಶೇಷ ಸಂಸತ್ ಅಧಿವೇಶನಕ್ಕೂ ಮುನ್ನ ಕ್ಷೇತ್ರ ಪುನರ್ವಿಂಗಡೆ ಪ್ರಕ್ರಿಯೆ ಕುರಿತು ಕೇಂದ್ರ ಸರ್ಕಾರಕ್ಕೆ ನೇರವಾಗಿ ಎಚ್ಚರಿಕೆ ನೀಡಿರುವ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್, ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾದ್ರೆ ತಮಿಳುನಾಡು ಸುಮ್ಮನಿರಲ್ಲ. ಭಾರತ ಮತ್ತೊಮ್ಮೆ 56-60ರ ದಶಕದ ಡಿಎಂಕೆಯ(DMK) ಉತ್ಸಾಹವನ್ನು ನೋಡಬೇಕಾಗುತ್ತದೆ ಎಂದು ಗುಡುಗಿದ್ದಾರೆ.
2023ರ ನಾರಿ ಶಕ್ತಿ ವಂದನ ಅಧಿನಿಯಮಕ್ಕೆ ತಿದ್ದುಪಡಿಗಳನ್ನು ಚರ್ಚಿಸಲು ಮತ್ತು ಸಂಸತ್ತಿನಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿಯನ್ನು ಜಾರಿಗೆ ತರಲು ಪ್ರಸ್ತಾವಿತ ಡಿಲಿಮಿಟೇಶನ್ ಮಸೂದೆಯನ್ನು ಚರ್ಚಿಸಲು ಏ. 16ರಿಂದ ಆರಂಭವಾಗುವ ಮೂರು ದಿನಗಳ ವಿಶೇಷ ಅಧಿವೇಶನಕ್ಕೂ ಮುನ್ನ ಈ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ವಿಡಿಯೋ ಮೂಕಾಂತರ ಮಾತನಾಡಿರುವ ಅವರು, ಕೇಂದ್ರ ಸರ್ಕಾರ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ಕುರಿತು ಸಾಂವಿಧಾನಿಕ ತಿದ್ದುಪಡಿ ತರಲು ಹೊರಟಿದೆ. ಕ್ಷೇತ್ರ ಪುನರ್ವಿಂಗಡಣೆಯಿಂದ ತಮಿಳುನಾಡು ಹಿತಾಸಕ್ತಿಗಳಿಗೆ ಹಾನಿಯಾದರೆ ಅಥವಾ ಗಡಿನಿರ್ಣಯದಿಂದ ದಕ್ಷಿಣ ರಾಜ್ಯಗಳು ಅಸಮಾನವಾಗಿ ಪರಿಣಾಮ ಬೀರಿದರೆ ತಮಿಳುನಾಡು ಸುಮ್ಮನಿರುವುದಿಲ್ಲ ಎಂದು ಹೇಳಿದ್ದಾರೆ.
ಭಾರತ ಮತ್ತೊಮ್ಮೆ 1950 ಮತ್ತು 1960ರ ದಶಕದ ಡಿಎಂಕೆ ಉತ್ಸಾಹವನ್ನು ನೋಡಲಿದೆ. ಇದನ್ನೂ ಬೆದರಿಕೆ ಎಂದು ಅರ್ಥೈಸಿಕೊಳ್ಳಬೇಡಿ. ಒಂದು ವೇಳೆ ಬೆದರಿಕೆ ಅಂದುಕೊಂಡರು ಅದು ನಮಗೆ ಸಂಬಂಧಿಸಿದ್ದಲ್ಲ. ಇದು ತಮಿಳುನಾಡಿನಿಂದ ಕೊಡುತ್ತಿರುವ ಕಡೆಯ ಮತ್ತು ಅಂತಿಮ ಎಚ್ಚರಿಕೆ ಎಂದು ಖಡಕ್​ ಆಗಿ ಹೇಳಿದ್ದಾರೆ.
ಆರಂಭದಿಂದಲೂ ನಾವು ಡಿಲಿಮಿಟೇಷನ್ ವಿರುದ್ಧ ಎಚ್ಚರಿಕೆ ನೀಡಿದ್ದೇವೆ. ನಾವು ಜನರಲ್ಲಿ ಜಾಗೃತಿ ಮೂಡಿಸಿದ್ದೇವೆ. ತಮಿಳುನಾಡಿನಲ್ಲಿ ಮಾತ್ರವಲ್ಲದೆ ಭಾರತದಾದ್ಯಂತ, ನಾವು ಪರಿಣಾಮ ಬೀರುವ ರಾಜ್ಯಗಳ ಮುಖ್ಯಮಂತ್ರಿಗಳನ್ನು ಮತ್ತು ಪ್ರಮುಖ ರಾಜಕೀಯ ಪಕ್ಷಗಳ ನಾಯಕರನ್ನು ಒಟ್ಟುಗೂಡಿಸಿ, ಚೆನ್ನೈನಲ್ಲಿ ಜಂಟಿ ಕ್ರಿಯಾ ಸಮಿತಿ ಸಭೆ ನಡೆಸಿದ್ದೇವೆ.
