ಪತ್ನಿ ವಿರುದ್ಧದ ಆರೋಪಕ್ಕೆ ಸಿಎಂ ಶರ್ಮಾ ಗರಂ; ಕಾಂಗ್ರೆಸ್ ಕಂಟೆಂಟ್ ಹಿಂದೆ ಪಾಕಿಸ್ತಾನದ ಕೈವಾಡ.. ಕೈ ನಾಯಕರಿಗೆ ಜೀವಾವಧಿ ಶಿಕ್ಷೆಯ ವಾರ್ನಿಂಗ್! | Himanta Biswa Sarma

Himanta Biswa Sarma | ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ
Himanta Biswa Sarma | ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ
Published on
ದಿಸ್ಪೂರ್​​: ಅಸ್ಸಾಂನ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ರಾಜಕೀಯ ಸಂಘರ್ಷ ತಾರಕಕ್ಕೇರಿದ್ದು, ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾರ (Himanta Biswa Sarma) ಪತ್ನಿ ರಿನಿಕಿ ಭುಯಾನ್ ಶರ್ಮಾ ವಿರುದ್ಧ ಹಣಕಾಸು ಅಕ್ರಮದ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಸೋಮುವಾರ (ಏ.6) ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕೈ ನಾಯಕರ ಆರೋಪಕ್ಕೆ ತಿರುಗೇಟು ನೀಡಿರುವ ಸಿಎಂ ಶರ್ಮಾ, ಕಾಂಗ್ರೆಸ್ ಪಕ್ಷವು ಪಾಕಿಸ್ತಾನಿ ಮೂಲದ ತಪ್ಪು ಮಾಹಿತಿ ಅಭಿಯಾನದ ಮುಂದುವರೆದ ಭಾಗವಾಗಿದೆ ಎಂದಿದ್ದಾರೆ.

ಹಿಮಂತ ಬಿಸ್ವಾ ಶರ್ಮಾ ಹೇಳಿದ್ದೇನು..?

ಈ ಆರೋಪಗಳನ್ನು ತಳ್ಳಿಹಾಕಿರುವ ಮುಖ್ಯಮಂತ್ರಿ ಶರ್ಮಾ, ಕಾಂಗ್ರೆಸ್ ಬಳಸುತ್ತಿರುವ ಮಾಹಿತಿ ಮತ್ತು ದಾಖಲೆಗಳು ಪಾಕಿಸ್ತಾನದ ಸಾಮಾಜಿಕ ಮಾಧ್ಯಮ ಜಾಲಗಳಿಂದ ಬಂದಿವೆ, ಕಳೆದ ಹತ್ತು ದಿನಗಳಲ್ಲಿ ಪಾಕಿಸ್ತಾನದ ವಿವಿಧ ಟಾಕ್ ಶೋಗಳಲ್ಲಿ ಅಸ್ಸಾಂ ಚುನಾವಣೆ ಮತ್ತು ಕಾಂಗ್ರೆಸ್ ಪರವಾಗಿ ಅಭೂತಪೂರ್ವ ಚರ್ಚೆಗಳು ನಡೆಯುತ್ತಿವೆ ಎಂದು ಆರೋಪಿಸಿದ್ದು, ಇದು ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ವಿದೇಶಿ ಶಕ್ತಿಗಳ ಹಸ್ತಕ್ಷೇಪ ಮತ್ತು ಕಾಂಗ್ರೆಸ್ ಪಕ್ಷದ ಸಂಘಟಿತ ಪ್ರಯತ್ನ ಎಂದು ದೂರಿದ್ದಾರೆ.
ವಿದೇಶಗಳಲ್ಲಿ ಕಂಪನಿಗಳನ್ನು ನೋಂದಾಯಿಸುವುದು ಕೇವಲ 199 ಡಾಲರ್ ಪಾವತಿಸುವಷ್ಟು ಸುಲಭದ ಕೆಲಸವಾಗಿದ್ದು, ವಿರೋಧಿಗಳು ತಮ್ಮ ಪತ್ನಿಯ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿರುವ ಶರ್ಮಾ, ಈ ವಿಚಾರವಾಗಿ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ಸುಳ್ಳು ದಾಖಲೆಗಳನ್ನು ಪ್ರದರ್ಶಿಸಿ ಚುನಾವಣೆ ಮೇಲೆ ಪ್ರಭಾವ ಬೀರಲು ಯತ್ನಿಸಿದ ಆರೋಪದ ಮೇಲೆ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಕಠಿಣ ಸೆಕ್ಷನ್‌ಗಳಡಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇಂತಹ ಅಪರಾಧಗಳಿಗೆ ಜೀವಾವಧಿ ಶಿಕ್ಷೆಯಾದರು ಅನುಮಾನ ಪಡಬೇಕಿಲ್ಲ ಎಂದು ಅಸ್ಸಾಂ ಸಿಎಂ ತಿಳಿಸಿದ್ದಾರೆ.

 ಕಾಂಗ್ರೆಸ್​ ನಾಯಕರ ಆರೋಪವೇನು..?

ಗೌರವ್ ಗೊಗೊಯ್ ಸೇರಿದಂತೆ ಕಾಂಗ್ರೆಸ್‌ನ ಪ್ರಮುಖ ನಾಯಕರು ದೆಹಲಿ ಮತ್ತು ಗುವಾಹಟಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, ಮುಖ್ಯಮಂತ್ರಿಯವರ ಪತ್ನಿ ಮೂರು ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ ಮತ್ತು ಅಮೆರಿಕದ ವ್ಯೋಮಿಂಗ್ ಮೂಲದ ಶೆಲ್ ಕಂಪನಿಗಳ ಮೂಲಕ ಸುಮಾರು 52,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎಂದು ಆರೋಪಿಸಿದ್ದರು. ಈ ದಾಖಲೆಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ದಾಳಿ ನಡೆಸಿತ್ತು.

ಚುನಾವಣಾ ಯಾವಾಗ...?

ಈಗಾಗಲೇ ರಾಜ್ಯದಲ್ಲಿ ಚುನಾವಣಾ ಪ್ರಚಾರ ಅಂತಿಮ ಹಂತ ತಲುಪಿದ್ದು, ಏಪ್ರಿಲ್ 9 ರಂದು ಅಸ್ಸಾಂನಲ್ಲಿ ಮತದಾನ ನಡೆಯಲಿದೆ. ಇದರ ಜೊತೆಗೆ ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 4 ರಂದು ಎಲ್ಲಾ ಫಲಿತಾಂಶಗಳು ಹೊರಬೀಳಲಿವೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net