ಜಿರಳೆಗಳಿಗೆ ಬಿಜೆಪಿ ನೆರವು...? ದೆಹಲಿ ನಾಯಕನ ಉದಾಹರಣೆ ನೀಡಿದ ಅಣ್ಣಾಮಲೈ...ಪೋಸ್ಟ್​ನಲ್ಲಿ ಪ್ರಧಾನಿ ಮೋದಿ ಬಗ್ಗೆಯೂ ಉಲ್ಲೇಖ! | Annamalai

ನವದೆಹಲಿ: ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಹಾಗೂ ವಿ ದಿ ಲೀಡರ್ಸ್ ಸಂಘಟನೆಯ ಸಂಸ್ಥಾಪಕ ಕೆ. ಅಣ್ಣಾಮಲೈ (Annamalai), ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನಡೆಸಿದ ಪ್ರತಿಭಟನೆಯನ್ನು ಕೇಂದ್ರ ಸರ್ಕಾರ ನಿಭಾಯಿಸಿದ ರೀತಿಯ ಬಗ್ಗೆ ಮತ್ತು ಪ್ರತಿಭಟನಾಕಾರರ ಮೇಲೆ ಪೊಲೀಸರು ಮನಬಂದಂತೆ ದಂಡಿಸಿದ್ದನ್ನು ಸಿಂಗಂ ಖಂಡಿಸಿದ್ದಾರೆ.
ಜಿರಳೆಗಳಿಗೆ ಬಿಜೆಪಿ ನೆರವು...? ದೆಹಲಿ ನಾಯಕನ ಉದಾಹರಣೆ ನೀಡಿದ ಅಣ್ಣಾಮಲೈ
ಜಿರಳೆಗಳಿಗೆ ಬಿಜೆಪಿ ನೆರವು...? ದೆಹಲಿ ನಾಯಕನ ಉದಾಹರಣೆ ನೀಡಿದ ಅಣ್ಣಾಮಲೈ
Published on: 

ನವದೆಹಲಿ: ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಹಾಗೂ ವಿ ದಿ ಲೀಡರ್ಸ್ ಸಂಘಟನೆಯ ಸಂಸ್ಥಾಪಕ ಕೆ. ಅಣ್ಣಾಮಲೈ (Annamalai), ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನಡೆಸಿದ ಪ್ರತಿಭಟನೆಯನ್ನು ಕೇಂದ್ರ ಸರ್ಕಾರ ನಿಭಾಯಿಸಿದ ರೀತಿಯ ಬಗ್ಗೆ ಮತ್ತು ಪ್ರತಿಭಟನಾಕಾರರ ಮೇಲೆ ಪೊಲೀಸರು ಮನಬಂದಂತೆ ದಂಡಿಸಿದ್ದನ್ನು ಸಿಂಗಂ ಖಂಡಿಸಿದ್ದಾರೆ.

ಕಳೆದ ಐದು ವರ್ಷಗಳ ಕಾಲ ತಮಿಳುನಾಡು ಬಿಜೆಪಿಯನ್ನು ಮುಂಚೂಣಿಯಲ್ಲಿ ನಿಂತು ಮುನ್ನಡೆಸಿದ್ದ ಅಣ್ಣಾಮಲೈ, ಪ್ರಸ್ತುತ ಅವರದ್ದೆ ಮಾತೃ ಪಕ್ಷದ ಧೋರಣೆಯನ್ನು ಪ್ರಶ್ನಿಸಿರುವುದು ರಾಷ್ಟ್ರ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಕೇಂದ್ರದಲ್ಲಿ 12 ವರ್ಷಗಳಿಗೂ ಅಧಿಕ ಕಾಲದಿಂದ ನಿರಂತರವಾಗಿ ಆಡಳಿತ ನಡೆಸುತ್ತ ಬಂದಿದ್ದರೂ ಸಹ, ಸರ್ಕಾರಕ್ಕೆ ಸದಾ ಒಂದಲ್ಲ ಒಂದು ಶತ್ರುಗಳನ್ನು ಸೃಷ್ಟಿಸಿಕೊಳ್ಳುವ ಅಭ್ಯಾಸವಿದೆ ಎಂದು ಅಣ್ಣಾಮಲೈ ಗಂಭೀರ ಆರೋಪ ಮಾಡಿದ್ದು, ಇತ್ತೀಚೆಗೆ ತಮ್ಮ ಎಕ್ಸ್ ಖಾತೆಯಲ್ಲಿ ಸರಣಿ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ:ಜೈಲಿನಿಂದ ಹೊರಬರುತ್ತಿದ್ದಂತೆ ಮತ್ತೊಂದು ಸಂಕಷ್ಟ: ದಾಸ್, ರಾಂಕಾ, ಶಿಂಧೆಗೆ ದೆಹಲಿ ಕ್ರೈಮ್ ಬ್ರಾಂಚ್ ಸಮನ್ಸ್! | Fresh trouble for CJP

