ಸಿಎಂ ಹಿಮಂತ ಕುಟುಂಬದ ಮುಖವಾಡ ಕಳಚುತ್ತೇನೆ...ಶರ್ಮಾ ಪತ್ನಿಯ ವಿದೇಶಿ ಆಸ್ತಿಗಳ ಬಗ್ಗೆ ಗೊಗೊಯ್​ ಸ್ಫೋಟಕ ಹೇಳಿಕೆ! | Gaurav Gogoi

Gaurav Gogoi | ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್
Gaurav Gogoi | ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್
Published on
ದಿಸ್ಪೂರ್​​: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ (Gaurav Gogoi) ನಡುವಿನ ವಾಗ್ಯುದ್ಧ ಈಗ ತಾರಕಕ್ಕೇರಿದ್ದು, ಪರಸ್ಪರ ಗಂಭೀರ ಆರೋಪಗಳ ಸುರಿಮಳೆಯೇ ಸುರಿಯುತ್ತಿದೆ. 
ಮಾಧ್ಯಮಗಳೊಂದಿಗೆ ಮಾತನಾಡಿದ ಗೊಗಯ್​ ಗೊಗೊಯ್, ಬಿಜೆಪಿ ನಾಯಕರು ಎಷ್ಟು ಬೇಕಾದರೂ ಸುಳ್ಳು ಹೇಳಲಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಶರ್ಮಾ ಕುಟುಂಬದ ಅಕ್ರಮ ವ್ಯವಹಾರಗಳ ಗುಟ್ಟನ್ನು ರಟ್ಟು ಮಾಡಲಾಗುವುದು ಎಂದು ಎಚ್ಚರಿಕೆ ನೀಡುತ್ತಾ, ಮುಖ್ಯಮಂತ್ರಿಗಳನ್ನು ತಕ್ಷಣವೇ ಅನರ್ಹಗೊಳಿಸಬೇಕು ಮತ್ತು ಅವರ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಕುಟುಂಬವು ದುಬೈನಲ್ಲಿ ಗೋಲ್ಡ್ ಕಾರ್ಡ್ ಮತ್ತು ಆಸ್ತಿಗಳನ್ನು ಹೊಂದಿದೆಯೇ ಎಂಬ ಬಗ್ಗೆ ಪ್ರಶ್ನಿಸಿರುವ ಗೊಗೊಯ್, ಈ ಮಾಹಿತಿಯನ್ನು ಚುನಾವಣಾ ಅಫಿಡವಿಟ್‌ನಲ್ಲಿ ಏಕೆ ಘೋಷಿಸಿಲ್ಲ ಎಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದರೆ, ಹಸು ಕಳ್ಳಸಾಗಣೆಯಿಂದ ಹಿಡಿದು ಕಲ್ಲಿದ್ದಲು ಮಾಫಿಯಾದವರೆಗೆ ಶರ್ಮಾ ಅವರಿಗಿರುವ ಎಲ್ಲಾ ಸಂಬಂಧಗಳ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೈ ನಾಯಕ ಗುಡುಗಿದ್ದಾರೆ.

ಶರ್ಮ ಗರಂ

ತಮ್ಮ ಪತ್ನಿಯ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿರುವ ಸಿಎಂ ಹಿಮಂತ ಬಿಸ್ವಾ ಶರ್ಮಾ, ಕಾಂಗ್ರೆಸ್ ಪಕ್ಷವು ಪಾಕಿಸ್ತಾನಿ ಸಾಮಾಜಿಕ ಮಾಧ್ಯಮ ಗುಂಪುಗಳಿಂದ ಬಂದ ತಪ್ಪು ಮಾಹಿತಿಯನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿದೆ ಎಂದು ಪ್ರತಿಪಾದಿಸಿದ್ದಾರೆ. ಕಳೆದ 10 ದಿನಗಳಲ್ಲಿ ಪಾಕಿಸ್ತಾನದ ಚಾನೆಲ್‌ಗಳು ಅಸ್ಸಾಂ ಚುನಾವಣೆ ಬಗ್ಗೆ ಹತ್ತಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿ, ಕಾಂಗ್ರೆಸ್ ಗೆಲ್ಲಬೇಕು ಎಂದು ಆಶಿಸುತ್ತಿವೆ ಎಂದು ಶರ್ಮಾ ದೂರಿದ್ದಾರೆ.
ಈ ಪಾಕಿಸ್ತಾನಿ ಕನೆಕ್ಷನ್ ಬಗ್ಗೆ ತನಿಖಾ ಸಂಸ್ಥೆಗಳು ಗಮನ ಹರಿಸಲಿವೆ ಎಂದು ಹೇಳಿರುವ ಮುಖ್ಯಮಂತ್ರಿಗಳು ತಮ್ಮ ಪತ್ನಿಯ ಹೆಸರನ್ನು ಎಳೆದು ತಂದಿರುವ ಗೊಗೊಯ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ ವಿದೇಶಗಳಲ್ಲಿ ಕಂಪನಿಗಳನ್ನು ನೋಂದಾಯಿಸುವುದು ಕೇವಲ 199 ಡಾಲರ್ ಪಾವತಿಸುವಷ್ಟು ಸುಲಭದ ಕೆಲಸವಾಗಿದ್ದು, ವಿರೋಧಿಗಳು ತಮ್ಮ ಪತ್ನಿಯ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ ಎನ್ನುವುದು ಶರ್ಮಾ ವಾದ.
ಈ ವಿಚಾರವಾಗಿ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ಸುಳ್ಳು ದಾಖಲೆಗಳನ್ನು ಪ್ರದರ್ಶಿಸಿ ಚುನಾವಣೆ ಮೇಲೆ ಪ್ರಭಾವ ಬೀರಲು ಯತ್ನಿಸಿದ ಆರೋಪದ ಮೇಲೆ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಕಠಿಣ ಸೆಕ್ಷನ್‌ಗಳಡಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇಂತಹ ಅಪರಾಧಗಳಿಗೆ ಜೀವಾವಧಿ ಶಿಕ್ಷೆಯಾದರು ಅಚ್ಚರಿ ಪಡಬೇಕಿಲ್ಲ ಎಂದು ಅಸ್ಸಾಂ ಸಿಎಂ ತಿಳಿಸಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಚುನಾವಣಾ ಪ್ರಚಾರ ಅಂತಿಮ ಹಂತ ತಲುಪಿದ್ದು, ಏಪ್ರಿಲ್ 9 ರಂದು ಅಸ್ಸಾಂನಲ್ಲಿ ಮತದಾನ ನಡೆಯಲಿದೆ. ಇದರ ಜೊತೆಗೆ ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 4 ರಂದು ಎಲ್ಲಾ ಫಲಿತಾಂಶಗಳು ಹೊರಬೀಳಲಿವೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net