ದೃಷ್ಟಿ ಬಿದ್ದಿದ್ದರಿಂದ ತೆಂಗಿನ ತೋಟಗಳ ಕಣ್ಮರೆ; ವಿವಾದ ಎಬ್ಬಿಸಿದ ಪವನ್ ಕಲ್ಯಾಣ್ ಹೇಳಿಕೆ; ಕ್ಷಮೆಗೆ ಆಗ್ರಹ, ಬೆದರಿಕೆ | Pawan Kalyan

ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್
ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್
Published on
ಹೈದರಾಬಾದ್: ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್(Pawan Kalyan) ತಮ್ಮ ರಾಜ್ಯದ ಕೋನಸೀಮಾ ಜಿಲ್ಲೆಯಲ್ಲಿ ತೆಂಗಿನ ತೋಟಗಳ ಕಣ್ಮರೆ ಬಗ್ಗೆ ಮಾತನಾಡುವಾಗ ನೀಡಿದ ಹೇಳಿಕೆ ಪಕ್ಕದ ತೆಲಂಗಾಣದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ.​ ಕ್ಷಮೆ ಕೇಳುವಂತೆ ಅಲ್ಲಿನ ರಾಜಕೀಯ ನಾಯಕರು ಆಗ್ರಹಿಸಿದ್ದು, ಇಲ್ಲದಿದ್ದರೆ ತೆಲಂಗಾಣದಲ್ಲಿ ಅವರ ಸಿನಿಮಾಗಳನ್ನು ಬ್ಯಾನ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಕಳೆದ ವಾರ ಕೊನಸೀಮಾ ಜಿಲ್ಲೆಯಲ್ಲಿ ಸಮುದ್ರ ನೀರಿನಿಂದ ಹಾನಿಗೊಳಗಾದ ತೆಂಗಿನ ತೋಟಗಳ ಪರಿಶೀಲನೆಯ ಸಂದರ್ಭದಲ್ಲಿ, ಜಿಲ್ಲೆಯ ಹಿಂದಿನ ಅದ್ಭುತ ಹಸಿರು ಸೌಂದರ್ಯವನ್ನು ಹೊಗಳಿದ್ದರು. ಈ ವೇಳೆ 2014ರಲ್ಲಿ ರಾಜ್ಯದಿಂದ ಬೇರ್ಪಟ್ಟ ತೆಲಂಗಾಣದ ಜನರು ಕೋನಸೀಮಾ ಸೌಂದರ್ಯವನ್ನು ಹೊಗಳುತ್ತಿದ್ದರು. ಬಹುಶಃ ತೆಲಂಗಾಣದ ಜನರ ದೃಷ್ಟಿ ಬಿದ್ದಿದ್ದರಿಂದ ಏನೋ ಕೋನಸೀಮಾ ಜಿಲ್ಲೆಯ ಹಸಿರು ಸೌಂದರ್ಯ, ತೆಂಗಿನ ತೋಟಗಳು ಕಣ್ಮರೆಯಾಗಿವೆ ಎಂದು ಹೇಳಿದ್ದರು.

ಈ ಹೇಳಿಕೆ ಈಗ ಇದು ತೆಲಂಗಾಣದ ಜನರನ್ನು ಅವಮಾನಿಸಲಾಗಿದೆ ಎಂದು ರಾಜಕೀಯದ ವಿವಾದದ ಕಿಡಿಹೊತ್ತಿಸಿದೆ. ಅವರ ದೃಷ್ಟಿ ಬಿದ್ದಿದ್ದರಿಂದ ಹಾಳಾಗಿದೆ ಎಂದು ಪವನ್ ಕಲ್ಯಾಣ್ ಅವಮಾನ ಮಾಡಿದ್ದಾರೆ ಎಂದು ತೆಲಂಗಾಣದ ರಾಜಕೀಯ ನಾಯಕರು ಕಿಡಿಕಾರಿದ್ದಾರೆ. ಬಹಿರಂಗವಾಗಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ.
ತೆಲಂಗಾಣದ ಸಚಿವ ಕೋಮಟಿರೆಡ್ಡಿ ವೆಂಕಟರೆಡ್ಡಿ ಮಾತನಾಡಿದ್ದು, ಪವನ್ ಕಲ್ಯಾಣ್ ಬೇಷರತ್ ಕ್ಷಮೆಯಾಚಿಸದಿದ್ದರೆ, ಅವರ ಚಲನಚಿತ್ರಗಳನ್ನು ತೆಲಂಗಾಣದಲ್ಲಿ ಎಲ್ಲಿಯೂ ಪ್ರದರ್ಶಿಸಲು ಅನುಮತಿಸಲಾಗುವುದಿಲ್ಲ. ಇದು ತೆಲಂಗಾಣದ ದುಷ್ಟ ಕಣ್ಣಿನಿಂದಲ್ಲ; ವಾಸ್ತವವಾಗಿ, ಆಂಧ್ರ ನಾಯಕರ ಆಳ್ವಿಕೆಯಲ್ಲಿ, ನಮ್ಮ ಜನರು 60 ವರ್ಷಗಳ ಕಾಲ ಫ್ಲೋರೈಡ್ ನೀರನ್ನು ಕುಡಿಯಬೇಕಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೊಬ್ಬ ಪಶುಸಂಗೋಪನಾ ಸಚಿವ ವಕತಿ ಶ್ರೀಹರಿ ಮಾತನಾಡಿ, ಡಿಸಿಎಂ ಅವರ ಹೇಳಿಕೆ ರಾಜಕೀಯ ಪ್ರಬುದ್ಧತೆಯ ಕೊರತೆಯನ್ನು ಹೊಂದಿದೆ. ರಾಜಕೀಯ ಲಾಭಕ್ಕಾಗಿ ಮಾತನಾಡಿದ್ದಾರೆ. ಹೊಸದಾಗಿ ರಚನೆಯಾದ ತೆಲಂಗಾಣ ರಾಜ್ಯವು ಮಾಡಿರುವ ಅಭಿವೃದ್ಧಿಯ ಪ್ರಗತಿಯನ್ನು ಪವನ್ ಕಲ್ಯಾಣ್​ಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಇನ್ನು ಕಾಂಗ್ರೆಸ್ ಶಾಸಕ ಜೆ ಅನಿರುದ್ಧ ರೆಡ್ಡಿ, ತೆಲಂಗಾಣ ಕೊನಸೀಮಾ ಮೇಲೆ ಕೆಟ್ಟ ಕಣ್ಣು ಹಾಕಿದ್ದರೆ, ಪವನ್ ಕಲ್ಯಾಣ್ ಹೈದರಾಬಾದ್‌ನಲ್ಲಿ ಯಾಕೆ ವಾಸಿಸುತ್ತಿದ್ದಾರೆ? ಅವರು ಇಲ್ಲಿರುವ ತಮ್ಮ ಆಸ್ತಿಗಳನ್ನು ಮಾರಿ ವಿಜಯವಾಡಕ್ಕೆ ಸ್ಥಳಾಂತರಗೊಳ್ಳಬೇಕು ಎಂದು ಹೇಳಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net