ಮೇಘಾಲಯದಲ್ಲಿ ಕಲ್ಲಿದ್ದಲು ಗಣಿ ಸ್ಫೋಟ: 10 ಕಾರ್ಮಿಕರ ಸಾವು; ಮುಂದುವರಿದ ರಕ್ಷಣಾಕಾರ್ಯ | Coal Mine

ರಕ್ಷಣಾಕಾರ್ಯದಲ್ಲಿ ನಿರತರಾಗಿರುವ ಸಿಬ್ಬಂದಿಗಳು
ರಕ್ಷಣಾಕಾರ್ಯದಲ್ಲಿ ನಿರತರಾಗಿರುವ ಸಿಬ್ಬಂದಿಗಳು
Published on

ಪ್ರಮುಖ ಮುಖ್ಯಾಂಶಗಳು

  • ಮೇಘಾಲಯದ ಕಲ್ಲಿದ್ದಲು ಗಣಿಯಲ್ಲಿ ಭಾರಿ ಸ್ಫೋಟ
  • ಕನಿಷ್ಠ 10 ಕಾರ್ಮಿಕರು ಸಾವನ್ನಪ್ಪಿರುವ ಶಂಕೆ
  • ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದ ಗಣಿ
ಮೇಘಾಲಯ: ಗುರುವಾರ (ಫೆ.5) ಮೇಘಾಲಯದ ಕಲ್ಲಿದ್ದಲು ಗಣಿ (Coal Mine) ಯಲ್ಲಿ ಭಾರಿ ಸ್ಫೋಟ ಸಂಭವಿಸಿದ ಹಿನ್ನಲೆ ಕನಿಷ್ಠ 10 ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ವರದಿಗಳ ಪ್ರಕಾರ, ಕಲ್ಲಿದ್ದಲು ಗಣಿಯೊಂದರೊಳಗೆ ಸ್ಫೋಟ ಸಂಭವಿಸಿದ್ದು, ಸ್ಥಳದಲ್ಲಿದ್ದ ಕಾರ್ಮಿಕರಲ್ಲಿ ಭಾರೀ ಸಾವುನೋವು ಸಂಭವಿಸಿದ್ದು, ಬಲಿಯಾದವರಲ್ಲಿ ಹೆಚ್ಚಿನವರು ಅಸ್ಸಾಂನ ಕಾರ್ಮಿಕರು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಥಾಂಗ್ಸ್ಕು ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್​ ಕುಮಾರ್ ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಘಟನೆ ನಡೆದಿದೆ ಎಂದು ನಮ್ಮ ತಂಡ ದೃಢಪಡಿಸಿದೆ, ಆದರೆ ಗಣಿ ಒಳಗೆ ಎಷ್ಟು ಜನರಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ವಿಕಾಸ್​ ಕುಮಾರ್ ಮಾಹಿತಿ ನೀಡಿದ್ದಾರೆ.
ಗಾಯ ಗೊಂಡ ಒಬ್ಬನನ್ನು ಮೊದಲು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು, ನಂತರ ಉನ್ನತ ಚಿಕಿತ್ಸೆಗಾಗಿ ಶಿಲ್ಲಾಂಗ್‌ಗೆ ಕಳುಹಿಸಲಾಗಿದೆ ಎಂದ ಎಸ್ಪಿ, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ಪೊಲೀಸರು ರಾಜ್ಯ ವಿಪತ್ತು ನಿರ್ವಹಣಾ ಪಡೆಯಿಂದ ಸಹಾಯ ಕೋರಿದ್ದಾರೆ. ಎಸ್‌ಡಿಆರ್‌ಎಫ್ ತಂಡ ಇನ್ನೂ ಸ್ಥಳಕ್ಕೆ ಆಗಮಿಸಿಲ್ಲ ಎಂದು ಹೇಳಿದರು.
ಸ್ಫೋಟ ಸಂಭವಿಸಿರುವ ಗಣಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿತ್ತು ಎಂದು ಅನುಮಾನಿಸಲಾಗಿದೆ. ಅಕ್ರಮವಾಗಿದೆಯೇ ಎಂದು ಕೇಳಿದಾಗ, ಹೌದು ಈ ಗಣಿ ಅಕ್ರಮದಂದೆ ಕಾಣುತ್ತದೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ. ಸ್ಫೋಟಕ್ಕೆ ನಿಖರ ಕಾರಣ ಏನೆಂದು ಇಲ್ಲಿಯವರೆಗೆ ತಿಳಿದು ಬಂದಿಲ್ಲ ಈ ಕುರಿತು ತನಿಖೆ ಮುಂದುವರೆದಿದೆ ಎಂದು ವಿಕಾಸ್​ ಕುಮಾರ್​ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್​ನಿಂದ ಇಲಿ ರಂಧ್ರ ಗಣಿಗಾರಿಕೆಗೆ ನಿಷೇಧ

ಪರಿಸರ ಹಾನಿ ಮತ್ತು ಗಂಭೀರ ಸುರಕ್ಷತಾ ಕಾಳಜಿಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 2014 ರಲ್ಲಿ ಮೇಘಾಲಯದಲ್ಲಿ ಇಲಿ ರಂಧ್ರ ಕಲ್ಲಿದ್ದಲು ಗಣಿಗಾರಿಕೆ ಮತ್ತು ಇತರ ಅವೈಜ್ಞಾನಿಕ ಗಣಿಗಾರಿಕೆ ಪದ್ಧತಿಗಳ ಮೇಲೆ ನಿಷೇಧವನ್ನು ಹೇರಿತ್ತು.
ಇಲಿ ರಂಧ್ರ ಗಣಿಗಾರಿಕೆಯು ಕಾರ್ಮಿಕರು ಕಲ್ಲಿದ್ದಲು ಗಣಿಗಾರಿಕೆಗೆ ಪ್ರವೇಶಿಸಲು ಮತ್ತು ಹೊರತೆಗೆಯಲು ಸಾಮಾನ್ಯವಾಗಿ ಸುಮಾರು 3 ರಿಂದ 4 ಅಡಿ ಎತ್ತರದ ಕಿರಿದಾದ ಸುರಂಗಗಳನ್ನು ಅಗೆಯುವುದನ್ನು ಒಳಗೊಂಡಿರುತ್ತದೆ. ಸುಪ್ರೀಂ ಕೋರ್ಟ್ ನಂತರ ನಿಷೇಧವನ್ನು ಎತ್ತಿಹಿಡಿದಿದ್ದು, ಸೂಕ್ತವಾದ ಪರಿಸರ ಸುರಕ್ಷತೆಗಳೊಂದಿಗೆ ವೈಜ್ಞಾನಿಕ ಮತ್ತು ನಿಯಂತ್ರಿತ ಕಾರ್ಯವಿಧಾನಗಳ ಮೂಲಕ ಮಾತ್ರ ಕಲ್ಲಿದ್ದಲು ಗಣಿಗಾರಿಕೆಗೆ ಅವಕಾಶ ನೀಡಿತ್ತು,(ಏಜನ್ಸೀಸ್​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net