

Instagram Engagement: ಅಕ್ಟೋಬರ್ ತಿಂಗಳ ಎರಡನೇ ವಾರ ಇನ್‌ಸ್ಟಾಗ್ರಾಮ್‌ನಲ್ಲಿ ರಾಜಕೀಯ ಪಕ್ಷಗಳು ಮತ್ತು ನಾಯಕರ ಡಿಜಿಟಲ್ ಪ್ರಾಬಲ್ಯದ ಕುರಿತು ಡೇಟಾ ಬೀನ್ಸ್ (Data Beings) ಸಂಸ್ಥೆ ಹೊಸ ವರದಿಯೊಂದನ್ನು ಬಿಡುಗಡೆ ಮಾಡಿದೆ. ಅಚ್ಚರಿ ಎಂಬಂತೆ, ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ಕಾಕ್ರೋಚ್ ಜನತಾ ಪಾರ್ಟಿ ಇನ್‌ಸ್ಟಾಗ್ರಾಮ್ ಎಂಗೇಜ್‌ಮೆಂಟ್‌ನಲ್ಲಿ ಸಾಂಪ್ರದಾಯಿಕ ರಾಜಕೀಯ ದಿಗ್ಗಜರಾದ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದೆ.
ಅಕ್ಟೋಬರ್ 10 ರಿಂದ 16 ರ ನಡುವಿನ ಅವಧಿಯಲ್ಲಿ ಟ್ರ್ಯಾಕ್ ಮಾಡಲಾದ 10 ಪ್ರಮುಖ ರಾಜಕೀಯ ಪಕ್ಷಗಳು ಮತ್ತು ನಾಯಕರ ಒಟ್ಟು ಎಂಗೇಜ್‌ಮೆಂಟ್ ಅಂಕಿಅಂಶಗಳನ್ನು ಡೇಟಾ ಬೀನ್ಸ್ ಗುರುವಾರ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ಅವಧಿಯಲ್ಲಿ ಒಟ್ಟು 87.8 ಮಿಲಿಯನ್ ಎಂಗೇಜ್‌ಮೆಂಟ್‌ಗಳು ದಾಖಲಾಗಿವೆ.
ಸಿಜೆಪಿಗೆ ಅಗ್ರಸ್ಥಾನ!
ವರದಿಯ ಪ್ರಕಾರ, ಸಿಜೆಪಿ ಬರೋಬ್ಬರಿ 21.7 ಮಿಲಿಯನ್ ಎಂಗೇಜ್‌ಮೆಂಟ್‌ಗಳನ್ನು ಪಡೆದುಕೊಳ್ಳುವ ಮೂಲಕ ಶೇಕಡಾ 25ರಷ್ಟು ಪಾಲನ್ನು ತನ್ನದಾಗಿಸಿಕೊಂಡಿದೆ ಮತ್ತು ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿದೆ. ಇನ್ನು ವಿರೋಧ ಪಕ್ಷ ಕಾಂಗ್ರೆಸ್ 20.5 ಮಿಲಿಯನ್ ಎಂಗೇಜ್‌ಮೆಂಟ್‌ಗಳೊಂದಿಗೆ (ಶೇ. 23) ಎರಡನೇ ಸ್ಥಾನದಲ್ಲಿದ್ದರೆ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ 14.6 ಮಿಲಿಯನ್ ಎಂಗೇಜ್‌ಮೆಂಟ್‌ಗಳೊಂದಿಗೆ (ಶೇ. 17) ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಸಿಜೆಪಿಯು ಕಾಂಗ್ರೆಸ್‌ಗಿಂತ 1.2 ಮಿಲಿಯನ್ ಅಧಿಕ ಎಂಗೇಜ್‌ಮೆಂಟ್ ಪಡೆದು ಮುನ್ನಡೆ ಕಾಯ್ದುಕೊಂಡಿದೆ.
ಇತರ ಪಕ್ಷಗಳ ಸ್ಥಾನಮಾನ
ಈ ಪಟ್ಟಿಯಲ್ಲಿ ಯೂತ್ ಕಾಂಗ್ರೆಸ್ 7.4 ಮಿಲಿಯನ್ ಎಂಗೇಜ್‌ಮೆಂಟ್ ಪಡೆದು ನಾಲ್ಕನೇ ಸ್ಥಾನದಲ್ಲಿದ್ದರೆ, ಆಡಳಿತರೂಢ ಭಾರತೀಯ ಜನತಾ ಪಾರ್ಟಿ ಕೇವಲ 5 ಮಿಲಿಯನ್ ಎಂಗೇಜ್‌ಮೆಂಟ್‌ಗಳೊಂದಿಗೆ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಉಳಿದಂತೆ, ಎನ್‌ಎಸ್‌ಯುಐ 1.8 ಮಿಲಿಯನ್, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ 1.4 ಮಿಲಿಯನ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ 1.2 ಮಿಲಿಯನ್ ಹಾಗೂ ಆಮ್ ಆದ್ಮಿ ಪಕ್ಷ (AAP) 800,000 ಎಂಗೇಜ್‌ಮೆಂಟ್‌ಗಳನ್ನು ಪಡೆದು ಪಟ್ಟಿಯನ್ನು ಪೂರ್ಣಗೊಳಿಸಿವೆ. ಸಾಂಪ್ರದಾಯಿಕ ರಾಜಕೀಯ ಪಕ್ಷಗಳನ್ನು ಹಿಂದಿಕ್ಕಿ ಯುವ ವರ್ಗದ ಗಮನ ಸೆಳೆಯುವಲ್ಲಿ ಸಿಜೆಪಿ ಡಿಜಿಟಲ್ ಮಟ್ಟದಲ್ಲಿ ಯಶಸ್ವಿಯಾಗಿರುವುದು ಈ ವರದಿಯಿಂದ ಸ್ಪಷ್ಟವಾಗಿದೆ.
ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹೇಳಿಕೆ ದಾಖಲಿಸಲು ಕಾಕ್ರೋಚ್ ಜನತಾ ಪಾರ್ಟಿ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾಗೆ ದೆಹಲಿ ಪೊಲೀಸ್ ಅಪರಾಧ ವಿಭಾಗವು (ಕ್ರೈಮ್ ಬ್ರಾಂಚ್) ಸಮನ್ಸ್ ಜಾರಿ ಮಾಡಿದೆ. ಪೊಲೀಸ್ ಮೂಲಗಳ ಪ್ರಕಾರ, ಸಿಜೆಪಿ ಸದಸ್ಯ ಅಜಿಂಕ್ಯ ಶಿಂಧೆ ಅವರಿಗೂ ಕೂಡ ಸಮನ್ಸ್ ನೀಡಲಾಗಿದ್ದು, ಸಾರ್ವಜನಿಕ ಸೇವಕರು ಹೊರಡಿಸಿದ ಆದೇಶಗಳನ್ನು ಉಲ್ಲಂಘಿಸಿರುವುದು ಹಾಗೂ ಅತಿಕ್ರಮ ಪ್ರವೇಶ ನಡೆಸಿರುವ ಆರೋಪಗಳ ಕುರಿತು ಈ ತನಿಖೆ ಮುಂದುವರಿದಿದೆ.
ರಾಜೌರಿ ಗಾರ್ಡನ್‌ನಲ್ಲಿರುವ ಕ್ರೈಮ್ ಬ್ರಾಂಚ್ ಕಚೇರಿಯಲ್ಲಿ ಇಂದು (ಗುರುವಾರ ಅ.22) ಮಧ್ಯಾಹ್ನ 12 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾಗೆ ಸೂಚನೆ ನೀಡಲಾಗಿದೆ. ಒಂದು ವಾರಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದು, ತಿಹಾರ್ ಜೈಲಿನಿಂದ ಬಿಡುಗಡೆಗೊಂಡ ಮಾರನೇ ದಿನವೇ ಈ ಸಮನ್ಸ್ ನೀಡಿರುವುದು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ.
ಪ್ರಕರಣದ ಹಿನ್ನಲೆ!
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಗೂ ಮುನ್ನ ಅಕ್ಟೋಬರ್ 10 ರಂದು ಸೌರವ್ ದಾಸ್, ಅಶುತೋಷ್ ರಾಂಕಾ ಹಾಗೂ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಒಂದು ವರ್ಷದವರೆಗೆ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ತರುವ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿತ್ತು.
ಆದರೆ, ಅಕ್ಟೋಬರ್ 13 ರಂದು ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರು ಪ್ರತಿಭಟನಾ ಸ್ಥಳವಾಗಿ ರದ್ದುಪಡಿಸಲಾಗಿದ್ದ ಜಂತರ್ ಮಂತರ್‌ನ ಲಾಕ್ ಮಾಡಲಿದ್ದ ಗೇಟ್ ಅನ್ನು ಹತ್ತಿ ಒಳನುಗ್ಗಲು ಯತ್ನಿಸಿದರು. ರಾಷ್ಟ್ರಧ್ವಜ ಹಾರಿಸಿ ಘೋಷಣೆ ಕೂಗಿದ ಇವರನ್ನು ಮತ್ತೆ ಬಂಧಿಸಿ ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು. ಅಕ್ಟೋಬರ್ 19 ರಂದು ಇವರ ಬಂಧನಾವಧಿಯನ್ನು ಅಕ್ಟೋಬರ್ 21 ರವರೆಗೆ ವಿಸ್ತರಿಸಲಾಗಿತ್ತು.
ಬಂಧನ ವಿಸ್ತರಣೆಯನ್ನು ವಿರೋಧಿಸಿ ಮಂಗಳವಾರ ತಡರಾತ್ರಿಯೇ ತುರ್ತು ವಿಚಾರಣೆ ಕೋರಿ ಸಿಜೆಪಿ ನಾಯಕರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಸೌರವ್ ಮತ್ತು ಅಶುತೋಷ್ ಕೇವಲ ರಾಜಕೀಯ ಕಾರಣಗಳಿಗಾಗಿ ಜೈಲಿನಲ್ಲಿ ಕಾಲ ಕಳೆಯುವಂತಾಗಬಾರದು ಎಂದು ಸಿಜೆಪಿ ಕಾನೂನು ಘಟಕದ ಮುಖ್ಯಸ್ಥೆ ರತ್ನ ಸಿಂಗ್ ಎಕ್ಸ್ ತಮ್ಮ ಎಕ್ಸ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯ ನ್ಯಾಯಾಲಯದ ಸೂಚನೆಯಂತೆ ರಾಂಕಾ ಮತ್ತು ದಾಸ್ ತಮ್ಮ ಅರ್ಜಿಯನ್ನು ಹಿಂಪಡೆದಿದ್ದಾರೆ(ಏಜೆನ್ಸೀಸ್).