ಮಾತುಬಾರದ ಹುಡುಗಿ ಗರ್ಭಿಣಿಯಾದದ್ದು ಹೇಗೆ? ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಜನ್ಮದಾತನ ಕ್ರೌರ್ಯ! Pregnant

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಮಾತು ಬಾರದ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ
  • ಮುಂಬೈನಲ್ಲಿ ನಡೆದಿರುವ ಪೈಶಾಚಿಕ ಘಟನೆ
  • 20 ವರ್ಷದ ಹುಡುಗಿಯ ಮೇಲೆ 17 ಜನರಿಂದ ನಿರಂತರ ದೌರ್ಜನ್ಯ
ಮುಂಬೈ: ನಮ್ಮ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವೇನು ಹೊಸ ವಿಷಯವಲ್ಲ. ಆದರೆ ಮಾತನಾಡಲು ಬಾರದ, ಕಿವಿ ಕೇಳಿಸದ ಮಗಳ ಮೇಲೆ ಸ್ವತಃ ತಂದೆಯೇ ಅತ್ಯಾಚಾರ ಗೈದ ಪೈಶಾಚಿಕ ಘಟನೆ ಮುಂಬೈನಲ್ಲಿ ವರದಿಯಾಗಿದೆ. 20 ವರ್ಷದ ಮೂಕ ಮತ್ತು ಕಿವುಡ ಯುವತಿಯ ಮೇಲೆ ಆಕೆಯ ಜನ್ಮದಾತ ತಂದೆಯೇ ಸತತವಾಗಿ ಅತ್ಯಾಚಾರವೆಸಗಿ ಆಕೆಯನ್ನು ಗರ್ಭಿಣಿ (Pregnant) ಮಾಡಿದ ಪೈಶಾಚಿಕ ಕೃತ್ಯ ಈಗ ಬಯಲಿಗೆ ಬಂದಿದೆ.

ಹೊಟ್ಟೆಯಲ್ಲಿ 'ಹುಳು' ಎಂದು ಸನ್ನೆ ಮಾಡಿದ್ದಳು ಆ ಹುಡುಗಿ!

ಈ ಘಟನೆಯ ಭೀಕರತೆ ಸಮಾಜವೇ ತಲೆತಗ್ಗಿಸುವಂತಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಆ ಯುವತಿಗೆ ಹೊಟ್ಟೆಯಲ್ಲಿ ಏನೋ ಅಸ್ವಸ್ಥತೆ ಕಾಣಿಸಿಕೊಂಡಿತ್ತು. ತನಗೆ ಸಂಕಟವಾಗುತ್ತಿರುವುದನ್ನು ಅಜ್ಜಿಗೆ ತಿಳಿಸಲು ಹರಸಾಹಸ ಪಟ್ಟ ಆಕೆ, ಕೈ ಸನ್ನೆಗಳ ಮೂಲಕ ತನ್ನ ನೋವನ್ನು ವಿವರಿಸಿದ್ದಳು. ತನ್ನ ಹೊಟ್ಟೆಯಲ್ಲಿ ಏನೋ "ಹುಳುಗಳು ತೆವಳುತ್ತಿವೆ" ಎಂದು ಆಕೆ ತನ್ನ ಮುಗ್ಧ ಭಾಷೆಯಲ್ಲಿ ಹೇಳಿದ್ದಳು. ಮೊಮ್ಮಗಳ ಸಂಕಟ ನೋಡಲಾರದೆ ಅಜ್ಜಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಮುಂಬೈನ ಕಾಮಾ ಮತ್ತು ಆಲ್ಬ್ಲೆಸ್ ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿದಾಗ ಕಂಡ ದೃಶ್ಯ ಅವರನ್ನೂ ಬೆಚ್ಚಿಬೀಳಿಸಿತ್ತು. ಆ ಯುವತಿ ಆಗಲೇ ಐದು ತಿಂಗಳ ಗರ್ಭಿಣಿಯಾಗಿದ್ದಳು.