2011ರ ಪ್ರಧಾನಿ ಮೋದಿ ಹೇಳಿಕೆ ಉಲ್ಲೇಖ!

ತಮ್ಮ ಪೋಸ್ಟ್‌ನಲ್ಲಿ 2011ರ ಪ್ರಮುಖ ಘಟನೆಯೊಂದನ್ನು ಅಣ್ಣಾಮಲೈ ಮೆಲುಕು ಹಾಕಿದ್ದು, ಅಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ನಡೆಸಿದವರ ಮೇಲೆ ಅಂದಿನ ಪೊಲೀಸ್ ಕಾರ್ಯಾಚರಣೆಯನ್ನು ನರೇಂದ್ರ ಮೋದಿ (ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದವರು) ತೀವ್ರವಾಗಿ ಖಂಡಿಸಿದ್ದರು. ತಮ್ಮ ಕೈಗಳನ್ನು ಕಟ್ಟಿಹಾಕಿರದಿದ್ದರೆ ತಾವೇ ಸ್ವತಃ ದೆಹಲಿಗೆ ತೆರಳಿ ಕೇಂದ್ರ ಸರ್ಕಾರದ ವಿರುದ್ಧ ಯುದ್ಧ ಸಾರುತ್ತಿದ್ದರು ಎಂದು ಮೋದಿ ಹೇಳಿದ್ದನ್ನು ಅಣ್ಣಾಮಲೈ ನೆನಪಿಸಿದ್ದಾರೆ. ಅಂದು ನರೇಂದ್ರ ಮೋದಿ ನೀಡಿದ ಆ ಹೇಳಿಕೆಗೆ ಹಾಗೂ ಅವರ ನಿಲುವು ಅಕ್ಷರಶಃ ಸರಿಯಾಗಿತ್ತು ಎಂದು ಅಣ್ಣಾಮಲೈ ಸಮರ್ಥಿಸಿಕೊಂಡಿದ್ದಾರೆ.

ಆದರೆ, ಇಂದು ಕಾಲ ಬದಲಾಗಿದೆ ಎಂದಿರುವ ಬಿಜೆಪಿ ಮಾಜಿ ನಾಯಕ, ಪ್ರಸ್ತುತ ಸರ್ಕಾರದ ನೀತಿಗಳನ್ನು ಪ್ರಶ್ನಿಸುವವರನ್ನು ಸುಲಭವಾಗಿ ಹತ್ತಿಕ್ಕಲಾಗುತ್ತಿದೆ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ. ಇಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದರೆ ನಿಮ್ಮನ್ನು ಅನಿರ್ದಿಷ್ಟಾವಧಿಗೆ ಜೈಲಿಗೆ ತಳ್ಳಬಹುದು, ನಿಮ್ಮ ಶ್ಯೂರಿಟಿ ಬಾಂಡ್‌ಗಳನ್ನು ಯಾವುದೇ ಕಾರಣವಿಲ್ಲದೆ ತಿರಸ್ಕರಿಸಬಹುದು. ಮುನ್ನೆಚ್ಚರಿಕೆ ಬಂಧನಗಳ ವಿಚಾರದಲ್ಲಿ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ಗಳು ನಿಮ್ಮನ್ನು ಆಟವಾಡಿಸಬಹುದು ಎಂದು ಅಣ್ಣಾಮಲೈ ಆರೋಪಿಸಿದ್ದಾರೆ.

ಸಿಜೆಪಿಗೆ ಬಿಜೆಪಿಯಿಂದಲೇ ಪ್ರಚಾರ..?