ನಮ್ಮ ಕಳವಳಗಳನ್ನು ಮಂಡಿಲು ಕೇಂದ್ರಕ್ಕೆ ಹೆಚ್ಚಿನ ಸಮಯವನ್ನು ಕೋರಲಾಗಿದೆ. ವಿವಿಧ ಪಕ್ಷಗಳ ಸಂಸದರು ಪ್ರಧಾನಿ ಭೇಟಿಗೆ ಮನವಿ ಮಾಡಿದ್ದರು ತಿರಸ್ಕರಿಸಲಾಗಿದೆ. ಈ ಗಡಿ ನಿರ್ಣಯವನ್ನು ಜಾರಿಗೆ ತರುವ ಬಿಜೆಪಿ ಸರ್ಕಾರದ ಈ ನಿರ್ಧಾರ ಪ್ರಜಾಪ್ರಭುತ್ವದ ಮೇಲಿನ ಸ್ಪಷ್ಟ ದಾಳಿಯಾಗಿದೆ. ಇದನ್ನೂ ಹೇಗೆ ನಡೆಸಲಾಗುತ್ತಿದೆ ಎಂಬುದು ನಮಗೆ ತಿಳಿದಿಲ್ಲ. ಈ ವಿಶೇಷ ಅಧಿವೇಶನವನ್ನು ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಚುನಾವಣೆಗಳ ಮಧ್ಯೆ ಬಲವಂತವಾಗಿ ಕರೆಯಲಾಗಿದೆ ಎಂದು ಕಿಡಿಕಾರಿದ್ದಾರೆ.
ತಮಿಳುನಾಡು ಮತ್ತು ಇತರೆ ದಕ್ಷಿಣದ ರಾಜ್ಯಗಳು ಈ ಹಿಂದೆ ಕೇಂದ್ರದ ಸಲಹೆಯಂತೆ ಜನಸಂಖ್ಯಾ ನಿಯಂತ್ರಣ ಮತ್ತು ಕುಟುಂಬ ಯೋಜನೆ ಕ್ರಮಗಳನ್ನು ಅನುಸರಿಸಿವೆ. ಅದರ ಸಂಭಾವ್ಯ ಪರಿಣಾಮಗಳನ್ನು ಈಗ ಎದುರಿಸಬೇಕಾಗಿದೆ. ನೀವು ತಮಿಳುನಾಡನ್ನು ತಪ್ಪುದಾರಿಗೆಳೆಯಬಹುದು ಮತ್ತು ಎಂದಿನಂತೆ ಮುಂದುವರಿಯಬಹುದು ಎಂದು ನೀವು ಊಹಿಸಿದರೆ, ನೀವು ತಪ್ಪು. ನಾವು ಸ್ವಾಭಿಮಾನದ ಜನರು, ನಮಗೆ ತತ್ವಗಳು ಮುಖ್ಯ. ರಾಜ್ಯಗಳ ಹಕ್ಕುಗಳು ಮುಖ್ಯ ಎಂದು ಹೇಳಿದ್ದಾರೆ.
ಸಂವಿಧಾನದ ಪಿತಾಮಹ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯಾದ ಇಂದಿನ ದಿನ ನಾನು ಅತ್ಯಂತ ಗಂಭೀರವಾಗಿ ಹೇಳುತ್ತಿದ್ದೇನೆ. ತಮಿಳುನಾಡು ಪರಿಣಾಮ ಬೀರಿದರೆ, ನಾವು ಇಡೀ ರಾಷ್ಟ್ರವನ್ನು ಗಮನಿಸುವಂತೆ ಮಾಡುತ್ತೇವೆ. ಪ್ರಧಾನಿ ಮೋದಿಯವರೇ ನಾನು ನಿಮಗೆ ನೀಡುತ್ತಿರುವ ಅಂತಿಮ ಎಚ್ಚರಿಕೆ ಇದು. ತಮಿಳುನಾಡು ಹೋರಾಡುತ್ತದೆ, ತಮಿಳುನಾಡು ಗೆಲ್ಲುತ್ತದೆ ಎಂದು ಪ್ರತಿಪಾದಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net