ತನಿಖೆಯ ಹಾದಿಯಲ್ಲಿ ಎದುರಾದ ಸವಾಲುಗಳು

ಮಾತು ಬಾರದ, ಕಿವಿ ಕೇಳದ ಆ ಯುವತಿಯಿಂದ ಮಾಹಿತಿ ಪಡೆಯುವುದು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಆರಂಭದಲ್ಲಿ ಆಕೆ ಏನನ್ನೂ ಹೇಳಲು ಸಿದ್ಧವಿರಲಿಲ್ಲ. ಆಕೆಯ ತಂದೆಯನ್ನು ವಿಚಾರಿಸಿದಾಗ, ನನಗೆ ಏನೂ ಗೊತ್ತಿಲ್ಲ, ಅವಳು ಹೇಗೆ ಗರ್ಭಿಣಿಯಾದಳು ಎಂಬುದು ನನಗೂ ಅಚ್ಚರಿ ಎಂದು ನಟಿಸಿದ್ದ. ಅಷ್ಟೇ ಅಲ್ಲದೆ, ದೂರು ದಾಖಲಿಸಲು ಕೂಡ ಆತ ನಿರಾಕರಿಸಿದ್ದ. ಆದರೆ ಪೊಲೀಸರು ಬಿಡಲಿಲ್ಲ. ಯುವತಿಗೆ ಸೂಕ್ತ ಕೌನ್ಸಿಲಿಂಗ್ ನೀಡಿದ ನಂತರ, ಆಕೆ ಸನ್ನೆಗಳ ಮೂಲಕ ತನ್ನ ಮೇಲೆ ನಡೆದ ದೌರ್ಜನ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಳು. ಆಕೆ ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಮೊದಲಿಗೆ ಆಕೆಯ ನೆರೆಹೊರೆಯಲ್ಲಿದ್ದ ಒಬ್ಬ ವ್ಯಕ್ತಿ ಮತ್ತು ಒಬ್ಬ ಅಪ್ರಾಪ್ತ ಬಾಲಕನನ್ನು ಬಂಧಿಸಿದ್ದರು. ಆದರೆ ಪೊಲೀಸರಿಗೆ ಅನುಮಾನ ಇನ್ನೂ ಹಾಗೆಯೇ ಇತ್ತು.

17 ಶಂಕಿತರು ಮತ್ತು ಬಯಲಾದ ಸತ್ಯ!

ಪೊಲೀಸರು ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ನಿರ್ಧರಿಸಿದರು. ಅವರು ಆ ಯುವತಿಯ ತಂದೆ ಸೇರಿದಂತೆ ಒಟ್ಟು 17 ಶಂಕಿತರ ಡಿಎನ್‌ಎ (DNA) ಮತ್ತು ರಕ್ತದ ಮಾದರಿಗಳನ್ನು ಸಂಗ್ರಹಿಸಿದರು. ಯುವತಿಯ ಭ್ರೂಣದ ಮಾದರಿಯೊಂದಿಗೆ ಈ 17 ಜನರ ಡಿಎನ್‌ಎ ಹೋಲಿಕೆ ಮಾಡಲಾಯಿತು.
ಜನವರಿ 27 ರಂದು ಬಂದ ಆ ವರದಿ ಇಡೀ ಪೊಲೀಸ್ ಇಲಾಖೆಯನ್ನು ಸ್ತಬ್ಧಗೊಳಿಸಿತ್ತು. ಅಲ್ಲಿ ಯುವತಿಯ ಗರ್ಭದಲ್ಲಿದ್ದ ಭ್ರೂಣದ ಡಿಎನ್‌ಎ ಜೊತೆ ಸರಿಯಾಗಿ ಹೋಲಿಕೆ ಆಗಿದ್ದು ಬೇರೆ ಯಾರೂ ಅಲ್ಲ, ಸ್ವತಃ ಆಕೆಯ ತಂದೆಯ ಡಿಎನ್​ಎ ಮ್ಯಾಚ್​ ಆಗಿದೆ. ಮಗಳನ್ನು ಕಣ್ಣಿನ ರೆಪ್ಪೆಯಂತೆ ಕಾಪಾಡಬೇಕಾದ ತಂದೆಯೇ ಕಳೆದ ವರ್ಷ ಮಾರ್ಚ್ ಮತ್ತು ಸೆಪ್ಟೆಂಬರ್ ಅವಧಿಯಲ್ಲಿ ಪದೇ ಪದೇ ಆಕೆಯ ಮೇಲೆ ಹಲ್ಲೆ ನಡೆಸಿ ಈ ಪಾಪ ಕೃತ್ಯ ಎಸಗಿದ್ದ ಎಂದು ತನಿಖೆಯಲ್ಲಿ ತಿಳಿಸುಬಂದಿದೆ.

ಸಮಾಜ ಎತ್ತ ಸಾಗುತ್ತಿದೆ?

ಈ ಪ್ರಕರಣವು ಕೇವಲ ಒಂದು ಕ್ರೈಮ್ ಸುದ್ದಿಯಲ್ಲ, ಇದು ಸಮಾಜದ ನೈತಿಕ ಅಧಃಪತನದ ದ್ಯೋತಕ. ಮಾತನಾಡಲು ಅಸಮರ್ಥಳಾದ ಮಗಳ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡ ಈ 'ಕಾಮುಕ' ತಂದೆಯನ್ನು ಪೊಲೀಸರು ಈಗ ಅಂಧೇರಿ ಜೈಲಿಗಟ್ಟಿದ್ದಾರೆ. ಪೊಲೀಸರು ಮೊದಲು ಬಂಧಿಸಿದ್ದ ಇತರ ಇಬ್ಬರ ಪಾತ್ರದ ಬಗ್ಗೆಯೂ ತನಿಖೆ ಮುಂದುವರೆದಿದೆ. ತನ್ನ ಹೊಟ್ಟೆಯಲ್ಲಿ 'ಜೀವ' ಬೆಳೆಯುತ್ತಿರುವುದನ್ನು 'ಹುಳು' ಎಂದು ಭಾವಿಸಿದ್ದ ಆ ಮುಗ್ಧ ಜೀವಕ್ಕೆ ನ್ಯಾಯ ಸಿಗಲಿ ಎಂಬುದು ಈಗ ಎಲ್ಲರ ಆಶಯವಾಗಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net