ಬಿಜೆಪಿಯ ರಾಜಕೀಯ ತಂತ್ರಗಾರಿಕೆಯ ಮೇಲೆಯೂ ಪ್ರಶ್ನೆಗಳನ್ನು ಎತ್ತಿರುವ ಅಣ್ಣಾಮಲೈ, ಆಡಳಿತ ಪಕ್ಷದ ಕ್ರಮಗಳು ಸಿಜೆಪಿಗೆ ಪರೋಕ್ಷವಾಗಿ ನೆರವಾಗುತ್ತಿದೆಯೇ ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ನಡೆದ ದಸರಾ ಆಚರಣೆಯ ಸಂದರ್ಭದಲ್ಲಿ ಜಿರಳೆ ಅಥವಾ ಕಾಕ್ರೋಚ್ ಪ್ರತಿಕೃತಿ ದಹನ ಕಾರ್ಯಕ್ರಮವನ್ನು ಬಿಜೆಪಿ ಶಾಸಕ ಅಶೋಕ್ ಗೋಯಲ್ ನೇತೃತ್ವದಲ್ಲಿ ನಡೆಸಲಾಗಿತ್ತು. ಈ ಘಟನೆಯನ್ನು ಉದಾಹರಿಸಿರುವ ಅಣ್ಣಾಮಲೈ, ಸಿಜೆಪಿಯನ್ನು ಈ ಮಟ್ಟಿಗೆ ವಿರೋಧಿಸುವುದರಿಂದ ಆ ಸಂಘಟನೆಗೆ ರಾಷ್ಟ್ರಮಟ್ಟದಲ್ಲಿ ಉಚಿತ ಪ್ರಚಾರ ಸಿಗುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ವಿರೋಧ ಪಕ್ಷಗಳ ಮತಗಳನ್ನು ಒಡೆಯುವ ಸಲುವಾಗಿ ಸಿಜೆಪಿಯನ್ನು ಬಿಜೆಪಿಯೇ ದೊಡ್ಡದಾಗಿ ಬೆಳೆಸಲು ಹೊರಟಿದೆಯೇ ಎಂಬ ಗಂಭೀರ ಅನುಮಾನವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಸಿಜೆಪಿ ಸ್ವತಃ ಹಣಕೊಟ್ಟು ಪಿಆರ್ ತಂಡವನ್ನು ನೇಮಿಸಿಕೊಂಡಿದ್ದರೂ ಇಷ್ಟು ಉತ್ತಮ ಪ್ರಚಾರ ಸಿಗುತ್ತಿರಲಿಲ್ಲ ಎಂದು ಅವರು ವ್ಯಂಗ್ಯವಾಡಿದ್ದಾರೆ.

Also Read
ಅವರನ್ನು ಪ್ರಶ್ನಿಸಿದರೆ ವಿದೇಶಿ ಏಜೆಂಟ್ ಪಟ್ಟ ಕಟ್ತಾರೆ!...ಸಿಜೆಪಿ ನಾಯಕರ ಬಂಧನ ಖಂಡಿಸಿ ಕೇಂದ್ರದ ವಿರುದ್ಧ ಅಣ್ಣಾಮಲೈ ಕಿಡಿ; ಬಿಜೆಪಿ ತಿರುಗೇಟು | Annamalai
ಜಿರಳೆಗಳಿಗೆ ಬಿಜೆಪಿ ನೆರವು...? ದೆಹಲಿ ನಾಯಕನ ಉದಾಹರಣೆ ನೀಡಿದ ಅಣ್ಣಾಮಲೈ

ಬಿಜೆಪಿಯಿಂದ ತಿರುಗೇಟು

ಅಣ್ಣಾಮಲೈರ ಈ ಎಲ್ಲಾ ಆರೋಪಗಳಿಗೆ ತಮಿಳುನಾಡು ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಾರ್ಯದರ್ಶಿ ವಿನೋಜ್ ಪಿ. ಸೆಲ್ವಂ ಪ್ರತಿಕ್ರಿಯಿಸಿ, ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡುವುದರ ಜೊತೆಗೆ ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡುವುದು ಸರ್ಕಾರದ ಮೂಲಭೂತ ಜವಾಬ್ದಾರಿಯಾಗಿದೆ. 2011ರಲ್ಲಿ ನರೇಂದ್ರ ಮೋದಿ ನೀಡಿದ ಹೇಳಿಕೆಯೊಂದನ್ನು ಮುಂದಿಟ್ಟುಕೊಂಡು 2026ರ ಪೊಲೀಸ್ ಕ್ರಮದ ಕಾನೂನುಬದ್ಧತೆಯನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಅಲ್ಲದೆ, ರಾಜ್ಯ ಬಿಜೆಪಿ ಮುಖ್ಯ ವಕ್ತಾರ ನಾರಾಯಣನ್ ತಿರುಪತಿ ಮಾತನಾಡಿ, ಅಣ್ಣಾಮಲೈ ಅವರ ದ್ವಂದ್ವ ನಿಲುವನ್ನು ಪ್ರಶ್ನಿಸಿದ್ದಾರೆ. ಅಣ್ಣಾಮಲೈ ಅವರು ಜೂನ್ 5 ರಂದು ಬಿಜೆಪಿ ತೊರೆಯುವ ಮೊದಲು ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಯನ್ನು ಬಲವಾಗಿ ಸಮರ್ಥಿಸಿದ್ದರು. ತಮಿಳುನಾಡಿನಲ್ಲಿರುವ ನಕಲಿ ಮತದಾರರನ್ನು ತೆಗೆದುಹಾಕಬೇಕು ಎಂದು ವಾದಿಸಿದ್ದ ಅವರು, ಡಿಎಂಕೆ ಅದನ್ನು ವಿರೋಧಿಸುವುದನ್ನು ಖಂಡಿಸಿದ್ದರು. ಆದರೆ ಈಗ ದಿಢೀರ್ ಎಂದು ಸಿಜೆಪಿ ಮತ್ತು ವಿರೋಧ ಪಕ್ಷಗಳು ಎತ್ತಿರುವ ಪ್ರಶ್ನೆಗಳಿಗೆ ಅವರು ಬೆಂಬಲಿಸುತ್ತಿದ್ದಾರೆ. ಒಬ್ಬ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಹಿರಿಯ ರಾಜಕಾರಣಿಗೆ ರಾಜಕೀಯ ಸ್ಥಿರತೆ ಮತ್ತು ನಿರ್ದಿಷ್ಟ ನಿಲುವು ಅತ್ಯಂತ ಮುಖ್ಯ ಎಂದು ತಿರುಪತಿ ಎಕ್ಸ್ ಪೋಸ್ಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.

ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಕಾರ್ತಿಕ್ ಗೋಪಿನಾಥ್ ಕೂಡ ಅಣ್ಣಾಮಲೈ ವಿರುದ್ಧ ಹರಿಹಾಯ್ದಿದ್ದು, 2011ರ ರಾಮಲೀಲಾ ಮೈದಾನದ ಪರಿಸ್ಥಿತಿಗೂ ಇಂದಿನ ಸಿಜೆಪಿ ಪ್ರತಿಭಟನೆಗೂ ಯಾವುದೇ ಹೋಲಿಕೆ ಇಲ್ಲ ಎಂದಿದ್ದಾರೆ. ಸಿಜೆಪಿ ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ಮುರಿದು ಒಳನುಗ್ಗಿದ್ದರು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್‌ಗೆ ಕಿವಿಮಾತು

ಅಣ್ಣಾಮಲೈ ಅವರು ತಮ್ಮ ಸರಣಿ ಪೋಸ್ಟ್‌ನ ಕೊನೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೂ ಕೆಲವು ಸಲಹೆಗಳನ್ನು ನೀಡಿದ್ದಾರೆ. ಸರ್ಕಾರದ ವಿರುದ್ಧದ ಪ್ರತಿಭಟನೆಗಳಲ್ಲಿ ತೊಡಗುವಾಗ ವಿರೋಧ ಪಕ್ಷಗಳು ಮತ್ತು ಸಿಜೆಪಿಯು ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲೆಯೇ ಸಂಪೂರ್ಣ ಅಪನಂಬಿಕೆ ಮೂಡಿಸಬಾರದು ಎಂದಿದ್ದಾರೆ. ಯಾರೋ ವ್ಯಕ್ತಿಗಳು ತಪ್ಪು ಮಾಡಿದ್ದರೆ ಅವರನ್ನು ಪ್ರಶ್ನಿಸಬಹುದೇ ಹೊರತು ಇಡೀ ವ್ಯವಸ್ಥೆಯನ್ನು ದೂಷಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net